ಮೆಕ್ಸಿಕೋ: ನೂರಾರು ವರ್ಷದಿಂದ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯವನ್ನು ದಕ್ಷಿಣ ಮೆಕ್ಸಿಕೋದಲ್ಲಿನ ಸ್ಯಾನ್ ಪೆಡ್ರೊ ಹುಮೆಲುಲಾ ಪಟ್ಟಣದ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ ಅವರು ಹೆಣ್ಣು ಮೊಸಳೆಯನ್ನು ಮದುವೆಯಾಗುವ ಮೂಲಕ ಮುಂದುವರೆಸಿದ್ದಾರೆ.
ಹೌದು. ಕೇಳಲು ವಿಚಿತ್ರವಾದರೂ ಇದು ಸತ್ಯ ಘಟನೆಯೇ ಆಗಿದೆ. ಚೊಂಟಾಲ್ ಮತ್ತು ಹುವಾವೆ ಎಂಬ ಎರಡು ಜನಾಂಗಗಳು ಶಾಂತಿಯನ್ನು ಸ್ಥಾಪಿಸಲು 230 ವರ್ಷಗಳಿಂದ ಪುರುಷ – ಮೊಸಳೆಯ ಮದುವೆ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸರಿಯಾದ ಸಮಯದಲ್ಲಿ ಮಳೆ – ಬೆಳೆ ಆಗದೇ ಇದ್ದರೆ ಭೂಮಿಯ ದೇವತೆಯೆಂದು ನಂಬಲಾಗುವ ಮೊಸಳೆಯನ್ನು ಸ್ಥಳೀಯ ನಾಯಕ ಮೇಯರ್ ಮದುವೆ ಆಗಬೇಕಾಗುತ್ತದೆ. ಹೀಗೆ ಆದರೆ ಮಳೆ – ಬೆಳೆ ಆಗುವುದರ ಜೊತೆ ಸಾಮರಸ್ಯದೊಂದಿಗೆ ಚೊಂಟಾಲ್ ಮತ್ತು ಹುವಾವೆ ಸಂಸ್ಕೃತಿಗಳ ಸಂಗಮವಾಗುತ್ತದೆ ಎಂದು ನಂಬಲಾಗುತ್ತದೆ.
ಮೊಸಳೆಯನ್ನು ರಾಜಕುಮಾರಿ ಹುಡುಗಿಯೆಂದು ನಂಬಲಾಗುತ್ತದೆ. ರಾಜಕುಮಾರಿ ಹುಡುಗಿಯಾದ ಮೊಸಳೆಯನ್ನು ಮೇಯರ್ ಸಂಪ್ರದಾಯದಂತೆ ವಧುವಾಗಿ ಆಯ್ದುಕೊಂಡು ಮದುವೆಯಾಗಿದ್ದಾರೆ. “ನಾವು ಒಬ್ಬರನ್ನೊಬ್ಬರು ಪ್ರೀತಿಸುವ ಕಾರಣ ನಾನು ಜವಾಬ್ದಾರಿಯನ್ನು ಸ್ವೀಕರಿಸುತ್ತೇನೆ. ಅದು ಮುಖ್ಯವಾದುದು. ಪ್ರೀತಿ ಇಲ್ಲದೆ ನೀವು ಮದುವೆಯಾಗಲು ಸಾಧ್ಯವಿಲ್ಲ. ನಾನು ರಾಜಕುಮಾರಿ ಹುಡುಗಿಯೊಂದಿಗೆ ಮದುವೆಗೆ ಒಪ್ಪುತ್ತೇನೆ.” ಎಂದು ಮೇಯರ್ ಹೇಳಿದ್ದಾರೆ.
ಮದುವೆ ಸಂಪ್ರದಾಯಕ್ಕೂ ಮುನ್ನ ಮೊಸಳೆಯನ್ನು ವಧುವಿನಂತೆ ಶೃಂಗಾರಿಸಿಕೊಂಡು ಜನರ ಮನೆ ಮನೆಗೆ ಕರೆದುಕೊಂಡು ಹೋಗಲಾಗುತ್ತದೆ. ಈ ವೇಳೆ ಮೀನುಗಾರರು ಸೇರಿದಂತೆ ಇತರರು ನೃತ್ಯ ಮಾಡುತ್ತಾ ಮೊಸಳೆಯ ಬಳಿ ಉತ್ತಮ ಸಮೃದ್ಧಿ, ಮಳೆ – ಬೆಳೆಗಾಗಿ ಪ್ರಾರ್ಥಿಸುತ್ತಾರೆ.
ಮೇಯರ್ ಸರೀಸೃಪ ವಧುವಿನೊಂದಿಗೆ ನೃತ್ಯ ಮಾಡುತ್ತಾರೆ. ನೆರದಿರುವ ಜನ ಸಂಸ್ಕೃತಿಗಳ ಒಕ್ಕೂಟವನ್ನು ಆಚರಿಸುತ್ತದೆ. ಮೇಯರ್ ವಧು ಮೊಸಳೆಯ ಮೂತಿಗೆ ಮುತ್ತು ಕೊಡುವ ಮೂಲಕ ವಿವಾಹ ಸಮಾರಂಭ ಮುಕ್ತಾಯ ಕಾಣುತ್ತದೆ.