ಢಾಕಾ: ಬಾಂಗ್ಲಾದೇಶದ ಟೆಸ್ಟ್ ಹಾಗೂ ಟಿ-20 ತಂಡದ ನಾಯಕ ಶಕಿಬ್ ಅಲ್ ಹಸನ್ ಮತ್ತೆ ತಮ್ಮ ತಾಳ್ಮೆಯನ್ನು ಕಳೆದುಕೊಂಡ ಘಟನೆ ಚಟ್ಟೋಗ್ರಾಮ್‌ನಲ್ಲಿ ನಡೆದಿದೆ.
ಮಾರ್ಚ್ 9 ರಂದು ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಗೆದ್ದ ಬಳಿಕ ಶಕಿಬ್ ಅಲ್ ಹಸನ್ ಕೆಲ ಸಮಯದ ಬಳಿಕ ಜಾಹೀರಾತು ಪ್ರಚಾರದ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾರೆ. ಈ ವೇಳೆ ಶಕಿಬ್ ಸಾಗುವ ಮಾರ್ಗದಲ್ಲಿ ಅನೇಕ ಕ್ರೀಡಾಭಿಮಾನಿಗಳು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದಾರೆ.
ಸಾಕಷ್ಟು ಭದ್ರತೆ ಇದ್ದರೂ ಶಕಿಬ್ ಅವರಿಗೆ ಅಭಿಮಾನಿಗಳ ದಂಡಿನ ನಡುವೆ ಸಾಗಿ ಬರಲು ಕಷ್ಟವಾಗುತ್ತಿತ್ತು. ಕಾರಿನ ಬಳಿ ಬರುವಾಗ ಅಭಿಮಾನಿಯೊಬ್ಬ ಶಕಿಬ್ ಅವರ ಕ್ಯಾಪ್ ತೆಗೆಯಲು ಯತ್ನಿಸಿದ್ದಾನೆ. ಇದಕ್ಕೆ ಗರಂ ಆದ ಶಕಿಬ್ ಜನರ ದಂಡಿನ ನಡುವೆಯೇ ಅಭಿಮಾನಿಗೆ ಕ್ಯಾಪ್ ನಿಂದಲೇ ಎರಡು – ಮೂರು ಬಾರಿ ಹಲ್ಲೆಗೈದಿದ್ದಾರೆ.
ಶಕಿಬ್ ಅವರ ಹಲ್ಲೆಯ ವಿಡಿಯೋ ವೈರಲ್ ಆಗಿದೆ. ಶಕಿಬ್ ಈ ರೀತಿ ತಾಳ್ಮೆ ಕಳೆದುಕೊಂಡಿರುವುದು ಇದೇ ಮೊದಲಲ್ಲ 2021 ರಲ್ಲಿ ಢಾಕಾ ಪ್ರಿಮಿಯರ್ ಲೀಗ್ ವೇಳೆ ಅಂಪೈರ್ ಅವರೊಂದಿಗೆ ಶಕಿಬ್ ವಾಗ್ವಾದಕ್ಕೆ ಇಳಿದು ವಿಕೆಟ್ ನ್ನು ಕಾಲಿನಿಂದು ಒದ್ದು, ಕಿತ್ತು ಬಿಸಾಕಿದ್ದರು. 2019 ರಲ್ಲಿ ಫಿಕ್ಸಿಂಗ್ ನಡೆದ ವರದಿಯನ್ನು ಹೇಳದ ಕಾರಣ ಐಸಿಸಿನಿಂದ ಶಕಿಬ್ 2 ವರ್ಷ ಬ್ಯಾನ್ ಆಗಿದ್ದರು.