ಬೆಂಗಳೂರು: ಜರ್ಮನಿಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಪಡೆದು ಬಂದ ಕೆ.ಎಲ್. ರಾಹುಲ್ ಈಗ ಬೆಂಗಳೂರಿನ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಫಿಟ್‌ನೆಸ್ ಗಳಿಸಲು ಕಠಿನ ಪ್ರಯತ್ನ ಮಾಡುತ್ತಿದ್ದಾರೆ.
ರಾಹುಲ್ ಮರಳಿ ಬ್ಯಾಟಿಂಗ್ ಅಭ್ಯಾಸಕ್ಕೆ ಇಳಿದಿರುವುದು ಟೀಮ್ ಇಂಡಿಯಾ ಪಾಲಿನ ಸಿಹಿ ಸುದ್ದಿಯಾಗಿದೆ.
ಇದಕ್ಕಿಂತ ಮಿಗಿಲಾದ ಸುದ್ದಿಯೆಂದರೆ, ಅವರು ಅಭ್ಯಾಸಕ್ಕಾಗಿ ವನಿತಾ ವೇಗಿ ಜೂಲನ್ ಗೋಸ್ವಾಮಿ ಎಸೆತಗಳನ್ನು ಎದುರಿಸಿದ್ದು! ಇದರ 11 ಸೆಕೆಂಡ್‌ಗಳ ವೀಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.
ವಿಶ್ವದ ಖ್ಯಾತ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿರುವ ಜೂಲನ್ ಗೋಸ್ವಾಮಿ ಎಸೆತಗಳಲ್ಲಿ ರಾಹುಲ್ ಡ್ರೈವ್ ಮತ್ತು ಕಟ್ ಶಾಟ್‌ಗಳನ್ನು ಬಾರಿಸುತ್ತಿದ್ದ ದೃಶ್ಯ ಈ ವೀಡಿಯೋದಲ್ಲಿದೆ.
ಕೆ.ಎಲ್. ರಾಹುಲ್ ಅವರನ್ನು ವೆಸ್ಟ್ ಇಂಡೀಸ್ ಎದುರಿನ 5 ಪಂದ್ಯಗಳ ಟಿ20 ಸರಣಿಗಾಗಿ ಆರಿಸಲಾಗಿದೆ. ಆದರೆ ಅವರು ಫಿಟ್‌ನೆಸ್ ಟೆಸ್ಟ್‌ನಲ್ಲಿ ತೇರ್ಗಡೆಯಾಗುವುದು ಅಗತ್ಯ. ಸರಣಿ ಜು. 29ರಿಂದ ಮೊದಲ್ಗೊಳ್ಳಲಿದೆ. 4-5 ದಿನಗಳಲ್ಲಿ ರಾಹುಲ್ ಫಿಟ್ ಆದದ್ದೇ ಆದರೆ ಕೆರಿಬಿಯನ್‌ಗೆ ವಿಮಾನ ಏರುವ ಸಾಧ್ಯತೆ ಇದೆ.