ಬೆಂಗಳೂರು: ವೃಷಭಾವತಿ ವ್ಯಾಲಿಗೆ ಕೊಳಚೆ ನೀರು ಬಿಡುವ ಕೈಗಾರಿಕೆ ಹಾಗೂ ಕಾರ್ಖಾನೆಗಳನ್ನು ಗುರುತಿಸುತ್ತಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಯಮ ಉಲ್ಲಂಘನೆ ಮಾಡುವವರಿಗೆ ನೋಟಿಸ್ ಬಿಸಿ ಮುಟ್ಟಿಸಿದೆ. ವೃಷಭಾವತಿ ವ್ಯಾಲಿ ವ್ಯಾಪ್ತಿಯಲ್ಲಿ ಕೊಳಚೆ ನೀರು ಹರಿದು ಹೋಗುವುದಕ್ಕೆ ಸಮರ್ಪಕ ಪೈಪ್‌ಲೈನ್ ಅಳವಡಿಸದೆ ಇರುವುದು, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರವಾನಗಿ ತೆಗೆದುಕೊಳ್ಳದೆ ಇರುವುದು ಹಾಗೂ ಕೊಳಚೆ ನೀರು ನೇರವಾಗಿ ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ಸಂಪರ್ಕ ಕಲ್ಪಿಸದೆ ಇರುವುದು ಸೇರಿದಂತೆ “ವಾಟರ್ ಆ್ಯಕ್ಟ್’ ನಿಯಮ ಉಲ್ಲಂಘನೆ ಮಾಡಿರುವ 76 ಕೈಗಾರಿಕೆಗಳ ಮೇಲೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಿಮಿನಲ್ ಕೇಸ್ ದಾಖಲು ಮಾಡಿದೆ.
ಅಲ್ಲದೆ, ಈ ಭಾಗದಲ್ಲಿ ಸಣ್ಣ ಹಾಗೂ ದೊಡ್ಡ ಕಾರ್ಖಾನೆಗಳು ಹಾಗೂ ವಿವಿಧ ಉದ್ದಿಮೆಗಳಿಂದ ಕೊಳಚೆ ನೀರು ವೃಷಭಾವತಿ ವ್ಯಾಲಿಗೆ ಬಿಡುತ್ತಿರುವ ನಿರ್ದಿಷ್ಟ ಸ್ಥಳಗಳನ್ನು ಗುರುತಿಸಲಾಗಿದ್ದು, ನಿಯಮ ಉಲ್ಲಂಘನೆ ಮಾಡಿರುವ 309 ಕಾರ್ಖಾನೆಗಳ ಮಾಲೀಕರಿಗೆ ಕ್ಲೋಸರ್ ನೋಟಿಸ್ (ಕಂಪನಿಗಳ ಪರವಾನಗಿ) ರದ್ದು ನಿಯಂತ್ರಣ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ವೃಷಭಾವತಿಗೆ ಕೊಳಚೆ ನೀರು ತಡೆಯಲು ಅಭಿಯಾನ: ವೃಷ ಭಾವತಿ ನದಿ ಉಳಿವಿಗಾಗಿ ಹಾಗೂ ಈ ಮಾರ್ಗದಲ್ಲಿ ಕೊಳಚೆ ನೀರು ಹರಿಸುವುದನ್ನು ತಪ್ಪಿಸುವ ಉದ್ದೇಶದಿಂದ ವಿವಿಧ ಸಂಘಟನೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿಯ ಅಧಿಕಾರಿಗಳ ಗಮನ ಸೆಳೆಯುತ್ತಿವೆ. ಸಾಮಾಜಿಕ ಜಾಲತಾಣ ಹಾಗೂ ವಾಟ್ಸ್‌ಆ್ಯಪ್ ಗ್ರೂಪ್‌ಗಳ ಮೂಲಕ ನದಿ ಮಾರ್ಗದಲ್ಲಿ ಕೊಳಚೆ ನೀರು ಬಿಡುವವರ ಬಗ್ಗೆ ಹಾಗೂ ಅನಧಿಕೃತ ಲಾರಿಗಳ ಮೂಲಕ ಈ ಮಾರ್ಗದಲ್ಲಿ ಕೊಳಚೆ ನೀರು ಬಿಡುತ್ತಿರುವ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಗಮನ ಸೆಳೆಯಲಾಗುತ್ತಿದೆ. ಇದು ಸಹ ಪರೋಕ್ಷವಾಗಿ ವೃಷಭಾವತಿ ವ್ಯಾಲಿ ಮಾರ್ಗದಲ್ಲಿ ಕೊಳಚೆ ನೀರು ಬಿಡುವುದಕ್ಕೆ ಕಡಿವಾಣ ಬಿದ್ದಂತಾಗಿದೆ.
