Advertisement
ಮಂಗಳವಾರ ಜರಗಿದ ಮಂಗಳೂರು ಮಹಾ ನಗರ ಪಾಲಿಕೆಯ ಸಾಮಾನ್ಯಸಭೆಯಲ್ಲಿ ನೀರಿನ ಬಿಲ್‌ನಲ್ಲಿ ಆಗಿರುವ ವ್ಯತ್ಯಾಸದಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಯ ಕುರಿತು ಸದಸ್ಯರು ಪ್ರಸ್ತಾವಿಸಿದರು. ಈ ಬಗ್ಗೆ ಚರ್ಚೆ ನಡೆದ ಅನಂತರ ಮೇಯರ್ ಅವರು ಅದಾಲತ್ ನಡೆಸುವ ನಿರ್ಧಾರ ಪ್ರಕಟಿಸಿದರು. ವಿಪಕ್ಷದ ಸದಸ್ಯ ನವೀನ್ ಡಿ’ಸೋಜಾ ಅವರು ವಿಷಯ ಪ್ರಸ್ತಾವಿಸಿ, ಕುಡಿಯುವ ನೀರಿನ ಬಿಲ್‌ನಲ್ಲಿ ವ್ಯತ್ಯಾಸವಾಗುವ ಸಮಸ್ಯೆ ಹಲವು ವರ್ಷಗಳಿಂದ ಇದೆ. ಒಮ್ಮೆ ಗ್ರಾಹಕರಿಗೆ ಭಾರೀ ಮೊತ್ತದ ಬಿಲ್ ಕಳುಹಿಸಲಾಗುತ್ತದೆ. ಅನಂತರ ಅಧಿಕಾರಿ/ ಸಿಬಂದಿ ಆ ಬಿಲ್ ಮೊತ್ತವನ್ನು ಕಡಿಮೆ ಮಾಡುತ್ತಾರೆ. ಪ್ರಭಾವ ಇರುವವರ ಬಿಲ್ ಮೊತ್ತ ಕಡಿಮೆ ಮಾಡಲಾಗುತ್ತಿದೆ. ಜನಸಾಮಾನ್ಯರ ಬಿಲ್ ಮೊತ್ತ ಕಡಿಮೆ ಮಾಡುತ್ತಿಲ್ಲ ಎಂದು ದೂರಿದರು. ಇದಕ್ಕೆ ದನಿಗೂಡಿಸಿದ ಶಶಿಧರ್ ಹೆಗ್ಡೆ ಅವರು, ವಾಸ್ತವ್ಯ ಮನೆಗಳಿಗೆ ಸಾಮಾನ್ಯವಾಗಿ 200ರಿಂದ 300 ರೂ. ಬರುತ್ತಿದ್ದ ನೀರಿನ ಬಿಲ್ ಈಗ 3ರಿಂದ 4 ಸಾವಿರ ರೂ. ದಷ್ಟು ಬರುತ್ತಿದೆ. ಬಡ, ಮಧ್ಯಮವರ್ಗದವರಿಗೆ ಭಾರೀ ಹೊರೆಯಾಗಿದೆ ಎಂದರು.
ನೀರಿನ ಬಿಲ್‌ಗೆ ಸಂಬಂಧಿಸಿ ಈ ಹಿಂದೆ ಅದಾಲತ್ ನಡೆಯುತ್ತಿತ್ತು. ಅದನ್ನು ಪುನರಾರಂಭಿಸಬೇಕು ಎಂದು ಲ್ಯಾನ್ಸಿಲಾಟ್ ಪಿಂಟೋ ಸಲಹೆ ನೀಡಿದರು. ಆಡಳಿತ ಪಕ್ಷದ ಸುಧೀರ್ ಶೆಟ್ಟಿ ಮಾತನಾಡಿ, ಪ್ರಸ್ತುತ 3-4 ತಿಂಗಳಿಗಳಿಗೊಮ್ಮೆ ನೀರಿನ ಬಿಲ್ ನೀಡಲಾಗುತ್ತಿದೆ. ಇದನ್ನು ಕನಿಷ್ಠ 2 ತಿಂಗಳಿಗೊಮ್ಮೆಯಾದರೂ ನೀಡಬೇಕು. ಅದಾಲತ್ ನಡೆಸಿ ಗೊಂದಲ ಪರಿಹರಿಸಬೇಕು, 60 ವಾರ್ಡ್‌ಗಳಿಗೆ ಒಬ್ಬರೇ ಮೀಟರ್ ಇನ್‌ಸ್ಪೆಕ್ಟರ್ ಇರುವುದರಿಂದಲೂ ಸಮಸ್ಯೆಯಾಗಿದೆ. ಕನಿಷ್ಠ 4 ಮಂದಿ ಮೀಟರ್ ಇನ್‌ಸ್ಪೆಕ್ಟರ್‌ಗಳಾದರೂ ಬೇಕು ಎಂದರು. ಆದಾಯ ಸಂಗ್ರಹದಲ್ಲಿ ವೈಫಲ್ಯ
