ಮಹಾನಗರ: ಫಲ್ಗುಣಿ ನದಿ ಹರಿಯುವ ನಗರದ ಕೂಳೂರು ಬಳಿಯಲ್ಲಿ ನದಿಯ ದಂಡೆಯುದ್ದಕ್ಕೂ ಕೆಲವರು ಕಟ್ಟಡ ತ್ಯಾಜ್ಯ, ಮಣ್ಣು ಸುರಿಯುತ್ತಿದ್ದಾರೆ. ಹೀಗಾಗಿ ನದಿ ಬದಿಯ ವ್ಯಾಪ್ತಿ ಇದೀಗ ಕಟ್ಟಡ ತ್ಯಾಜ್ಯ ರಾಶಿಯಾಗಿ ಕಾಣಿಸುತ್ತಿದೆ.
ಸಿಮೆಂಟ್, ಪ್ಲಾಸ್ಟಿಕ್, ಕಲ್ಲು ಮಣ್ಣಿನೊಂದಿಗೆ ಕಟ್ಟಡ ತ್ಯಾಜ್ಯವನ್ನು ಕೂಡ ಇಲ್ಲಿ ಸುರಿಯಲಾಗುತ್ತಿದೆ. ನದಿಯ ಸುಮಾರು 2-3 ಕಿ.ಮೀ. ಉದ್ದಕ್ಕೆ ಮಣ್ಣು ಸುರಿಯಲಾಗಿದೆ.
ನದಿ ದಂಡೆಯಲ್ಲಿ 2019ರಲ್ಲಿ ನದಿ ಉತ್ಸವ ನಡೆಸುವ ಮೂಲಕ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ಜಿಲ್ಲಾಡಳಿತ ಮಾಡಿತ್ತು. ಬಳಿಕ ಎರಡು ವರ್ಷಗಳಿಂದ ಕೂಳೂರು ಬಳಿಯಲ್ಲಿ ನದಿಯ ದಂಡೆಯುದ್ದಕ್ಕೂ ಕಿ.ಮೀ. ಗಟ್ಟಲೆ ಉದ್ದಕ್ಕೆ ಕಟ್ಟಡ ತ್ಯಾಜ್ಯ, ಮಣ್ಣು ಸುರಿಯಲಾಗುತ್ತಿದ್ದು, ನದಿಯ ಸೌಂದರ್ಯಕ್ಕೆ ಧಕ್ಕೆಯಾಗಿದೆ. ಇದರ ವಿರುದ್ಧ ಆಡಳಿತ ವ್ಯವಸ್ಥೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:ಮೂರನೇ ಅಲೆ ಭೀತಿ : ಮುಂಬೈನಲ್ಲಿ ಅನಧಿಕೃತ “3ನೇ ಡೋಸ್’ ದರ್ಬಾರ್
“ಇದೇ ರೀತಿ ಮುಂದುವರಿದರೆ ತ್ಯಾಜ್ಯ ಸುರಿಯುವ ಡಂಪಿಂಗ್ ಯಾರ್ಡ್ ಆಗಿ ನದಿ ಬದಿ ಪರಿವರ್ತನೆಯಾಗಲಿದೆ. ಹೀಗಾದರೆ ಮುಂದೆ ನೆರೆ ಸಂಭವಿಸುವ ಆತಂಕವೂ ಇದೆ. ಹೀಗಾಗಿ ನದಿ ಒತ್ತುವರಿಯ ಘಟನೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ತ್ಯಾಜ್ಯ ಎಸೆಯುವವರ ವಿರುದ್ಧ ಕಾಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಪರಿಸರ ಹೋರಾಟಗಾರರಾದ ದಿನೇಶ್ ಹೊಳ್ಳ ಹಾಗೂ ಶಶಿಧರ ಶೆಟ್ಟಿ ಒತ್ತಾಯಿಸಿದ್ದಾರೆ.