Advertisement
ಅವುಗಳ ಸಾಲಿನಲ್ಲಿ ಮತ್ತೂಂದು ಸೇರ್ಪಡೆಯಾಗುತ್ತಿದೆ. ಅದೇ ವೇಸ್ಟ್ ಟು ಎನರ್ಜಿ (ಕಸದಿಂದ ಇಂಧನ). ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಒಣಗಿಸಿ, ತೀವ್ರ ಉಷ್ಣಾಂಶದಲ್ಲಿ ಅದನ್ನು ಸುಟ್ಟು ಬೂದಿ ಮಾಡಲಾಗುತ್ತದೆ. ಅದರಿಂದ ಹೊರಬರುವ “ಕ್ಯಾಲೊರಿ’ಯಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ. ಸುಟ್ಟಾಗ ಅಧಿಕ ಪ್ರಮಾಣ ಕ್ಯಾಲೊರಿ ಹೊರಬರುವ ತ್ಯಾಜ್ಯಕ್ಕೆ ಹೆಚ್ಚು ಬೇಡಿಕೆ. ಉದಾಹರಣೆಗೆ ಪ್ಲಾಸ್ಟಿಕ್ ಕಪ್‌ಗ್ಳನ್ನು ಸುಡುವುದರಿಂದ ಸುಮಾರು 2 ಸಾವಿರ ಕ್ಯಾಲರಿ ಬರುತ್ತದೆ. ಹಾಗಾಗಿ, ಇದಕ್ಕೆ ಬೇಡಿಕೆ ಸಹಜವಾಗಿಯೇ ಹೆಚ್ಚು.
Related Articles
Advertisement
ಘಟಕ ಸ್ಥಾಪನೆಗೆ ಚಿಂತಕರ ವಿರೋಧ : ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಪ್ರಸ್ತಾವನೆಗೆ ಕೆಲವು ಚಿಂತಕರು ವಿರೋಧ ವ್ಯಕ್ತಪಡಿಸಿದ್ದಾರೆ. ಘಟಕ ಸ್ಥಾಪನೆ ಮಾಡುವುದರಿಂದ ಮುಂದೆ ತ್ಯಾಜ್ಯ ವಿಂಗಡಣೆ ಮೇಲೆ ಪರಿಣಾಮ ಬೀರಲಿದೆ, ಉಪಯುಕ್ತ ತ್ಯಾಜ್ಯವನ್ನೂ ಸುಡಲಾಗುತ್ತದೆ ಎನ್ನುವ ಆಕ್ಷೇಪಣೆಗಳು ವ್ಯಕ್ತವಾಗಿದೆ. ಘಟಕದಿಂದ ಹೊರಸೂಸುವ ಹೊಗೆಯಲ್ಲಿ ಡಯಾಕ್ಸಿನ್ ಸೇರಿದಂತೆ ವಿವಿಧ ರಾಸಾಯನಿಕ ಅಂಶಗಳು ಇರುತ್ತವೆ. ಹೀಗಾಗಿ, ಘಟಕದ ಸುತ್ತ ಜನರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಆದ್ದರಿಂದ ಘಟಕ ಸ್ಥಾಪನೆ ಮಾಡುವುದು ಕೋರ್ಟ್ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇದರಿಂದ ಹೊರಬರುವುದು ಬೂದಿಯಲ್ಲ; ವಿಷ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಡಾ.ಲಿಯೊ ಸಾಲ್ಡಾನಾ. “ಬಿಬಿಎಂಪಿಯು ತ್ಯಾಜ್ಯವನ್ನು ಸುಟ್ಟು ಕೈತೊಳೆದುಕೊಳ್ಳುವ ಮತ್ತೂಂದು ಸುಲಭ ವಿಧಾನಕ್ಕೆ ಮುಂದಾಗಿದೆ. ಇದರಿಂದ ಹಸಿ ತ್ಯಾಜ್ಯವನ್ನೂ ಮರಳಿ ಮಣ್ಣಿಗೆ ಸೇರಿಸುವ ಪ್ರಯತ್ನಕ್ಕೂ ಹಿನ್ನಡೆ ಉಂಟಾಗಲಿದೆ. ಘಟಕದಲ್ಲಿ ಮಿಥೇನ್ ಅಂಶವಿದ್ದರೆ ಮಾತ್ರ ವಿದ್ಯುತ್ ಉತ್ಪಾದನೆಯಾಗಲಿದೆ. ಹೀಗಾಗಿ, ಅಮೂಲ್ಯ ತ್ಯಾಜ್ಯವೂ ವ್ಯರ್ಥವಾಗಲಿದೆ’ ಎನ್ನುವುದು ಘನತ್ಯಾಜ್ಯ ನಿರ್ವಹಣಾ ದುಂಡು ಮೇಜು (ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ರೌಂಡ್ ಟೇಬಲ್) ಸಂಸ್ಥೆಯ ಸದಸ್ಯೆ ಸವಿತಾ ಹಿರೇಮಠ ಪ್ರತಿಪಾದಿಸುತ್ತಾರೆ. “ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅನುಪಯುಕ್ತ ತ್ಯಾಜ್ಯವನ್ನಷ್ಟೇ ಬಳಸುತ್ತಾರೆ ಎನ್ನುವ ವಾದವನ್ನೂ ಒಪ್ಪಲು ಸಾಧ್ಯವಿಲ್ಲ. ಘಟಕದ ಸುತ್ತಲಿನ ಪರಿಸರದ ಮೇಲೆ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದೂ ಅವರು ಆತಂಕ ವ್ಯಕ್ತಪಡಿಸುತ್ತಾರೆ. “ನಾವು ತ್ಯಾಜ್ಯವನ್ನು ಸುಡುವುದೇ ಇಲ್ಲ. ಬಯೋ ಮಿಥನೈಸೇಷನ್ ಮಾದರಿಯಲ್ಲೇ ಈ ಘಟಕಗಳ ನಿರ್ವಹಣೆ ನಡೆಯಲಿದೆ. ಹಾಗಾಗಿ, ಹಾರುವ ಬೂದಿಯಾಗಲಿ, ಹೊಗೆ ಆಗಲಿ ಬರುವುದಿಲ್ಲ. ಆದ್ದರಿಂದ ಪರಿಸರ ಮಾಲಿನ್ಯದ ಪ್ರಶ್ನೆಯೂ ಉದ್ಭವಿಸುವುದಿಲ್ಲ’ ಎಂದು ಪಾಲಿಕೆ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್ ಖಾನ್ ಸ್ಪಷ್ಟಪಡಿಸುತ್ತಾರೆ.
ಬಯೋ ಮಿಥನೈಸೇಷನ್ ನನೆಗುದಿಗೆ : ಈ ಮಧ್ಯೆ ನಗರದಲ್ಲಿ ಉತ್ಪತ್ತಿಯಾಗುವ ಹಸಿತ್ಯಾಜ್ಯ (ಆರ್ಗಾನಿಕ್ ವೇಸ್ಟ್) ಬಳಸಿ ವಿದ್ಯುತ್ ಉತ್ಪಾದಿಸುವ ಮತ್ತು ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬಿಬಿಎಂಪಿಯ ಮಹತ್ವದ ಯೋಜನೆಯಾದ ಬಯೋ ಮಿಥನೈಸೇಷನ್ ನೆನೆಗುದಿಗೆ ಬಿದ್ದಿದೆ. ನಗರದ ಕೆ.ಆರ್. ಮಾರುಕಟ್ಟೆ ಸೇರಿದಂತೆ ಒಟ್ಟು 11 ಕಡೆಗಳಲ್ಲಿ ನಾಸಿಕ್ ಮೂಲದ ಅಶೋಕ ಬಯೋಗ್ರೀನ್ ಸಂಸ್ಥೆಯು ಘಟಕ ಸ್ಥಾಪಿಸಿ ನಿರ್ವಹಣೆ ಮಾಡುತ್ತಿತ್ತು. ಆದರೆ, ನಿರ್ವಹಣೆಯಲ್ಲಿ ಲೋಪ ಕಂಡುಬಂದಿದ್ದರಿಂದ ಈ ಸಂಸ್ಥೆಯನ್ನು ಬಿಬಿಎಂಪಿ ಕಪ್ಪುಪಟ್ಟಿಗೆ ಸೇರಿಸಿದೆ. ಪಾಲಿಕೆಯು ಪ್ರತಿ ಘಟಕ ನಿರ್ಮಾಣಕ್ಕೆ 79 ಲಕ್ಷ ರೂ. ಹಾಗೂ 3 ವರ್ಷದ ನಿರ್ವಹಣೆಗೆ 24.25 ಲಕ್ಷ ರೂ. ವ್ಯಯ ಮಾಡಿತ್ತು. ನಾಲ್ಕು ವರ್ಷಗಳಿಂದ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಯಂತ್ರೋಪಕರಣಗಳು ತುಕ್ಕು ಹಿಡಿದಿವೆ.
