ಕಾಪು: ಕಾಪು – ಶಂಕರಪುರ ಸಂಪರ್ಕ ರಸ್ತೆಯಲ್ಲಿ ಸಿಗುವ ಇನ್ನಂಜೆ ಗ್ರಾಮದ ಮಡುಂಬು – ಮರ್ಕೋಡಿ ಹೊಳೆ ಬದಿಯಲ್ಲಿ ತ್ಯಾಜ್ಯ ಸುರಿದು ಹೋಗಿದ್ದವರನ್ನು ಸ್ಥಳೀಯರೇ ಪತ್ತೆ ಹಚ್ಚಿ, ಗ್ರಾಮ ಪಂಚಾಯತ್‌ಗೆ ಒಪ್ಪಿಸಿದ ಅಪರೂಪದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಬೆಳಪು ಮೂಲದ ಗುಜಿರಿ ವ್ಯಾಪಾರಿಗಳಾದ ಹಮೀದ್ ಮತ್ತು ಅಲ್ತಾಫ್ ಅಲೆವೂರಿನಲ್ಲಿ ಸಂಗ್ರಹಿಸಿದ ತ್ಯಾಜ್ಯವನ್ನು ಮರ್ಕೋಡಿ ಹೊಳೆ ಬದಿಯಲ್ಲಿ ಎಸೆದು ಹೋಗಿದ್ದು, ಸ್ಥಳೀಯರ ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಎಸೆದು ಹೋಗಿದ್ದ ತ್ಯಾಜ್ಯವನ್ನು ಶುಚಿಗೊಳಿಸಿ, ದಂಡ ಕಟ್ಟಿ ನಿರ್ಗಮಿಸಿದ ಮಹಾನುಭಾವರು. !
ಇನ್ನಂಜೆ ಮರ್ಕೋಡಿ ಹೊಳೆ ಬದಿಯಲ್ಲಿ ಗುರುವಾರ ರಾತ್ರಿ ಎರಡು ತ್ಯಾಜ್ಯದ ಗೋಣಿಗಳು ಕಂಡು ಬಂದಿದ್ದು, ರಿಕ್ಷಾ ಚಾಲಕನ ಉಮೇಶ್ ಅಂಚನ್ ಎಂಬವರು ತ್ಯಾಜ್ಯವನ್ನು ಬಿಡಿಸಿ ನೋಡಿದಾಗ ಅದರಲ್ಲಿ ಅಲೆವೂರು ನಿವಾಸಿಯೊಬ್ಬರಿಗೆ ಸೇರಿದ್ದ ಬಿಲ್ ಪತ್ತೆಯಾಗಿತ್ತು. ಈ ಬಗ್ಗೆ ಅವರು ಗ್ರಾ. ಪಂ. ಸದಸ್ಯ ದಿವೇಶ್ ಶೆಟ್ಟಿ ಕಲ್ಯಾಲು ಅವರಿಗೆ ಮಾಹಿತಿ ನೀಡಿದ್ದು, ಅದರಲ್ಲಿ ಇದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಅದು ಬೆಳಪು ಮೂಲದ ಗುಜಿರಿ ವ್ಯಾಪಾರಿಗಳು ತಮ್ಮಲ್ಲಿ ಸಂಗ್ರಹಿಸಿ, ಕೊಂಡೊಯ್ದಿದ್ದ ತ್ಯಾಜ್ಯ ವಸ್ತುಗಳು ಎಂದು ಮಾಹಿತಿ ನೀಡಿದ್ದರು.
ಇದನ್ನೂ ಓದಿ :ಉದ್ಯಮಿ ಅಪಹರಣ : 4 ಗಂಟೆಯಲ್ಲಿ ಪತ್ತೆ ಹಚ್ಚಿದ ಧಾರವಾಡ ಪೊಲೀಸ್
ಮರ್ಕೋಡಿ ಹೊಳೆ ಸಮೀಪ ತ್ಯಾಜ್ಯ ಎಸೆದು ಹೋಗಿದ್ದ ಗುಜಿರಿ ವ್ಯಾಪಾರಿಗಳ ದೂರವಾಣಿ ಸಂಖ್ಯೆಯನ್ನು ಪಡೆದು ಅವರನ್ನು ಸ್ಥಳಕ್ಕೆ ಕರೆಯಿಸಿ ಬಳಿಕ ಅವರ ಬಗ್ಗೆ ಕಾಪು ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಅವರಿಂದಲೇ ಆ ತ್ಯಾಜ್ಯವನ್ನು ಮತ್ತು ಮರ್ಕೋಡಿ ಪರಿಸರದಲ್ಲಿ ಇದ್ದಂತಹ ಇತರ ತ್ಯಾಜ್ಯಗಳನ್ನು ತೆರವುಗೊಳಿಸಲಾಯಿತು.
ಮರ್ಕೋಡಿ ಹೊಳೆ ಬದಿಯಲ್ಲಿ ತ್ಯಾಜ್ಯ ಸುರಿದು ಹೋಗಿದ್ದ ಬೆಳಪು ನಿವಾಸಿಗಳಾದ ಹಮೀದ್ ಮತ್ತು ಅಲ್ತಾಫ್ ಅವರಿಗೆ ಇನ್ನಂಜೆ ಗ್ರಾಮ ಪಂಚಾಯತ್ 5000 ರೂಪಾಯಿ ಮೊತ್ತದ ದಂಡ ಕಟ್ಟುವಂತೆ ನೊಟೀಸ್ ನೀಡಿದ್ದು, ಬಳಿಕ ಅವರು ತಪ್ಪೊಪ್ಪಿಕೊಂಡ ಮೇರೆಗೆ ಮತ್ತು ಅವರ ಮನವಿಯ ಮೇರೆಗೆ ಎರಡು ಸಾವಿರ ರೂಪಾಯಿ ದಂಡ ವಿಧಿಸಿ, ಎಚ್ಚರಿಕೆ ನೀಡಲಾಗಿದೆ.
ಇನ್ನಂಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಆಚಾರ್ಯ, ಉಪಾಧ್ಯಕ್ಷ ಸುರೇಶ್ ಶೆಟ್ಟಿ ಮಂಡೇಡಿ, ಗ್ರಾ.ಪಂ. ಸದಸ್ಯ ದಿವೇಶ್ ಶೆಟ್ಟಿ, ಕಲ್ಯಾಲು ಗ್ರಾಮಸ್ಥರಾದ ಬಾಲಕೃಷ್ಣ ಆರ್. ಕೋಟ್ಯಾನ್, ಉಮೇಶ್ ಅಂಚನ್, ವಿಕ್ಕಿ ಪೂಜಾರಿ, ಪೊಲೀಸ್ ಸಿಬ್ಬಂದಿ ಅಮೃತೇಶ್, ಪಂಚಾಯತ್ ಸಿಬ್ಬಂದಿಗಳಾದ ಹರೀಶ್ ಮತ್ತು ಸಂದೀಪ್ ಉಪಸ್ಥಿತರಿದ್ದರು.