ಬಜಪೆ: ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕತ್ತಲಸಾರ್ ಶಾಲಾ ಬಳಿ ರವಿವಾರ ಮಧ್ಯಾಹ್ನದ ವೇಳೆಗೆ ಏಕಾಏಕಿ ಎಕ್ಕಾರು ನದಿಯ ನೀರಿನಲ್ಲಿ ಕಪ್ಪು ಕವರ್‌ಗಳಲ್ಲಿ ಪ್ಲಾಸ್ಟಿಕ್ ರಾಶಿ ಗುರುಕಿಂಡಿ ಅಣೆಕಟ್ಟಿನಲ್ಲಿ ಶೇಖರಣೆಗೊಂಡಿದೆ.
ಈ ಕಪ್ಪು ಕವರ್‌ಗಳಲ್ಲಿ ಬಾಟಲಿ, ಸಿರಿಂಜ್‌ಗಳು, ಕಾಗದದ ಕರವಸ್ತ್ರಗಳು ತುಂಬಿದ್ದು, ಭಾರದ ವಸ್ತುಗಳು ಹಾಕಿದ ಪ್ಲಾಸ್ಟಿಕ್ ಕವರ್‌ಗಳು ಹರಿಯುವ ನೀರಿನ ಅಡಿಯಲ್ಲಿ ಹೋಗುತ್ತಿದ್ದು, ಉಳಿದ ಪ್ಲಾಸ್ಟಿಕ್ ಕವರ್‌ಗಳು ನೀರಿಗೆ ತಡೆಸಿಗುವಲ್ಲಿ ಶೇಖರಣೆಗೊಂಡಿದೆ.
ದೂರದಿಂದ ನೋಡಿದಾಗ ಕಾಡುಕೋಣಗಳು ನದಿಯನ್ನು ದಾಟುವ ದೃಶ್ಯದಂತೆ ಕಂಡು ಬಂದಿತ್ತು. ಹತ್ತಿರದಲ್ಲಿ ಬಂದು ನೋಡುವಾಗ ಈ ಪ್ಲಾಸ್ಟಿಕ್ ಕವರ್‌ಗಳಲ್ಲಿ ಕಚೇರಿ ಹಾಗೂ ಕ್ಯಾಂಟೀನ್‌ನ ಕಸವನ್ನು ತುಂಬಿ ನದಿಯಲ್ಲಿ ಎಸೆಯಲಾಗಿದೆ. ಸುಮಾರು ನೂರಕ್ಕಿಂತ ಅಧಿಕ ಕಪ್ಪು ಪ್ಲಾಸ್ಟಿಕ್ ಕವರ್‌ಗಳನ್ನು ಎಸೆಯಲಾಗಿದೆ. ಮೂಡುಪೆರಾರ, ಪಡುಪೆರಾರ ಎಕ್ಕಾರು ನದಿಯ ನೀರು ಹರಿಯುವ ಕಡೆ ರಸ್ತೆ ಇರುವಲ್ಲಿ ಟೆಂಪೋದಲ್ಲಿ ತಂದು ಇದನ್ನು ಎಸೆಯಲಾಗಿದೆ.
ಕಂಗಲಾದ ಕೃಷಿಕರು
ಎಕ್ಕಾರು ನದಿ ಹರಿಯುವ ತೀರದಲ್ಲಿ ಕೃಷಿ ಭೂಮಿ ಬಹಳಷ್ಟಿದ್ದು, ಇಲ್ಲಿನ ರೈತರು ಆತಂಕಗೊಂಡಿದ್ದು ಇದನ್ನು ಹೇಗೆ ವಿಲೇವಾರಿ ಮಾಡುವುದು ಎಂಬ ಸಮಸ್ಯೆಯಲ್ಲಿದ್ದಾರೆ. ಇದು ತೋಟ,ಗದ್ದೆಗಳಲ್ಲಿ ತುಂಬಿದರೆ ಕೃಷಿಗೆ ದೊಡ್ಡ ಸಮಸ್ಯೆಯಾಗಲಿದೆ. ಇದು ಪುನರಾವರ್ತನೆಯಾಗಲಿದೆ ಎಂಬ ಚಿಂತೆಯಲ್ಲಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯತ್ ಕಾನೂನು ಕ್ರಮತೆಗೆದುಕೊಳ್ಳಬೇಕು ಎಂದು ಕೃಷಿಕರು ಆಗ್ರಹಿಸಿದ್ದಾರೆ.
ತ್ಯಾಜ್ಯ ವಿಲೇವಾರಿಗೆ ಇದು ಸುಲಭ ವಿಧಾನ
ಯಾರೂ ಇಲ್ಲದ ಸಮಯದಲ್ಲಿ ಟೆಂಪೋಗಳಲ್ಲಿ ತ್ಯಾಜ್ಯ ತುಂಬಿಸಿ, ಬಂದು ನೇರವಾಗಿ ನದಿಗಳ ನೀರಿಗೆ ಎಸೆದರೆ ಅವರ ತ್ಯಾಜ್ಯ ವಿಲೇವಾರಿ ಸುಲಭವಾಯಿತು. ಆದರೆ ಅದನ್ನು ಅನುಭವಿಸುವವರು ನದಿಬಯಲಿನ ಕೃಷಿಕರು. ನದಿಯ ನೀರಿಗೆ ಎಸೆದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಕತ್ತಲಸಾರ್ ಗ್ರಾಮಸ್ಥರು ತಿಳಿಸಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು.ಇನ್ನೂ ಯಾರೂ ಎಸೆಯದಂತೆ ನೋಡಿಕೊಳ್ಳಬೇಕಾಗಿದೆ.