ಇದಕ್ಕೆ “ಹೊಸ ಟೆಂಡರ್ ಕರೆಯಲಾಗುವುದು ಮತ್ತು ಕೋರ್ಟ್‌ನಲ್ಲಿ ದಾವೆ ಇದೆ’ ಎಂದು ಬಿಬಿಎಂಪಿ ಸಮಜಾಯಿಷಿ ನೀಡುತ್ತದೆ. ಈ ಘಟಕಗಳನ್ನು ಬಿಬಿಎಂಪಿಯೇ ನಿರ್ವಹಣೆ ಮಾಡುವುದಾಗಿಯೂ ಹೇಳಿತ್ತು. ಆದರೆ, ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಈಗ ಕುವೆಂಪುನಗರ, ಮತ್ತಿಕೆರೆ, ಸ್ವಾತಂತ್ರ್ಯ ಉದ್ಯಾನದಲ್ಲಿ ತಲಾ ಒಂದು ಬಯೋಮಿಥನೈಸೇಷನ್ ಕಾರ್ಯನಿರ್ವಹಿಸುತ್ತಿದ್ದು, ಇದರ ನಿರ್ವಹಣೆಯನ್ನು ಮೆಲ್‌ಹ್ಯಾಮ್ ಸಂಸ್ಥೆ ಮಾಡುತ್ತಿದೆ. ಯಡಿಯೂರು ವಾರ್ಡ್‌ನಲ್ಲೂ ಬಯೋಮಿಥನೈಸೇಷನ್ ಘಟಕ ಕಾರ್ಯನಿರ್ವಹಿಸುತ್ತಿದೆ. ಸ್ವಾತಂತ್ರ್ಯ ಉದ್ಯಾನ, ಕೆ.ಆರ್. ಮಾರುಕಟ್ಟೆ, ನಾಗಪುರ, ಕೋರಮಂಗಲ, ಸೌತ್ ಎಂಡ್ ವೃತ್ತದ ಲಕ್ಷ್ಮಣರಾವ್ ಬುಲೇವಾರ್ಡ್, ಕೂಡ್ಲು ಬಳಿಯ ಕೆಸಿಡಿಸಿ ಘಟಕ, ದೊಮ್ಮಲೂರು, ಬೇಗೂರು ಸೇರಿ 11ಕ್ಕೂ ಹೆಚ್ಚು ಕಡೆ ಬಯೋ-ಮಿಥನೈಸೇಷನ್ ಘಟಕ ಸ್ಥಾಪನೆ ಮಾಡಲಾಗಿತ್ತು.
ಆರ್‌ಡಿಎಫ್ ಗೆ ಮುಕ್ತಿ? : ಕನ್ನಹಳ್ಳಿ, ಸಿಗೇಹಳ್ಳಿ ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯ ವಿವಿಧ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಸಂಸ್ಕರಣೆ ನಂತರ ಉಳಿಯುವ ರೆಫ್ಯೂಸ್ ಡಿರೈವ್ ಫುಯಲ್ (ಆರ್‌ಡಿಎಫ್)ಅನ್ನು ವಿಲೇವಾರಿ ಮಾಡುವ ಕಗ್ಗಂಟಾಗಿದೆ. ಅಲ್ಲದೆ, ಮಳೆ ಬಂದಾಗ ಆರ್ ಡಿಎಫ್ನಿಂದ ದುರ್ವಾಸನೆ ಬರುತ್ತಿದ್ದು, ಹಸಿ ತ್ಯಾಜ್ಯ ಸಂಸ್ಕರಣಾ ಘಟಕದ ಸುತ್ತಮುತ್ತಲಿನ ಹಳ್ಳಿಗಳ ಜನ ಸಮಸ್ಯೆ ಎದುರಿಸುತ್ತಿದ್ದಾರೆ. ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆಯಾಗುವ ಘಟಕಗಳನ್ನು ಸ್ಥಾಪನೆ ಮಾಡುವುದರಿಂದ ಈ ಘಟಕದಲ್ಲಿ ಆರ್‌ಡಿಎಫ್ ತಾಜ್ಯ ಬಳಸಬಹುದು. ಶೇ.100ರಷ್ಟು ತ್ಯಾಜ್ಯ ವಿಂಗಡಣೆಯಾದರೂ ಕೊನೆಯ ಹಂತದಲ್ಲಿ ಉಳಿಯುವ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಸವಾಲಿನ ಕೆಲಸ. ಇದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದಕ್ಕೆ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಘಟಕ ಸಹಕಾರಿ ಆಗಲಿದೆ ಎನ್ನುವ ವಾದವೂ ಇದೆ.
