Advertisement

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

04:37 PM Apr 05, 2024 | Team Udayavani |

ದೊಡ್ಡಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳಿಂದಲೂ ಆಕಾಂಕ್ಷಿಗಳು ಟಿಕೆಟ್‌ಗಾಗಿ ಕಸರತ್ತು ನಡೆಸಿ, ಅಂತಿಮವಾಗಿ ವರಿಷ್ಠರ ಸೂಚನೆಯಂತೆ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ. ನಾಮಪತ್ರ ಸಲ್ಲಿಸುವ ಅವಧಿ ಮುಕ್ತಾಯವಾಗಿದೆ. ಈ ಬಾರಿ ಕ್ಷೇತ್ರದಲ್ಲಿ ಚುಣಾವಣೆ ಫಲಿತಾಂಶ ಏನಾಗಲಿದೆ ಎನ್ನುವ ಕುತೂಹಲ ಸಹಜವಾಗಿದೆ. ಜಾತೀಯತೆಯೂ ನಡೆಯದು: ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳು ನಿರ್ಣಾಯಕವಾಗಿದ್ದರೂ ಸಹ ಇಲ್ಲಿ ಜಾತಿ ರಾಜಕಾರಣ ನಡೆದಿರುವ ಉದಾಹರಣೆಗಳಿಲ್ಲ ಎನ್ನುವುದ್ದಕ್ಕೆ ಕಡಿಮೆ ಜನಸಂಖ್ಯೆಯಲ್ಲಿನ ಜಾತಿ ಪ್ರತಿನಿ ಧಿಸಿದ್ದ ವಿ.ಕೃಷ್ಣರಾವ್‌ ಹಾಗೂ ಆರ್‌.ಎಲ್‌.ಜಾಲಪ್ಪ ಅವರು ಗೆದ್ದಿರುವುದೇ ನಿದರ್ಶನ.

Advertisement

ಚಿಕ್ಕಬಳ್ಳಾಪುರ ಕ್ಷೇತ್ರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು (ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ) ಚಿಕ್ಕಬಳ್ಳಾಪುರ ಜಿಲ್ಲೆಯ ಮೂರು(ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇ ಪಲ್ಲಿ) ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರವನ್ನೊಳಗೊಂಡಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಚಿಕ್ಕಬಳ್ಳಾಪುರ ಕ್ಷೇತ್ರದ ವ್ಯಾಪ್ತಿಯಲ್ಲಿವೆ.

8 ಕ್ಷೇತ್ರಗಳಲ್ಲಿ 5ರಲ್ಲಿ ಕಾಂಗ್ರೆಸ್‌, 2ರಲ್ಲಿ ಬಿಜೆಪಿ ಹಾಗೂ ಗೌರಿಬಿದನೂರು ಕ್ಷೇತ್ರದಲ್ಲಿ ಪಕ್ಷೇತರ ಶಾಸಕರಿದ್ದಾರೆ. ಕಾಂಗ್ರೆಸ್‌ನಿಂದ ಚಿಕ್ಕಬಳ್ಳಾಪುರದ ಪ್ರದೀಪ್‌ ಈಶ್ವರ್‌, ಬಾಗೇಪಲ್ಲಿಯ ಎಸ್‌.ಎನ್‌.ಸುಬ್ಟಾರೆಡ್ಡಿ, ದೇವನಹಳ್ಳಿಯ ಕೆ.ಎಚ್‌.ಮುನಿಯಪ್ಪ, ಹೊಸಕೋಟೆಯ ಶರತ್‌ ಬಚ್ಚೇಗೌಡ ಹಾಗೂ ನೆಲಮಂಗಲದ ಶ್ರೀನಿವಾಸ್‌, ಬಿಜೆಪಿಯಿಂದ ಯಲಹಂಕದ ಎಸ್‌. ಆರ್‌.ವಿಶ್ವನಾಥ್‌, ದೊಡ್ಡಬಳ್ಳಾಪುರದ ಧೀರಜ್‌ ಮುನಿ ರಾಜ್‌ ಹಾಗೂ ಪಕ್ಷೇತರರಾಗಿ ಗೌರಿಬಿದನೂರಿನಿಂದ ಪುಟ್ಟಸ್ವಾಮಿ ಗೌಡ ಶಾಸಕರಾಗಿದ್ದಾರೆ.

