ರಾಜಸ್ಥಾನ: ಪವರ್ ಪ್ಲೇ ಓವರ್‌ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ನಾಯಕ ಕೆಎಲ್ ರಾಹುಲ್ ಅವರ ಕಳಪೆ ಸ್ಟ್ರೈಕ್ ರೇಟ್ ಬಗ್ಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ 32 ಎಸೆತದಲ್ಲಿ 39 ರನ್ ಮಾಡಿದ್ದರು. ಅದರಲ್ಲೂ ಪವರ್ ಪ್ಲೇ ಓವರ್ ನಲ್ಲಿ ಕೇವಲ 19 ರನ್ ಮಾಡಿದ್ದರು. ಅದರಲ್ಲೂ ರಾಹುಲ್ 6 ಮತ್ತು 12 ರನ್ ಗಳಿಸಿದ್ದಾಗ ಅವರ ಕ್ಯಾಚ್ ಗಳನ್ನು ಕೈಚೆಲ್ಲಲಾಗಿತ್ತು.
ಇಲ್ಲಿಯವರೆಗೆ ಐಪಿಎಲ್ 2023 ರಲ್ಲಿ ಎಲ್ ಸಿಜಿ ನಾಯಕ ಮೊದಲ ಆರು ಪಂದ್ಯಗಳಲ್ಲಿ 114.79 ರ ಕಡಿಮೆ ಸ್ಟ್ರೈಕ್ ರೇಟ್‌ನಲ್ಲಿ 194 ರನ್ ಗಳಿಸಿದ್ದಾರೆ. 2022ರ ಸೀಸನ್ ನಲ್ಲೂ 109ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದರು.
ರಾಜಸ್ಥಾನ- ಲಕ್ನೋ ಪಂದ್ಯದಲ್ಲಿ ವೀಕ್ಷಕ ವಿವರಣೆ ಮಾಡುತ್ತಿದ್ದ ಕೆವಿನ್ ಪೀಟರ್ಸನ್ ಅವರು ರಾಹುಲ್ ವಿರುದ್ಧ ಕಿಡಿಕಾರಿದ್ದಾರೆ. “ ಪವರ್ ಪ್ಲೇನಲ್ಲಿ ರಾಹುಲ್ ಬ್ಯಾಟಿಂಗ್ ನೋಡುವುದು ಅತ್ಯಂತ ಬೇಜಾರಿನ ವಿಚಾರ” ಎಂದಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 154 ರನ್ ಮಾಡಿದ್ದರೆ, ರಾಜಸ್ಥಾನ ರಾಯಲ್ಸ್ ತಂಡವು 144 ರನ್ ಮಾತ್ರ ಗಳಿಸಿತು.