Advertisement

ಉಚ್ಚಿಲ -ಪಣಿಯೂರು ರಸ್ತೆಯಲ್ಲಿ  ತ್ಯಾಜ್ಯ

06:00 AM Jul 11, 2018 | Team Udayavani |

ಕಾಪು: ನೂರಾರು ವಾಹನಗಳು ಓಡಾಡುತ್ತಿರುವ ಉಚ್ಚಿಲ – ಪಣಿಯೂರು ರಸ್ತೆ ಬದಿಯ ಚರಂಡಿಯು ತ್ಯಾಜ್ಯದ ಕೊಂಪೆಯಾಗಿ ಬೆಳೆಯುತ್ತಿದೆ. ಉಚ್ಚಿಲದಿಂದ ಮೂರು ಕಿ.ಮೀ. ದೂರದವರೆಗಿನ ರಸ್ತೆ ಪಕ್ಕದ ಚರಂಡಿಯ ಉದ್ದಕ್ಕೂ ಶೇಖರಣೆಗೊಂಡಿರುವ ಕಸ – ತ್ಯಾಜ್ಯದ ರಾಶಿ ರೋಗ ಉತ್ಪಾದನಾ ಕೇಂದ್ರವಾಗಿ ಪರಿವರ್ತನೆಗೊಳ್ಳುತ್ತಿದೆ.

Advertisement

ಬಡಾ ಗ್ರಾ.ಪಂ. ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಜಂಕ್ಷನ್‌ನಿಂದ ಪಣಿಯೂರು, ಎಲ್ಲೂರು, ಮುದರಂಗಡಿಗೆ ತೆರಳುವ ರಸ್ತೆಯ ಪಕ್ಕದಲ್ಲಿ  (ಭಾಸ್ಕರ ನಗರ, ಪೊಲ್ಯ ರಸ್ತೆ ಬಳಿ) ಜನ ಎಲ್ಲೆಂದರಲ್ಲಿ  ತ್ಯಾಜ್ಯ ವಸ್ತುಗಳನ್ನು ಎಸೆದು ಹೋಗುವ ಮೂಲಕ ಪರೋಕ್ಷವಾಗಿ ತಾವೇ ತ್ಯಾಜ್ಯದ ಕೊಂಪೆ ಬೆಳೆಯಲು ಕಾರಣರಾಗುತ್ತಿದ್ದಾರೆ.

ರಸ್ತೆಯ ಇಕ್ಕೆಲಗಳಲ್ಲಿ ಇರುವ ಮಳೆ ನೀರು ಹರಿಯುವ ಚರಂಡಿಗಳಲ್ಲಿ ದಿನದಿಂದ ದಿನಕ್ಕೆ ತ್ಯಾಜ್ಯದ ರಾಶಿ ಬೆಳೆಯುತ್ತಾ ಹೋಗುತ್ತಿದ್ದು, ಇದರಿಂದಾಗಿ ಲೋಕೋಪಯೋಗಿ ರಸ್ತೆ ಬದಿಯಲ್ಲಿ ಮಳೆ ನೀರು ಹರಿಯಲೆಂದು ರಚಿಸಿರುವ ಚರಂಡಿ ವ್ಯವಸ್ಥೆಯೇ ಮಾಯವಾಗಿ ಬಿಟ್ಟಿದೆ. ಚರಂಡಿಯಲ್ಲಿ ಕಸ, ಕಡ್ಡಿ ಮತ್ತು ತ್ಯಾಜ್ಯ ವಸ್ತುಗಳನ್ನು ಎಸೆದು ಪ್ರಯೋಜನಕ್ಕೆ ಬಾರದ ವ್ಯವಸ್ಥೆಯನ್ನಾಗಿಸಿ ಬಿಟ್ಟಿರುವುದರಿಂದ ಮಳೆ ನೀರು ಚರಂಡಿಯ ಬದಲಾಗಿ ರಸ್ತೆಯಲ್ಲೇ ಹರಿಯುವಂತಾಗಿದೆ. ಇದರಿಂದಾಗಿ ಉಚ್ಚಿಲ – ಪಣಿಯೂರು ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳಿಗೆ ಹಾಗೂ ದ್ವಿಚಕ್ರ ವಾಹನ ಸಹಿತ ಎಲ್ಲಾ ವಾಹನ ಸವಾರರಿಗೆ ಮಳೆ ನೀರಿನ ಸಿಂಚನದ ಜೊತೆಗೆ ತ್ಯಾಜ್ಯದ ಗಬ್ಬು ವಾಸನೆಯ ಸ್ವಾಗತ ಕಿರಿ ಕಿರಿಯನ್ನುಂಟು ಮಾಡುತ್ತಿದೆ. ಇಲ್ಲಿ ಬಿಸಾಡಿದ ತ್ಯಾಜ್ಯಗಳನ್ನು ತಿನ್ನಲು ಬರುವ ಬೀದಿ ನಾಯಿಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ವಾಹನ ಸವಾರರಿಗೆ ಅಪಘಾತದ ಭೀತಿಯನ್ನು ಸೃಷ್ಟಿಸಿದೆ.