ಕಾಂಗ್ರೆಸ್‌ ಕೋಟೆಗೆ ಬಿಜೆಪಿ ಲಗ್ಗೆ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ತನ್ನದೇ ಆದ ಅಸ್ತಿತ್ವ ಹೊಂದಿದ್ದು, ಕ್ಷೇತ್ರ ವಿಂಗಡನೆ ಆದಾಗಿನಿಂದಲೂ ಒಂದು ಬಾರಿ ಜನತಾದಳ ಗೆದ್ದಿದ್ದು, ಹೊರತುಪಡಿಸಿದರೆ ಎಲ್ಲಾ ಚುನಾವಣೆಗಳಲ್ಲಿಯೂ ಕಾಂಗ್ರೆಸ್‌ ಪಕ್ಷವೇ ಜಯಗಳಿಸಿದೆ. ಕಳೆದ ಬಾರಿ ಕಾಂಗ್ರೆಸ್‌ ಕೋಟೆಗೆ ಬಿಜೆಪಿ ಲಗ್ಗೆಯಿಟ್ಟಿದ್ದು, ಈ ಬಾರಿಯ ಚುನಾವಣೆ ಕುತೂಹಲ ಕೆರಳಿಸಿದೆ.

ಕಾಂಗ್ರೆಸ್‌ ಗೆಲುವು: 1977ರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರ ಮರು ವಿಂಗಡನೆಯಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂ.ವಿ.ಕೃಷ್ಣಪ್ಪ ಬಿ.ಎಲ್‌.ಡಿ ಪಕ್ಷದ ಜಿ.ನಾರಾಯಣ ಗೌಡ ಅವರನ್ನು ಪರಾಭವಗೊಳಿಸಿದ್ದರು. 1980ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಸ್‌.ಎನ್‌.ಪ್ರಸನ್ನ ಕುಮಾರ್‌ ಅವರು ಜನತಾ ಪಕ್ಷದ ಲಕ್ಷ್ಮೀನರಸಿಂಹಯ್ಯ ಅವರನ್ನು ಪರಾಭವಗೊಳಿಸಿದ್ದರು.

Advertisement

ಕಾಂಗ್ರೆಸ್‌ನ ವಿ.ಕೃಷ್ಣರಾವ್‌ ಹ್ಯಾಟ್ರಿಕ್‌: 1984 ಹಾಗೂ 1991ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿ.ಕೃಷ್ಣರಾವ್‌ ಅವರು ಜನತಾ ಪಕ್ಷದ ಆರ್‌.ಎಲ್‌.ಜಾಲಪ್ಪ ಹಾಗೂ 1989ರಲ್ಲಿ ಜನತಾ ದಳದ ಚಂದ್ರಶೇಖರ್‌ ಅವರನ್ನು ಪರಾಭವಗೊಳಿಸಿ, ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದರು. 2009ರಲ್ಲಿ ಕಾಂಗ್ರೆಸ್‌ನ ಎಂ.ವೀರಪ್ಪ ಮೊಯಿಲಿ ಬಿಜೆಪಿಯ ಸಿ.ಅಶ್ವತ್ಥನಾರಾಯಣ ಅವರನ್ನು ಸೋಲಿಸಿ ದ್ದರು. ನಂತರ 2014ರಲ್ಲಿ ಬಿಜೆಪಿಯ ಬಿ.ಎನ್‌.ಬಚ್ಚೇಗೌಡ ಅವರನನ್ನು ಸೋಲಿಸಿದ್ದರು. ಈ ಚುನಾವಣೆ ಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಸ್ಪರ್ಧಿಸಿದ್ದರು.

