ಕಲಬುರಗಿ: ಸಿನಿಮಾ ಅತ್ಯಂತ ಪ್ರಭಾವಶಾಲಿ ಮಾಧ್ಯಮವಾಗಿದ್ದು, ಸಮಾಜದ ಪ್ರತಿಬಿಂಬದಂತಿರುವ ಚಲನಚಿತ್ರಗಳು ಸದಭಿರುಚಿಯಿಂದ ಕೂಡಿದರೆ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಾಯವಾಗುತ್ತವೆ ಎಂದು ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್ ತಿಳಿಸಿದರು.
ಶುಕ್ರವಾರ ನಗರದ ಸಂಗಮ ಚಿತ್ರಮಂದಿರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾ ಆಡಳಿತದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ವಿಜೇತ ಚಿತ್ರಗಳ ಸಂಭ್ರಮ ಹಾಗೂ ಕನ್ನಡ ಚಲನ ಚಿತ್ರೋತ್ಸವ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿಂದಿನ ಪರಂಪರೆಯನ್ನು ಈಗಿನ ಯುವ ಜನಾಂಗ ಅರ್ಥಮಾಡಿಕೊಳ್ಳಲು ಚಲನಚಿತ್ರಗಳು ಸಹಾಯಕಾರಿಯಾಗಿವೆ. ಭಾರತದ ಅದರಲ್ಲೂ ವಿಶೇಷವಾಗಿ ಕರ್ನಾಟಕದ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಸಿನಿಮಾಗಳನ್ನು ಯುವ ಜನರು ವೀಕ್ಷಿಸಿ ಅರ್ಥೈಸಿಕೊಳ್ಳಬೇಕು ಎಂದರು.
ಸಿನಿಮಾಗಳಿಂದ ನೈತಿಕ ಮೌಲ್ಯ ಕುಸಿಯಬಾರದು. ಹಿಂದಿನ ಜನಾಂಗಗಳು ಬದುಕಿದ ರೀತಿ ನೀತಿಯನ್ನು, ಆಹಾರ-ವಿಹಾರ, ಆಚಾರ-ವಿಚಾರ ಮುಂತಾದವನ್ನು ಇಂದಿನ ಜನಾಂಗಕ್ಕೆ ಪರಿಚಯಿಸುವ ಕಾರ್ಯವನ್ನು ಸಿನಿಮಾಗಳು ಮಾಡುತ್ತವೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಜಿ. ಚಂದ್ರಕಾಂತ ಅಧ್ಯಕ್ಷತೆ ವಹಿಸಿ, ಚಿತ್ರೋತ್ಸವ ಸಪ್ತಾಹದ ಅಂಗವಾಗಿ ಸಂಗಮ ಸಿನಿಮಾ ಮಂದಿರದಲ್ಲಿ ಜ. 28 ರಂದು ಶಿವಯೋಗಿ ಶ್ರೀ ಪುಟ್ಟಯ್ಯಜ್ಜ, ಜ. 29ರಂದು ತಿಥಿ, ಜ. 30ರಂದು ಕೃಷ್ಣಲಿಲಾ, ಜ. 31ರಂದು ರಂಗಿ ತರಂಗ ಫೆ. 1ರಂದು ತಿಥಿ ಮತ್ತು ಫೆ. 2ರಂದು ಮೈತ್ರಿ ಚಲನಚಿತ್ರಗಳನ್ನು ಪ್ರತಿದಿನ ಬೆಳಗ್ಗೆ 11:00 ರಿಂದ ಮಧ್ಯಾಹ್ನ 1:30 ಗಂಟೆಯವರೆಗೆ ಪ್ರದರ್ಶಿಸಲಾಗುವುದು.
ಸಾರ್ವಜನಿಕರಿಗೆ ಈ ಚಲನಚಿತ್ರಗಳ ವೀಕ್ಷಣೆಗೆ ಉಚಿತ ಪ್ರವೇಶಾವಕಾಶವಿದೆ ಎಂದರು. ಚೌಕ್ ಪೊಲೀಸ್ ಠಾಣೆ ಎಎಸ್‌ಐ ಮಲ್ಲಿಕಾರ್ಜುನ ಪಂಚಕಟ್ಟಿ, ಸಂಗಮ ಚಿತ್ರಮಂದಿರದ ವ್ಯವಸ್ಥಾಪಕ ಮಾಣಿಕರಾವ ದೇವಣಿ ಪಾಲ್ಗೊಂಡಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಪ್ಪಣ್ಣ ಸಿರಸಗಿ ಸ್ವಾಗತಿಸಿದರು. ಚಲನಚಿತ್ರೋತ್ಸವ ಸಪ್ತಾಹದ ಮೊದಲನೇ ದಿನ “ಮೈತ್ರಿ’ ಚಲನಚಿತ್ರ ಪ್ರದರ್ಶಿಸಲಾಯಿತು.