ಗ್ರಾ.ಪಂ. ಎಚ್ಚೆತ್ತುಕೊಳ್ಳಲಿ
ಉಚ್ಚಿಲ – ಪಣಿಯೂರು ರಸ್ತೆ ಬದಿಯಲ್ಲಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಿ ಮತ್ತು ಚರಂಡಿ ವ್ಯವಸ್ಥೆಗಳನ್ನು ಸರಿ ಮಾಡಿ ಕೊಟ್ಟು ಆವಶ್ಯಕವಾಗಿ ಬೇಕಾದ ಕಸ ಹಾಕುವ ವ್ಯವಸ್ಥೆಯನ್ನು ಮಾಡಿಕೊಡುವುದು ಸ್ಥಳೀಯ ಗ್ರಾ.ಪಂ.ನ ಜವಾಬ್ದಾರಿಯಾಗಿದೆ. ಈ ಬಗ್ಗೆ ಗ್ರಾಮ ಪಂಚಾಯತ್‌ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಸಂದೀಪ್‌ ಪೂಜಾರಿ , ನಿತ್ಯ ಸಂಚಾರಿ

ಕಸ ಮುಕ್ತ ಬಡಾ ಗ್ರಾ.ಪಂ. ನಿರ್ಮಾಣಕ್ಕೆ ಪ್ರಯತ್ನ
ಉಚ್ಚಿಲ ಬಡಾ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ತ್ಯಾಜ್ಯದ ಸಮಸ್ಯೆ ಬಹುವಾಗಿ ಕಾಡುತ್ತಿದೆ. ತ್ಯಾಜ್ಯ ವಿಲೇವಾರಿಗೆ ಸಮರ್ಪಕ ಭೂಮಿಯ ಕೊರತೆಯಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಕಂದಾಯ ಇಲಾಖೆ ಮೂಲಕ ಜಾಗ ದೊರಕಿಸಿಕೊಡುವಂತೆ ಒತ್ತಾಯಿಸಲಾಗಿದೆ. ಅಧಿಕೃತವಾಗಿ ಜಾಗ ಮಂಜೂರಾದ ಬಳಿಕ ಕಸ ಸಂಗ್ರಹಣೆ ಮತ್ತು ಸಂಗ್ರಹಿಸಿದ ಕಸವನ್ನು ವಿಂಗಡಿಸುವ ಯುನಿಟ್‌ನ್ನು ಪ್ರಾರಂಭಿಸಿ, ಕಸ ಮುಕ್ತ ಬಡಾ ಗ್ರಾ.ಪಂ. ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು.
ಕುಶಾಲಿನಿ , ಪಿಡಿಒ, ಬಡಾ ಗ್ರಾ.ಪಂ.

Advertisement
Advertisement

Udayavani is now on Telegram. Click here to join our channel and stay updated with the latest news.

Next