ಪಾಲಿಕೆಯಲ್ಲಿ ಆಸ್ತಿ ತೆರಿಗೆ ಶೇ.28.48 ಮತ್ತು ಜಾಹೀರಾತು ತೆರಿಗೆ ಶೇ.3.98 ಮಾತ್ರ ಸಂಗ್ರಹಿಸಲಾಗಿದೆ. ಈ ವಿಚಾರದಲ್ಲಿ ಕಂದಾಯ ವಿಭಾಗ ವಿಫಲವಾಗಿದೆ. ಜನರಲ್ ಕಾಮಗಾರಿಯ 70 ಕೋ.ರೂ.ಬಿಲ್ ಪಾವತಿ ಬಾಕಿ ಇದೆ. ಗುತ್ತಿಗೆದಾರರು ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಪಾಲಿಕೆಯ ಖಾತೆಯಲ್ಲಿ ನೀರಿನ ಬಿಲ್ ಮೊತ್ತ ಸುಮಾರು 4 ಕೋ.ರೂ. ಹೊರತುಪಡಿಸಿದರೆ ಬೇರೆ ಅನುದಾನವಿಲ್ಲ. ಪಾಲಿಕೆ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ವಿಪಕ್ಷದ ವಿನಯ್‌ರಾಜ್ ಆರೋಪಿಸಿದರು. ಈ ಸಂದರ್ಭ ಆಡಳಿತ ಮತ್ತು ವಿಪಕ್ಷದ ನಡುವೆ ಮಾತಿನ ಚಕಮಕಿ ಉಂಟಾಗಿ ಗದ್ದಲವೇರ್ಪಟ್ಟಿತು. “ರಾಜಕೀಯ ಪ್ರೇರಿತ ಮಾತುಗಳನ್ನು ಆಡಬಾರದು’ ಎಂದು ಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಹೇಳಿದರು. ಈ ಸಂದರ್ಭದಲ್ಲಿ ವಿಪಕ್ಷ ಸದಸ್ಯರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಮೇಯರ್ ಅವರು, “ನಾವು ಅಧಿಕಾರಕ್ಕೆ ಬರುವಾಗ ಪಾಲಿಕೆಯಲ್ಲಿ ಎಷ್ಟು ಆದಾಯವಿತ್ತು, ಎಷ್ಟು ಸಾಲವಿತ್ತು, ಗುತ್ತಿಗೆದಾರರಿಗೆ ಪಾವತಿ ಎಷ್ಟು ಬಾಕಿ ಇತ್ತು ಎಂಬ ಮಾಹಿತಿ ನೀಡುತ್ತೇವೆ’ ಎಂದರು.
Related Articles
Advertisement
ಬಾವಿ ಉಳಿಸಿಹಂಪನಕಟ್ಟೆಯಲ್ಲಿ ಪತ್ತೆಯಾಗಿರುವ ಐತಿಹಾಸಿಕ ಬಾವಿಯನ್ನು ಉಳಿಸಿ ಅದನ್ನು ಅಪ್ಪಣ್ಣ ಕಟ್ಟೆ ಬಾವಿ ಎಂದು ನಾಮಕರಣ ಮಾಡಬೇಕು ಎಂದು ವಿನಯ್‌ರಾಜ್ ಸಲಹೆ ನೀಡಿದರು. ಈ ಬಗ್ಗೆ ಅಧಿಕಾರಿ ಗಳಿಗೆ ಸೂಚಿಸಲಾಗಿದೆ ಎಂದು ಮೇಯರ್ ಪ್ರತಿಕ್ರಿಯಿಸಿದರು. ಅಕ್ರಮ ಕಟ್ಟಡ ನೆಲಸಮಗೊಳಿಸಿ
ಪಚ್ಚನಾಡಿಯಲ್ಲಿ ಪೌರ ಕಾರ್ಮಿಕರಿಗಾಗಿ ಮೀಸಲಿಟ್ಟ ಜಾಗವನ್ನು ಅತಿಕ್ರಮಿಸಿ ಕಟ್ಟಡ ನಿರ್ಮಿಸಲಾಗುತ್ತಿದ್ದರೂ ಪಾಲಿಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅನಿಲ್ ಕುಮಾರ್, ಅಬ್ದುಲ್ ರವೂಫ್ ದೂರಿದರು. ಸದಸ್ಯೆ ಸಂಗೀತಾ ಆರ್. ನಾಯಕ್ ಮಾತನಾಡಿ, “ಈ ಹಿಂದೆ ಕೂಡ ನಿಯಮವನ್ನು ಉಲ್ಲಂ ಸಿ ಮನೆಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ಕೂಡ ತೆರವು ಮಾಡಬೇಕೆಂಬುದು ವಿಪಕ್ಷ ಸದಸ್ಯರ ಬೇಡಿಕೆಯೆ?’ ಎಂದು ಪ್ರಶ್ನಿಸಿದರು. ಮೇಯರ್ ಅವರು ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮವನ್ನು ಪ್ರೋತ್ಸಾಹಿಸುವುದಿಲ್ಲ. ಆದರೆ ಈ ಹಿಂದೆ ಆಗಿರುವ ಅಕ್ರಮ ಕಟ್ಟಡಗಳನ್ನು ಕೂಡ ನೆಲಸಮಗೊಳಿಸಬಹುದೇ?’ ಎಂದು ಪ್ರಶ್ನಿಸಿದರು. ಉಪಮೇಯರ್ ಜಾನಕಿ ಯಾನೆ ವೇದಾವತಿ, ಸ್ಥಾಯೀ ಸಮಿತಿಗಳ ಅಧ್ಯಕ್ಷರಾದ ಶರತ್ ಕುಮಾರ್, ಪೂರ್ಣಿಮಾ, ಕಿರಣ್ ಕುಮಾರ್ ಉಪಸ್ಥಿತರಿದ್ದರು. ಶುದ್ಧೀಕರಿಸದ ನೀರು ಪೂರೈಕೆ: ಎಂಜಿನಿಯರ್‌ಗೆ ನೋಟಿಸ್
ಜೂ. 20ರ ಅನಂತರ ಎರಡೂವರೆ ತಿಂಗಳ ಕಾಲ ಸಮರ್ಪಕವಾಗಿ ಶುದ್ಧೀಕರಿಸದೆ ನೀರು ಪೂರೈಕೆ ಮಾಡಿರುವ ಬಗ್ಗೆ ಮತ್ತೂಮ್ಮೆ ಸದನದಲ್ಲಿ ಪ್ರಸ್ತಾವವಾಯಿತು. ವಿಪಕ್ಷ ನಾಯಕ ಅಬ್ದುಲ್ ರವೂಫ್ ಮತ್ತು ಶಶಿಧರ ಹೆಗ್ಡೆ ಮಾತನಾಡಿ, ಶುದ್ಧೀಕರಿಸದ ನೀರನ್ನು ಪೂರೈಕೆ ಮಾಡಲಾಗಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಆತಂಕವಿದೆ. ಪಾಲಿಕೆ ವರದಿ ನೀಡಬೇಕು’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು “ಅಧಿಕಾರಿಗಳಿಂದ ಲೋಪ ಆಗಿರುವುದು ಹೌದು. ಆದರೆ ಪೂರೈಕೆಯಾದ ನೀರಿನಿಂದ ಆರೋಗ್ಯಕ್ಕೆ ತೊಂದರೆ ಇಲ್ಲ ಎಂದು ಆರೋಗ್ಯಾಧಿಕಾರಿಗಳು ವರದಿ ನೀಡಿದ್ದಾರೆ. ನಿರ್ಲಕ್ಷ್ಯ ವಹಿಸಿರುವ ಹಿನ್ನೆಲೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಶೋಕಾಸ್ ನೋಟೀಸ್ ನೀಡಲಾಗಿದೆ’ ಎಂದರು. 25 ಲ.ರೂ.ಅನುದಾನ
ರಸ್ತೆ, ಚರಂಡಿ ಅಭಿವೃದ್ಧಿ, ನೀರು ಪೂರೈಕೆ, ದಾರಿದೀಪ ಕಾಮಗಾರಿಗಳಿಗೆ ಪಾಲಿಕೆಯ ಎಲ್ಲ ವಾರ್ಡ್‌ಗಳ ಸದಸ್ಯರಿಗೆ ತಲಾ 25 ಲ.ರೂ. ಅನುದಾನ ಒದಗಿಸುವುದಾಗಿ ಮೇಯರ್ ಘೋಷಿಸಿದರು. ಕೊರೊನಾ ಸಂಕಷ್ಟದಲ್ಲಿ ಅಗತ್ಯ ಕೆಲಸಗಳಿಗೆ ಅನು ದಾನ ಒದಗಿಸಿರುವುದು ಶ್ಲಾಘನೀಯ ಎಂದು ಪ್ರೇಮಾನಂದ ಶೆಟ್ಟಿ ಹೇಳಿದರು. 25 ಲ.ರೂ. ಏನೇನೂ ಸಾಲದು ಎಂದು ಭಾಸ್ಕರ ಕೆ. ಅಸಮಾಧಾನ ವ್ಯಕ್ತಪಡಿಸಿದರು. ವೃತ್ತ ನಾಮಕರಣ ತೀರ್ಮಾನ: ಸ್ಥಾಯೀ ಸಮಿತಿಗೆ
ಸಭೆಯಲ್ಲಿ ಲೇಡಿಹಿಲ್ ನೂತನ ವೃತ್ತಕ್ಕೆ “ನಾರಾಯಣ ಗುರು ವೃತ್ತ’ ಎಂದು ನಾಮಕರಣ ಮಾಡುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಮಂಡಿಸಲಾಯಿತು. ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಕ್ಕಾಗಿ ನಿಯಮದಂತೆ ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯೀ ಸಮಿತಿಗೆ ವರದಿಗಾಗಿ ಕಳುಹಿಸಲಾಯಿತು.