Advertisement
ಮುಂಬಯಿಯಂದ ಬಂದಿದ್ದ ಮತ್ಸಗಂಧಾ ರೈಲಿನಲ್ಲಿದ್ದ ಚಾಯ್‌ವಾಲಾ ಮಂಗಳೂರು-ಮಡ್ಗಾಂವ್ ಇಂಟರ್‌ಸಿಟಿ ರೈಲಿನಲ್ಲಿ ವಾಪಸ್ ಕುಮಟಾಕ್ಕೆ ತೆರಳುವುದಕ್ಕಾಗಿ ಮೂಲ್ಕಿ ರೈಲು ನಿಲ್ದಾಣದಲ್ಲಿ ಇಳಿದ. ಆಗ ಆತನ ಕೈಯಲ್ಲಿದ್ದ ಹಾಲಿನ ಪಾತ್ರೆ ಕೆಳಕ್ಕೆ ಬಿದ್ದು ಅದರಲ್ಲಿ ಕೊಳಚೆ ನೀರು ಸೇರಿಕೊಂಡಿತು. ಆತ ಅದನ್ನೇ ಹಿಡಿದುಕೊಂಡು ಇಂಟರ್‌ಸಿಟಿ ರೈಲು ಹತ್ತಿದ. ಇದನ್ನು ಗಮನಿಸಿದ ಪ್ರಯಾಣಿಕರೋರ್ವರು ಅದರ ಫೋಟೋ ತೆಗೆದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚಾಯ್‌ವಾಲಾ ಗಲಾಟೆ ಮಾಡಲಾರಂಭಿಸಿ ಏರುದನಿಯಲ್ಲಿ ಪ್ರಯಾಣಿಕರನ್ನೇ ಗದರಿದ. ಪ್ರಯಾಣಿಕರು ರೈಲ್ವೇ ಇಲಾಖೆಗೆ ದೂರು ನೀಡಿದರು.
“ಈ ಚಾಯ್‌ವಾಲಾನದ್ದು ಕುಮಟಾ ಕೇಂದ್ರ. ಆತ ಅಲ್ಲಿಂದ ಮಂಗಳೂರು ಕಡೆಗೆ ಬರುವ ರೈಲಿನಲ್ಲಿ ಮಾತ್ರ ಚಹಾ ಮಾರಾಟ ಮಾಡಲು ಮಾನ್ಯತೆ ಹೊ0ದಿರುತ್ತಾನೆ. ವಾಪಸ್ ಹೋಗುವಾಗ ಆತ ಚಹಾ ಮಾರುವಂತಿಲ್ಲ. ಅದಕ್ಕೆ ಬೇರೆ ಚಾಯ್‌ವಾಲಾಗಳು ಇರುತ್ತಾರೆ. ಹಾಗಾಗಿ ಕೊಳಚೆ ನೀರಿನ ಚಹಾದ ಅಪಾಯ ಇರಲಿಲ್ಲ. ಈತ ಮೂಲ್ಕಿಯಲ್ಲಿ ಅವಸರದಿಂದ ಇಳಿಯುವಾಗ ಈ ಘಟನೆ ನಡೆದಿದೆ. ಆದರೆ ಆತ ಪ್ರಯಾಣಿಕರೊಂದಿಗೆ ಉದ್ಧಟತನದಿಂದ ವರ್ತಿಸಿದ್ದಾನೆ. ಆತನಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ರಕ್ಷಣಾ ದಳದ ಅಧಿಕಾರಿಗಳು ತಿಳಿಸಿದ್ದಾರೆ.