ನಿಯಮ ಉಲ್ಲಂಘಿಸಿದವರಿಗೆ ನೋಟಿಸ್
ವೃಷಭಾವತಿ ವ್ಯಾಲಿ ಹಾಗೂ ಹೆಬ್ಟಾಳ ಸೇರಿದಂತೆ ವಿವಿಧೆಡೆ ಕೆರೆಗಳು ಹಾಗೂ ವ್ಯಾಲಿಗಳಿಗೆ ಕೊಳಚೆ ನೀರು ಬಿಡುವ ಕಾರ್ಖಾನೆ ಕೈಗಾರಿಕೆಗಳನ್ನು ಮುಚ್ಚುವ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕ್ಲೋಷರ್ ನೋಟಿಸ್ ಜಾರಿ ಮಾಡುತ್ತಿದೆ. ಕಂಪನಿಗಳು ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳುವವರೆಗೆ ಪರವಾನಗಿ ರದ್ದು ಪಡಿಸಲಾಗುತ್ತದೆ. ಒಮ್ಮೆ ಕಂಪನಿಗಳು ಕೊಳಚೆ ನೀರು ಹರಿದು ಹೋಗುವುದಕ್ಕೆ ಸೂಕ್ತ ಪೈಪ್‌ಲೈನ್ ವ್ಯವಸ್ಥೆ ಮಾಡಿಕೊಂಡರೆ, ಪರವಾನಗಿ ನೀಡುವ ವಿಧಾನವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅನುಸರಿಸುತ್ತಿದೆ.
ಇದನ್ನೂ ಓದಿ:ಜಾನಪದ ಸಂಗೀತಕ್ಕೆ ತಲೆದೂಗಿದ ಸಿಎಂ
ಬಿಬಿಎಂಪಿ ಮಾರ್ಷಲ್‌ಗಳಿಂದಲೂ ಗಸ್ತು ಕಾರ್ಯ
ವೃಷಭಾವತಿ ವ್ಯಾಲಿಗೆ ಟ್ಯಾಂಕರ್‌ಗಳಲ್ಲಿ ಕೊಳಚೆ ನೀರು ತಂದು ಬಿಡುವವರ ಮೇಲೆ ಕಣ್ಣಿರಿಸುವ ಉದ್ದೇಶದಿಂದ ಇಬ್ಬರು ಮಾರ್ಷಲ್‌ಗಳನ್ನು ನೇಮಕ ಮಾಡಲಾಗಿತ್ತು. ಇದೀಗ ವಾರ್ಡ್ ಮಟ್ಟದ ಹಾಗೂ ವಲಯದ ಮಟ್ಟದ ಮಾರ್ಷಲ್‌ಗಳೇ ರಾತ್ರಿಪಾಳಿಯಲ್ಲಿ ಗಸ್ತು ತಿರುಗುತ್ತಿದ್ದಾರೆ. ಕೊಳಚೆ ನೀರು ಬಿಡುವವರನ್ನು ಹಿಡಿದು, ಪೊಲೀಸರಿಗೂ ಒಪ್ಪಿಸಲಾಗಿದೆ ಎಂದು ಬಿಬಿಎಂಪಿ ಚೀಫ್ ಮಾರ್ಷಲ್ ರಾಜ್ಬೀರ್ ಸಿಂಗ್ ತಿಳಿಸಿದ್ದಾರೆ.
ಹಿತೇಶ್ ವೈ