ಸೈದಾಪುರ: ಗ್ರಾಪಂ ಕೇಂದ್ರವಾಗಿರುವ ಸೈದಾಪುರದದಲ್ಲಿ ವರ್ಷವಿಡೀ ಚರಂಡಿಗಳು ತುಂಬಿ ತುಳುಕುತ್ತಿವೆ. ಪಟ್ಟಣದ ಪ್ರತಿಷ್ಠಿತ ತಾಯಿ ಕಾಲೋನಿಯಲ್ಲಿನ ಮನೆಗಳಸುತ್ತಲು ಚರಂಡಿ ನೀರು ಆವರಿಸಿ ಅವವ್ಯಸ್ಥೆ ಆಗರವಾಗಿದೆ. ಪಾಚು ಗಟ್ಟಿದ ನೀರಿನ ಮಧ್ಯದಲ್ಲಿ ಜನರ ಬದುಕು ದುಸ್ತರವಾಗಿದೆ.
ಚರಂಡಿ ನೀರು ಸರಿಯಾಗಿ ಹರಿದು ಹೋಗದೇ ಎಲ್ಲೆಂದರಲ್ಲಿ ಆವರಿಸಿ ಮುಜುಗರ ಉಂಟು ಮಾಡುತ್ತಿದೆ. ಮನೆಗೆ ಬರುವ ಅತಿಥಿಗಳು ಮುಗು ಮುಚ್ಚಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಚು ಗಟ್ಟಿದ ನೀರಿನಿಂದ ಕ್ರಿಮಿ ಕೀಟಗಳ ಹಾವಳಿ ಹೆಚ್ಚಾಗಿದೆ. ಕತ್ತಲಾಗುತ್ತಿದ್ದಂತೆ ಸೊಳ್ಳೆಗಳು ಮನೆಗಳಿಗೆ ನುಗ್ಗುತ್ತವೆ. ಇವುಗಳಿಂದ ರಕ್ಷಣೆ ಪಡೆಯಲು ಸಂಜೆಯೇ ಮನೆಗಳ ಬಾಗಿಲು ಮುಚ್ಚುವುದು ಅನಿವಾರ್ಯವಾಗಿದೆ. ಇದರ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ರಾತ್ರಿ ಜಾಗರಣೆ ಮಾಡುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ರೋಗದಲ್ಲಿ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ ಎಂದು ಬಡಾವಣೆ ನಿವಾಸಿಗಳು ದೂರಿದ್ದಾರೆ.
ಬಡಾವಣೆಗೆ ಹೊಂದಿಕೊಂಡಂತೆ ಶಾಲೆಗಳು, ಬ್ಯಾಂಕ್, ಅಂಚೆ ಕಚೇರಿ ಸೇರಿದಂತೆ ವಿವಿಧ ಸಾರ್ವಜನಿಕ ಇಲಾಖೆಗಳಿವೆ. ಇವುಗಳಿಗೆ ತೆರಳುವ ಜನರ ಪಾಡು ಹೇಳತೀರದು. ಗ್ರಾಮದಲ್ಲಿ ಅತ್ಯಂತ ಪ್ರತಿಷ್ಟಿತ ಬಡಾವಣೆ ಇದಾಗಿದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ನೂತನ ಮನೆಗಳು ಇಲ್ಲಿ ನಿರ್ಮಾಣವಾಗುತ್ತಿವೆ. ಅಲ್ಲದೆ ಅತಿ ಬೇಡಿಕೆ ಪ್ರದೇಶ ಎಂದು ಖ್ಯಾತಿ ಪಡೆದಿದೆ.
ಆದರೆ ಚರಂಡಿ ನೀರಿನ ತೊಂದರೆ ನಿತ್ಯ ಕಾಡುತ್ತಿದೆ. ಗ್ರಾಪಂ ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೂಡಲೇ ಬಡಾವಣೆಗೆ ಭೇಟಿ ನೀಡಿ ಇಲ್ಲಿನ ಸಮಸ್ಯೆ ಬಗೆಹರಿಸಬೇಕು. ವಾಸಕ್ಕೆ ಉತ್ತಮ ಪರಿಸರ ನಿರ್ಮಾಣ ಮಾಡಿಕೊಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ಒಳಚರಂಡಿ ಅವ್ಯವಸ್ಥೆ ಕಾರಣದಿಂದಾಗಿ ಕೊಳಚೆ ನೀರು ಮನೆ ಮುಂದೆ ನಿಂತು ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಇದರಿಂದ ನೊಣ, ಸೊಳ್ಳೆ ಸೇರಿದಂತೆ ರೋಗಾಣುಗಳ ಸಂಖ್ಯೆ ಅಧಿ ಕವಾಗಿದೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳು ರಕ್ತ ಹೀರಲಾರಂಭಿಸುತ್ತವೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿ ಸಿದ್ದು ಪೂಜಾರಿ ಆಗ್ರಹಿಸಿದ್ದಾರೆ.