ಖಾತೆ ತೆರೆದ ಬಿಜೆಪಿ: 2019ರ ಚುನಾವಣೆಯಲ್ಲಿ ಬಿಜೆಪಿಯ ಬಿ.ಎನ್‌.ಬಚ್ಚೇಗೌಡ ಅವರು ಕಾಂಗ್ರೆಸ್‌ನ ಎಂ.ವೀರಪ್ಪ ಮೊಯಿಲಿ ಅವರನ್ನು ಪರಾಭವಗೊಳಿಸಿ, 45 ವರ್ಷಗಳ ನಂತರ ಬಿಜೆಪಿ ಖಾತೆ ತೆರೆದಿದ್ದರು. ಈ ಬಾರಿ ಯಾರಿಗೆ ಒಲವು?: ಹಿಂದುಳಿದ ಹಾಗೂ ಅಹಿಂದ ಮತದಾರರು ನಿರ್ಣಾಯಕರಾಗಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಟಿಕೆಟ್‌ಗಾಗಿ ಡಾ.ಕೆ.ಸುಧಾಕರ್‌, ಶಾಸಕ ಎಸ್‌. ಆರ್‌.ವಿಶ್ವನಾಥ್‌ ಪುತ್ರ ಅಲೋಕ್‌ ವಿಶ್ವನಾಥ್‌ ಪೈಪೋಟಿ ನಡೆಸಿ, ಅಂತಿಮವಾಗಿ ಡಾ.ಕೆ.ಸುಧಾಕರ್‌ ಟಿಕೆಟ್‌ ಪಡೆದು, ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ವೀರಪ್ಪ ಮೊಯ್ಲಿ, ಶಿವಶಂಕರ ರೆಡ್ಡಿ, ರಕ್ಷಾ ರಾಮಯ್ಯ ಟಿಕೆಟ್‌ಗಾಗಿ ಪೈಪೋಟಿ ನಡೆಸಿ ರಕ್ಷಾ ರಾಮಯ್ಯ ಟಿಕೆಟ್‌ ಪಡೆದು ನಾಮಪತ್ರ ಸಲ್ಲಿಸಿದ್ದಾರೆ. ಸಿಪಿಐ(ಎಂ)ನಿಂದ ಮುನಿವೆಂಕಟಪ್ಪ ಸ್ಪರ್ಧಿಸುತ್ತಿದ್ದಾರೆ. ಮತದಾರರ ಒಲವು ಯಾರ ಮೇಲಿದೆಯೋ ಕಾದು ನೋಡಬೇಕಿದೆ.

1996ರಿಂದ ಆರ್‌.ಎಲ್‌.ಜಾಲಪ್ಪ ಶಕೆ: 1996 ರಿಂದ ಆರ್‌.ಎಲ್‌.ಜಾಲಪ್ಪ ಶಕೆ ಪ್ರಾರಂಭವಾಗಿ ಜನತಾದಳದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ವಿ. ಮುನಿ ಯಪ್ಪ ಅವರನ್ನು ಸೋಲಿಸಿದ್ದರು. ನಂತರ 1998ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಆರ್‌.ಎಲ್‌.ಜಾಲಪ್ಪ, ಜನತಾದಳದ ಸಿ.ಭೈರೇಗೌಡ ಅವರನ್ನು ಸೋಲಿಸಿದ್ದರು. ನಂತರ ಕಾಂಗ್ರೆಸ್‌ನಿಂದಲೇ 1999ರಲ್ಲಿ ಎನ್‌.ರಮೇಶ್‌ ಅವರನ್ನು, 2004ರಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ನಟ ಶಶಿಕುಮಾರ್‌ ಅವರನ್ನು ಸೋಲಿಸಿದ್ದರು.

ಚಿತ್ರನಟರಿಗೆ ಮಣೆ ಹಾಕದ ಮತದಾರರು : ಅಭಿನಯ ಶಾರದೆ ಜಯಂತಿ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ 1998ರಲ್ಲಿ ಲೋಕಶಕ್ತಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಕಾಂಗ್ರೆಸ್ಸಿನ ಆರ್‌.ಎಲ್‌. ಜಾಲಪ್ಪ ಎದುರು ಒಂದೂವರೆ ಲಕ್ಷ ಮತಗಳ ಅಂತರದಿಂದ ಪರಾಭವಗೊಂಡಿದ್ದರು. 2004ರಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ನಟ ಶಶಿಕುಮಾರ್‌ ಅವರು ಆರ್‌.ಎಲ್‌.ಜಾಲಪ್ಪ ಅವರಿಂದ 60 ಸಾವಿರ ