ಸಾಗರ: ತಾಲೂಕಿನ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಪ್ಪಳಿ ಲಿಂಗದಹಳ್ಳಿ ಗ್ರಾಮದ ರಸ್ತೆ ಪಕ್ಕದಲ್ಲಿ ನಗರದ ವ್ಯಾಪಾರಿಗಳು ತ್ಯಾಜ್ಯಗಳನ್ನು ಎಸೆದು ಹೋಗುತ್ತಿರುವುದರ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಬುಧವಾರ ಸಂಜೆ ಕೊಳೆತ ಪಪ್ಪಾಯಿಗಳನ್ನು ಕಾರಿನಲ್ಲಿ ತಂದು ಎಸೆಯುವಾಗ ನಗರದ ಹಣ್ಣಿನ ವ್ಯಾಪಾರಿಗಳು ಊರಿನ ಜನರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಈ ಕುರಿತಾಗಿ ಗ್ರಾಮಸ್ಥ ಸಮರ್ಥ ಚಿಪ್ಪಳಿ ಮಾತನಾಡಿ, ನಗರಕ್ಕೆ ಅಂಟಿಕೊಂಡಿರುವ ನಮ್ಮ ಗ್ರಾಮದ ರಸ್ತೆ ಆಜುಬಾಜಲ್ಲಿ ಈ ರೀತಿ ಕೊಳೆತ ವಸ್ತುಗಳು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಚೀಲ ಕಟ್ಟಿ ತಂದುಹಾಕುತ್ತಿರುವುದು ಸಾಮಾನ್ಯವಾಗಿದೆ. ನಮ್ಮ ಗ್ರಾಮಗಳ ನೈರ್ಮಲ್ಯದ ಜವಾಬ್ದಾರಿ ಹೊತ್ತಿರುವ ಗ್ರಾಮ ಪಂಚಾಯ್ತಿ ಇಂತಹ ಪ್ರಕರಣಗಳ ನಿರ್ವಹಣೆಯಲ್ಲಿ ಹೆಚ್ಚಿನ ಜವಾಬ್ದಾರಿ ಹೊರಬೇಕು ಎಂದು ಪ್ರತಿಪಾದಿಸಿದರು.
ಕೊಳೆತ ಹಣ್ಣುಗಳನ್ನು ನಗರದ ವ್ಯಾಪಾರಿಗಳು ತಂದುಹಾಕಿದ ಪ್ರಕರಣದಲ್ಲಿ ನಾವು ತಕ್ಷಣದಲ್ಲಿಯೇ ಕಲ್ಮನೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಅವರು ಬೇರೆ ಇಲಾಖೆಗಳನ್ನು ಸಂಪರ್ಕಿಸಲು ಸಲಹೆ ನೀಡಿದರೇ ವಿನಹ ಜವಾಬ್ದಾರಿ ಹೊರಲು ಸಿದ್ದರಾಗಲಿಲ್ಲ. ಇಂತಹ ಸಂದರ್ಭಗಳಲ್ಲಿ ನಾವು ಪೊಲೀಸ್ ಇಲಾಖೆ ಅಥವಾ ಬೇರೆ ಇಲಾಖೆಗಳನ್ನು ಸಂಪರ್ಕಿಸುವುದಕ್ಕಿಂತ ಸರ್ಕಾರಿ ಅಧಿಕಾರಿಯಾಗಿ ಪಿಡಿಓ ಪಂಚಾಯ್ತಿ ಪರವಾಗಿ ದೂರು ಸಲ್ಲಿಸುವುದು ಹೆಚ್ಚು ಮುಖ್ಯವಾಗುತ್ತದೆ ಎಂದರು.
ನಗರಕ್ಕೆ ಅಂಟಿಕೊಂಡಂತಿರುವ ಗ್ರಾಮಪಂಚಾಯ್ತಿಗಳ ಪ್ರದೇಶಗಳಲ್ಲಿ ತ್ಯಾಜ್ಯಗಳನ್ನು ಎಸೆಯುವುದು ಸಾಮಾನ್ಯವಾಗುತ್ತಿದೆ. ಎಡಜಿಗಳೇಮನೆ, ಭೀಮನೇರಿ, ಖಂಡಿಕಾ ಮೊದಲಾದ ಗ್ರಾಮ ಪಂಚಾಯ್ತಿಗಳ ಹಳ್ಳಿಗಳು ಕೂಡ ಇಂತಹ ಸಮಸ್ಯೆ ಅನುಭವಿಸುತ್ತಿವೆ. ತಂತ್ರಜ್ಞಾನದ ಸಹಾಯದಿಂದ ಇಂತಹ ಅಪರಾಧ ಮಾಡಿದವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಗ್ರಾಮ ಪಂಚಾಯ್ತಿಗಳು ದಾಖಲಿಸಬೇಕು ಎಂಬ ಅಭಿಪ್ರಾಯ ಬಲವಾಗುತ್ತಿದೆ.
ಇದನ್ನೂ ಓದಿ: Hunsur: ಲೈಂಗಿಕ ಕಿರುಕುಳ ಆರೋಪ- ಮುಖ್ಯ ಶಿಕ್ಷಕ ಸಸ್ಪೆಂಡ್