ನಾಸಿಕ್: ಇತ್ತೀಚೆಗೆ ಹುಲಿ, ಚಿರತೆ, ಕರಡಿ ಬಾವಿಗೆ ಬಿದ್ದ ಸುದ್ದಿ ಓದಿರುತ್ತೀರಿ. ಆದರೆ ಕಳೆದ ವಾರ ಮಹಾರಾಷ್ಟ್ರದ ನಾಸಿಕ್ ನಲ್ಲಿ ಚಿರತೆ ಮತ್ತು ಬೆಕ್ಕು ಒಟ್ಟಿಗೆ ತೆರೆದ ಬಾವಿಗೆ ಬಿದ್ದಿರುವ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಪಾಕಿಸ್ಥಾನದಲ್ಲಿ ಗಗನಕ್ಕೇರಿದ ಪೆಟ್ರೋಲ್ ಬೆಲೆ; ಪೆಟ್ರೋಲ್- ಡೀಸೆಲ್ ಬೆಲೆ ಎಷ್ಟು ಗೊತ್ತಾ?
ನಾಸಿಕ್ ನಲ್ಲಿ ತೆರೆದ ಬಾವಿಗೆ ಬಿದ್ದಿದ್ದ ಚಿರತೆ ಮತ್ತು ಬೆಕ್ಕನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿರುವುದಾಗಿ ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಎಎನ್ ಐ ಶೇರ್ ಮಾಡಿರುವ ವಿಡಿಯೋದಲ್ಲಿ, ಬಾವಿಯೊಳಗೆ ಬಿದ್ದ ಚಿರತೆ ಎರಡು ಕಿರಿದಾದ ಮರದ ಹಲಗೆಯ ಆಧಾರ ಪಡೆಯಲು ಪ್ರಯತ್ನಿಸುತ್ತಿದ್ದು, ಮತ್ತೊಂದೆಡೆ ಬೆಕ್ಕು ನೀರಿನಿಂದ ಮೇಲೆ ಬರಲು ಓಡಾಡುತ್ತಿತ್ತು. ಏತನ್ಮಧ್ಯೆ ಬೆಕ್ಕು ಚಿರತೆಯ ಮೈ ಮೇಲೆ ಹತ್ತಲು ಪ್ರಯತ್ನಿಸಿದಾಗ ಚಿರತೆಯ ಗರ್ಜನೆಗೆ ಓಡಿ ಹೋಗುವ ದೃಶ್ಯ ಸೆರೆಯಾಗಿದೆ. ಕೊನೆಗೆ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಪ್ರತ್ಯೇಕವಾಗಿ ಬೋನು ಬಳಸಿ ಚಿರತೆ ಮತ್ತು ಬೆಕ್ಕನ್ನು ರಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ.
ಬೇಸಿಗೆ ಮತ್ತು ಚಿರತೆಯ ರಕ್ಷಣೆ ಈಗ ಎಲ್ಲೆಡೆ ಸಾಮಾನ್ಯವಾಗಿದೆ. ನೀರಿನ ಹುಡುಕಾಟದ ಸಂದರ್ಭದಲ್ಲಿ ಚಿರತೆಗಳು ಹೀಗೆ ಬಾವಿಗೆ ಬೀಳುತ್ತಿವೆ. ಮುಖ್ಯವಾಗಿ ನಾಸಿಕ್ ನಲ್ಲಿ ಕಳೆದ ಒಂದು ದಶಕದಿಂದ ಅರಣ್ಯ ನಾಶದಿಂದಾಗಿ ಇಂತಹ ಪ್ರಕರಣ ಹೆಚ್ಚಳವಾಗಿದೆ. ಆದರೂ ಚಿರತೆ ಮತ್ತು ಬೆಕ್ಕು ಸುರಕ್ಷಿತವಾಗಿವೆ ಎಂದು ಭಾವಿಸುವುದಾಗಿ ಟ್ವೀಟರ್ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.