Advertisement
ನಗರದ ಶೌಚಾಲಯದ ತ್ಯಾಜ್ಯವನ್ನು ಸಕ್ಕಿಂಗ್ ಯಂತ್ರದ ಮೂಲಕ ಲಿಫ್ಟ್ ಮಾಡಿ ರುದ್ರಭೂಮಿಯ ಆವರಣದ ನದಿ ಕಿನಾರೆಯಲ್ಲಿ ಬೃಹತ್ ಹೊಂಡದಲ್ಲಿ ಡಂಪ್ ಮಾಡಲಾಗುತ್ತದೆ. ಆದರೆ ಇದು ತೆರೆದು ಕೊಂಡಿರುವುದರಿಂದ ದುರ್ನಾತ ಬೀರುವ ಜತೆಗೆ ಹೊಂಡವು ದನಕರುಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಪ್ರಸ್ತುತ ಮಳೆಗಾಲ ಆಗಿರುವುದರಿಂದ ದುರ್ನಾತ ಕಡಿಮೆ ಇದೆ. ಆದರೆ ಬೇಸಗೆಯಲ್ಲಿ ದುರ್ನಾತ ಬೀರುವ ಜತೆಗೆ ನೊಣ-ಸೊಳ್ಳೆಗಳ ಕಾಟವೂ ಅಧಿಕಗೊಳ್ಳುತ್ತದೆ. ಪರಿಣಾಮವಾಗಿ ಸ್ಥಳೀಯ ಸುಮಾರು 60 ಮನೆಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ಅದನ್ನು ಬೇರಡೆಗೆ ನಿರ್ಜನ ಪ್ರದೇಶಕ್ಕೆ ಸ್ಥಳಾಂತರ ಮಾಡುವಂತೆ ಆಗ್ರಹಿಸಿದ್ದಾರೆ.
ತ್ಯಾಜ್ಯವನ್ನು ಡಂಪ್ ಮಾಡುವ ಸ್ಥಳವು ಪ್ರಸ್ತುತ ಪೂರ್ತಿ ಪೊದೆಯಿಂದ ತುಂಬಿಕೊಂಡಿದೆ. ಅಲ್ಲಿ ಹೊಂಡ ಇರುವುದು ಕೂಡ ಅರಿವಿಗೆ ಬರುವುದಿಲ್ಲ. ಈ ಪ್ರದೇಶದಲ್ಲಿ ಹೆಚ್ಚಿನ ಹುಲ್ಲು ಬೆಳೆಯುವುದರಿಂದ ದನಕರುಗಳು ರುಧ್ರಭೂಮಿಯ ಆವರಣಕ್ಕೆ ಮೇಯಲು ಬರುತ್ತದೆ. ಈ ಸಂದರ್ಭದಲ್ಲಿ ಮೇಯುತ್ತಾ, ಈಗಾಗಲೇ ಸಾಕಷ್ಟು ದನಗಳು ಹೊಂಡಕ್ಕೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ತ್ಯಾಜ್ಯವನ್ನು ಹಾಕುವುದರಿಂದ ಬೀದಿ ನಾಯಿಗಳ ಕಾಟವೂ ಅಧಿಕವಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರುಧ್ರಭೂಮಿ ಆವರಣದಲ್ಲಿ ಸಕ್ಕಿಂಗ್ ಯಂತ್ರವನ್ನು ನಿಲ್ಲಿಸುವುದಕ್ಕೂ ಆಕ್ಷೇಪಗಳು ಕೇಳಿಬರುತ್ತಿವೆ. ಮನವಿಗೆ ನಿರ್ಧಾರ
ತ್ಯಾಜ್ಯದ ದುರ್ನಾತದಿಂದ ಬೇಸತ್ತಿರುವ ಸ್ಥಳೀಯರು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರಿಗೆ ಮನವಿ ನೀಡಲು ನಿರ್ಧರಿಸಿದ್ದಾರೆ. ಅವರ ಜತೆ ಚರ್ಚಿಸಿ ಮತದಾನದಲ್ಲಿ ಭಾಗವಹಿಸುವ ಕುರಿತು ನಿರ್ಧರಿಸಲಿದ್ದೇವೆ. ಸಕಾರಾತ್ಮಕ ಉತ್ತರ ದೊರಯದೇ ಇದ್ದಲ್ಲಿ ಬಹಿಷ್ಕಾರದ ಚಿಂತನೆ ನಡೆಸಲಿದ್ದೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ.