Advertisement

ವಿಧಾನಮಂಡಲ ಕಲಾಪಗಳಲ್ಲಿ ವ್ಯರ್ಥ ಪ್ರಲಾಪ

11:41 AM Jan 12, 2018 | |

ಬೆಂಗಳೂರು: ವಿಧಾನಮಂಡಲದಲ್ಲಿ ಈಚಿನ ವರ್ಷಗಳಲ್ಲಿ ಗಂಭೀರ ಚರ್ಚೆ ನಡೆಯದೆ ಪರಸ್ಪರ ಜಗಳ, ಕಾದಾಟ, ಪೈಪೋಟಿಯೇ ಹೆಚ್ಚಾಗಿರುವುದು ಬೇಸರ ಉಂಟು ಮಾಡುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

Advertisement

ಸಂಸದೀಯ ವ್ಯವಹಾರಗಳ ಇಲಾಖೆಯು ಸಾರ್ವಜನಿಕ ಶಿಕ್ಷಣ ಇಲಾಖೆ (ಡಿಎಸ್‌ಇಆರ್‌ಟಿ) ಸಹಯೋಗದಲ್ಲಿ ನಗರದ ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ 2017-18ನೇ ಸಾಲಿನ ರಾಜ್ಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯುವ ಸಂಸತ್‌ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ವಿಧಾನಮಂಡಲ ಕಲಾಪದಲ್ಲಿ ಸಂದರ್ಭ ಬಂದಾಗ ಬ್ರಿಟನ್‌ ಸಂಸತ್ತನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ. ನೂರಾರು ವರ್ಷಗಳ ಹಿಂದಿನ ಚರ್ಚೆ ಇಂದಿಗೂ ಪ್ರಸ್ತುತವೆನಿಸಿವೆ. ಅವುಗಳನ್ನು ಓದಿದಾಗ ಖುಷಿಯಾಗುತ್ತದೆ. ಆದರೆ ಇಂದು ಅಂತಹ ಚರ್ಚೆಯೇ ನಡೆಯುವುದಿಲ್ಲ ಎಂದು ವಿಷಾದಿಸಿದರು.

12ನೇ ಶತಮಾನದಲ್ಲೇ ಬಸವೇಶ್ವರರು ಸಂಸತ್ತಿನ ಪರಿಕಲ್ಪನೆಗೆ ನಾಂದಿ ಹಾಡಿದ್ದರು. ಆ ಕಾಲದಲ್ಲೇ ಸಾಕಷ್ಟು ಗಂಭೀರ ಚರ್ಚೆಗಳು ನಡೆದಿರುವ ಸಾಧ್ಯತೆ ಇದ್ದು, ಆ ಬಗ್ಗೆ ದಾಖಲೀಕರಣ ಕಾರ್ಯ ನಡೆಯಬೇಕಿದೆ. ಬುದ್ಧನ ಕಾಲದಲ್ಲೂ ಸಂಸತ್‌ ವ್ಯವಸ್ಥೆಯಿತ್ತು ಎಂಬುದರ ಉಲ್ಲೇಖವಿದೆ.

ಜಗತ್ತಿನಲ್ಲೇ ಅತ್ಯುನ್ನತ ಪ್ರಜಾಪ್ರಭುತ್ವ ವ್ಯವಸ್ಥೆ ದೇಶದಲ್ಲಿದೆ. ವೈವಿಧ್ಯದ ದೇಶದಲ್ಲಿ ಎಲ್ಲರೂ ಒಗ್ಗಟ್ಟಾಗಿ ಮುಂದುವರಿಯಲು ಪೂಕರವಾದ ಸಂವಿಧಾನ ರಚಿಸಿದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಋಣಿಯಾಗಿರಬೇಕು ಎಂದು ಅಭಿಪ್ರಾಯಪಟ್ಟರು.

