Advertisement
ರಾಜಸ್ಥಾನ ಮೂಲದ ನಿವಾಸಿ ದೇವಾಂಶ್ ಎಂಟು ತಿಂಗಳ ಹಿಂದೆ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದು, ನಗರದಲ್ಲಿರುವ ಸಹೋದರಿಯ ಮನೆಯಲ್ಲಿ ವಾಸವಿದ್ದ. ಖಾಸಗಿ ಕಾಲೇಜಿನಲ್ಲಿ ಮೊದಲನೇ ವರ್ಷದ ಡಿಸೈನಿಂಗ್ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ. ಆದರೆ, ಆಧ್ಯಾತ್ಮದ ಬಗ್ಗೆ ಹೆಚ್ಚು ಒಲವಿದ್ದ ಈತ, ಈ ಕುರಿತು ಚಲನಚಿತ್ರಗಳನ್ನು ನೋಡುತ್ತಿದ್ದ. ಅದರಲ್ಲೂ ಮಸಾನ್ ಸಿನಿಮಾ ನೋಡಿ ಹೆಚ್ಚು ಪ್ರಭಾವಿತನಾಗಿದ್ದ ದೇವಾಂಶ್, ಸಿನಿಮಾದಲ್ಲಿ ಬರುವ ಹರಿದ್ವಾರ ಹಾಗೂ ವಾರಣಾಸಿಯಲ್ಲಿರುವ ಸನ್ಯಾಸಿಗಳ ಜೀವನವನ್ನು ಅನುಸರಿಸಲು ನಿರ್ಧರಿಸಿದ್ದ ಎಂದು ಪೊಲೀಸರು ಹೇಳಿದರು.
Related Articles
Advertisement
ಅಲ್ಲದೆ, ಮನೆಯಿಂದ ಹೊರಡುವ ಹಿಂದಿನ ದಿನ ಮಸಾನ್ ಸಿನಿಮಾವನ್ನು ಎರಡು ಬಾರಿ ವೀಕ್ಷಿಸಿದ್ದ ವಿಚಾರ ಬೆಳಕಿಗೆ ಬಂದಿತ್ತು. ಜತೆಗೆ ಸನ್ಯಾಸತ್ವದ ಕುರಿತು ಈತ ಕೆಲ ಮಾಹಿತಿ ಶೋಧಿಸಿರುವುದು, ವಾರಣಾಸಿಯಲ್ಲಿ ಯಾವ ರೀತಿ ಸನ್ಯಾಸಿಗಳು ಇರುತ್ತಾರೆ ಮತ್ತು ಅವರು ಹೇಗಿರುತ್ತಾರೆ ಎಂಬುದರ ಬಗ್ಗೆಯೂ ಮಾಹಿತಿ ಪಡೆದುಕೊಂಡಿರುವ ಅಂಶ ಕಂಡು ಬಂದಿತ್ತು ಎಂದು ಪೊಲೀಸರು ಹೇಳಿದರು.
ಸಿಸಿ ಕ್ಯಾಮೆರಾ ಸುಳಿವು: ಈತ ನಾಪತ್ತೆಯಾದ ದಿನ ಮತ್ತು ಅವಧಿಯ ಆಧಾರದ ಮೇಲೆ ನಗರದ ರೈಲ್ವೆ ನಿಲ್ದಾಣದಲ್ಲಿದ್ದ ಎಲ್ಲ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಯಿತು. ಆಗ ಜ.18ರಂದು ಸಂಜೆ 5.20ರಲ್ಲಿ ದೇವಾಂಶ್ ದೆಹಲಿಗೆ ಮಾರ್ಗವಾಗಿ ವಾರಣಾಸಿಗೆ ತೆರಳುವ ರೈಲಿನಲ್ಲಿ ಹೊರಟಿರುವುದು ಸೆರೆಯಾಗಿತ್ತು. ಕೂಡಲೇ ಗೋವಾ, ದೆಹಲಿ ಮತ್ತು ವಾರಣಾಸಿ ರೈಲ್ವೆ ಪೊಲೀಸರಿಗೆ ಈತನ ಫೋಟೋಗಳನ್ನು ಕಳುಹಿಸಿ ಪತ್ತೆಗೆ ಸಹಕಾರ ನೀಡುವಂತೆ ಕೇಳಿಕೊಳ್ಳಲಾಗಿತ್ತು.
ನಂತರ ದೆಹಲಿಯಲ್ಲಿರುವ ಆತನ ಸಂಬಂಧಿಕರನ್ನೂ ಸಂಪರ್ಕಿಸಲಾಗಿತ್ತು. ಜ.21ರಂದು ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ರೈಲಿನಲ್ಲಿ ದೇವಾಂಶ್‌ನನ್ನು ದೆಹಲಿ ರೈಲ್ವೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಆತನನ್ನು ನಗರಕ್ಕೆ ಕರೆತಂದು ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಬಂಡೆಪಾಳ್ಯ ಪೊಲೀಸರು ಹೇಳಿದರು.
ಗಾಂಜಾ ಸೇವನೆ: ತನಿಖೆ ವೇಳೆ ದೇವಾಂಶ್ ಸ್ನೇಹಿತರನ್ನು ವಿಚಾರಣೆಗೊಳಪಡಿಸಿದಾಗ ಆತ ಮಾದಕ ವಸ್ತು ಗಾಂಜಾ ಸೇವನೆ ಮಾಡುತ್ತಿದ್ದ ಎಂಬ ವಿಚಾರ ಗೊತ್ತಾಗಿದೆ. ಆದರೆ, ಈ ವಿಚಾರ ಮನೆಯವರಿಗೆ ಗೊತ್ತಿರಲಿಲ್ಲ. ಅಲ್ಲದೆ, ಮನೆಯಿಂದ ಹೊರಡುವ ಕೆಲ ದಿನಗಳ ಹಿಂದೆ ತನ್ನ ಡೆಬಿಟ್ ಕಾರ್ಡ್‌ನಲ್ಲಿ ಮೂರು ಸಾವಿರ ರೂ. ಹಣ ಡ್ರಾ ಮಾಡಿಕೊಂಡಿದ್ದಾನೆ. ಆದರೆ, ತನ್ನೊಂದಿಗೆ ಮೊಬೈಲ್, ಡೆಬಿಟ್ ಹಾಗೂ ಕ್ರಿಡಿಟ್ ಕಾರ್ಡ್‌ಗಳನ್ನು ಕೊಂಡೊಯ್ದಿರಲಿಲ್ಲ ಎಂದು ಪೊಲೀಸರು ಹೇಳಿದರು.