ಏನಿದು ಆರ್‌ಡಿಎಫ್? : ಪಾಲಿಕೆಯ ತ್ಯಾಜ್ಯ ಸಂಸ್ಕರಣೆ ಘಟಕಗಳಲ್ಲಿ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ಗೊಬ್ಬರ ತಯಾರಿ ಪ್ರಕ್ರಿಯೆಯಲ್ಲಿ ಗೊಬ್ಬರವಾಗದೆ ಉಳಿಯುವ ಅನುಪಯುಕ್ತ ವಸ್ತುವನ್ನು ಆರ್ ಡಿಎಫ್ ಎನ್ನುತ್ತಾರೆ. ಇದನ್ನು ಪ್ರಮುಖವಾಗಿ ಸಿಮೆಂಟ್ ತಯಾರಿಕೆ ಕಾರ್ಖಾನೆಗಳಲ್ಲಿ ಬಳಸಲಾಗುತ್ತಿದ್ದು, ನಗರದ ಸಮೀಪ ಸಿಮೆಂಟ್ ಕಾರ್ಖಾನೆಗಳಿಲ್ಲದ ಕಾರಣ ಆಂಧ್ರಪ್ರದೇಶದ ಕಾರ್ಖಾನೆಗಳಿಗೆ ಕಳುಹಿಸಲಾಗುತ್ತದೆ.
ಪ್ರತ್ಯೇಕ ಕಾರ್ಪೊರೇಷನ್‌ಗೆ ಎಳ್ಳುನೀರು? : ಗೋವಾ ಮಾದರಿಯಲ್ಲಿ ಬೆಂಗಳೂರಿನಲ್ಲೂ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಕಾರ್ಪೊರೇಷನ್ ಸ್ಥಾಪಿಸಬೇಕು ಎನ್ನುವ ಪ್ರಸ್ತಾವನೆ ಮುನ್ನಲೆಗೆ ಬಂದಿತ್ತು. ಆದರೆ, ಈಗ ನೇಪಥ್ಯಕ್ಕೆ ಸರಿದಿದೆ. “ಗೋವಾದಲ್ಲಿ ಕಡಿಮೆ ತ್ಯಾಜ್ಯ ಉತ್ಪತ್ತಿ ಮತ್ತು ಜನಸಂಖ್ಯೆ ಕಡಿಮೆ ಇರುವುದರಿಂದ ಅಲ್ಲಿ ಯಶಸ್ವಿಯಾಗಿದೆ. ಆದರೆ, ಬೆಂಗಳೂರಿನಂತಹ ಪ್ರದೇಶಕ್ಕೆ ಇದು ಹೊಂದಾಣಿಕೆ ಆಗುವುದಿಲ್ಲ’ ಎಂದು ಮೇಯರ್ ಎಂ. ಗೌತಮ್ ಕುಮಾರ್ ಹೇಳಿದ್ದಾರೆ. ಇದರೊಂದಿಗೆ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಕಾರ್ಪೊರೇಷನ್ ಸ್ಥಾಪನೆ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ನಗರದ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಲವು ಸಭೆಗಳನ್ನು ನಡೆಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ವೇಸ್ಟ್ ಟು ಎನರ್ಜಿ ಘಟಕವನ್ನು ಕೆಪಿಸಿಎಲ್ ಮೂಲಕ ಸ್ಥಾಪಿಸಲು ಸೂಚಿಸಿದ್ದಾರೆ. ದೆಹಲಿ ಮತ್ತು ಇಂದೋರ್ ಮಾದರಿ ವೇಸ್ಟ್ ಟು ಎನರ್ಜಿ ಘಟಕ ಸ್ಥಾಪನೆ ಚಿಂತನೆ ನಡೆದಿದೆ. ಬೆಂಗಳೂರಿಗೆ ಹೊಂದುವ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ವೈಜ್ಞಾನಿಕವಾಗಿ ಘಟಕಗಳನ್ನು ಸ್ಥಾಪಿಸುತ್ತೇವೆ. -ಎಂ. ಗೌತಮ್ ಕುಮಾರ್, ಮೇಯರ್
-ಹಿತೇಶ್ ವೈ