Advertisement

ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರಪಂಚದಲ್ಲೇ ಅತ್ಯುತ್ತಮ ಎನಿಸಿದೆ. ಮೈಸೂರು ಅರಸರ ಆಡಳಿತಾವಧಿಯಲ್ಲೇ ಪ್ರಜಾಪ್ರತಿನಿಧಿ ಸಭೆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಬಳಕೆಯಲ್ಲಿತ್ತು. ಸಭಾಪತಿ ಎಂಬ ಪದ ಪ್ರಯೋಗದ ಬಗ್ಗೆ ವೇದಗಳಲ್ಲಿ ಉಲ್ಲೇಖವಿರುವುದು ವಿಶೇಷ ಎಂದು ಹೇಳಿದರು.

ಹಳೆಯದು, ಒಳ್ಳೆಯ ಸಂಗತಿಗಳ ಬಗ್ಗೆ ಅಭಿಮಾನದಿಂದಿರಬೇಕು. ಯುರೋಪಿಯನ್ನರ ಕೊಡುಗೆಗಳನ್ನು ಸ್ಮರಿಸುವ ಜತೆಗೆ ದೇಶದ ಜ್ಞಾನಿಗಳು, ಸಾಧಕರ ಬಗ್ಗೆಯೂ ಅರಿತುಕೊಳ್ಳಬೇಕು. ಸಾಂವಿಧಾನಿಕ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವ ಜತೆಗೆ ಹೆಚ್ಚಿನ ಸಂಗತಿಗಳನ್ನು ಅರಿತು ದೊಡ್ಡವರನ್ನೂ ತಿದ್ದುವ ಮಟ್ಟಕ್ಕೆ ಜ್ಞಾನ ವೃದ್ಧಿಸಿಕೊಳ್ಳಬೇಕಕು.

ಯವುದೇ ಕಾರಣಕ್ಕೂ ಹತಾಶರಾಗಬಾರದು. ಹೆಚ್ಚು ವಿಚಾರಗಳನ್ನು ಅರಿತು ಸಮಾಜಕ್ಕೆ ಮಾರ್ಗದರ್ಶಕರಾಗಲು ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು. ರಾಜ್ಯ ಮಟ್ಟದ ಯುವ ಸಂಸತ್‌ ಸ್ಪರ್ಧೆಯಲ್ಲಿ 10 ಮಂದಿ ವಿಜೇತರಾಗಿದ್ದು, ಮೊದಲ ಮೂರು ಮಂದಿಯ ವಿವರ ಹೀಗಿದೆ. ನಮನ ಎನ್‌- ಸೇಂಟ್‌ ಮೈಕೆಲ್ಸ್‌ ಕಾನ್ವೆಂಟ್‌ ಹೈಸ್ಕೂಲ್‌, ಕಾರವಾರ. ಗೌತಮ ಭಟ್ಟ- ಗಜಾನನ ಮಾಧ್ಯಮಿಕ ಶಾಲೆ, ವಾನಳ್ಳಿ. ದೀಕ್ಷಿತ್‌ ಶೆಟ್ಟಿ- ಸರ್ಕಾರಿ ಪ್ರೌಢಶಾಲೆ, ಬಸೂರು, ಉಡುಪಿ.

ಶಿಕ್ಷಣ ಇಲಾಖೆ (ಪ್ರಾಥಮಿಕ ಮತ್ತು ಪ್ರೌಢ) ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌, ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಕೆ.ದ್ವಾರಕನಾಥ್‌ ಬಾಬು, ಉಪ ಕಾರ್ಯದರ್ಶಿ ಶ್ರೀಧರ್‌, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ನಿರ್ದೇಶಕ ಗೋಪಾಲಕೃಷ್ಣ ಇತರರು ಉಪಸ್ಥಿತರಿದ್ದರು.

ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಅವರು ಮಾತನಾಡಿ, ರಾಜ್ಯಮಟ್ಟದಲ್ಲಿ ನಡೆಯುತ್ತಿರುವ ಯುವ ಸಂಸತ್‌ ಸ್ಪರ್ಧೆಯನ್ನು ಅಖೀಲ ಭಾರತ ಮಟ್ಟದಲ್ಲಿ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಲು ಅಣಕು ಸಂಸತ್‌ ಕಲಾಪದಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಸ್ಪರ್ಧಿಗಳನ್ನು ಹುರಿದುಂಬಿಸಿದರು.

ನಂತರ ಮಾತನಾಡಿದ ಸಚಿವ ಟಿ.ಬಿ.ಜಯಚಂದ್ರ, “ನಿಮ್ಮ (ವಿದ್ಯಾರ್ಥಿಗಳು) ಸದನದಲ್ಲಿ ನಿರ್ಣಯ ಕೈಗೊಂಡರೆ ನಾನು ಸದನದಲ್ಲಿ ಪ್ರಸ್ತಾಪಿಸಲು ಅನುಕೂಲವಾಗಲಿದೆ’ ಎಂದು ಪ್ರೋತ್ಸಾಹಿಸಿದರು.

ಯುವ ಸಂಸತ್‌ ಸ್ಪರ್ಧೆ ಝಲಕ್‌: ಲೋಕಾಯುಕ್ತ ಸಂಸ್ಥೆ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು “ಮುಖ್ಯಮಂತ್ರಿ’ಗಳು ಸದನಕ್ಕೆ ಉತ್ತರಿಸಿದರು! ಫೆ.5ಕ್ಕೆ ನಿಗದಿಯಾಗಿರುವ ವಿಧಾನಮಂಡಲ ಅಧಿವೇಶನ ಈಗಲೇ ಶುರುವಾಯಿತೇ ಎಂದು ಹುಬ್ಬೇರಿಸಬೇಡಿ.

ಗುರುವಾರ ನಡೆದ ರಾಜ್ಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಯುವ ಸಂಸತ್‌ ಸ್ಪರ್ಧೆಯ ಸ್ಯಾಂಪಲ್‌ ಇದು. ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ಲೋಕಾಯುಕ್ತ ಸಂಸ್ಥೆ ಯಶಸ್ವಿಯಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ “ಮುಖ್ಯಮಂತ್ರಿಗಳು’, 3457 ಟ್ರಾಪ್‌ ಪ್ರಕರಣಗಳು ದಾಖಲಾಗಿದ್ದು,2637 ಪ್ರಕರಣಗಳನ್ನು ಇತ್ಯರ್ಥಪಡಿಸಿದೆ ಎಂದು ಹೇಳಿದರು.

ಹಾಗೇ ಮಾಜಿ ಮುಖ್ಯಮಂತ್ರಿ ಎನ್‌.ಧರಂಸಿಂಗ್‌, ವಿಧಾನ ಪರಿಷತ್‌ ಮಾಜಿ ಸದಸ್ಯೆ ವಿಮಲಾಗೌಡ ಅವರಿಗೆ ಸಂತಾಪ ಸಲ್ಲಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫ‌ಲಿತಾಂಶ ಕುಸಿಯುತ್ತಿದ್ದು, ಬೀದರ್‌ನಲ್ಲಿ ಶೇ.6.2ರಷ್ಟು ಫ‌ಲಿತಾಂಶ ಬಂದಿದೆ. ಪಠ್ಯಪುಸ್ತಕ ಸಕಾಲದಲ್ಲಿ ಪೂರೈಕೆಯಾಗದಿರುವುದು,

ಡಿಸೆಂಬರ್‌ನಲ್ಲಿ ಶಿಕ್ಷಕರ ವರ್ಗಾವಣೆ ಇತರೆ ವಿಷಯಗಳನ್ನು ಸದಸ್ಯರೊಬ್ಬರು ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ “ಸಚಿವರು’, ಓದಿನಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿಶೇಷ ತರಗತಿ ನಡೆಸಲಾಗುತ್ತಿದೆ. ಪಾಸಿಂಗ್‌ ಪ್ಯಾಕೇಜ್‌ ಕೂಡ ನೀಡಲಾಗುತ್ತಿದ್ದು, ಶಿಕ್ಷಣ ವರ್ಗಾವಣೆಯನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next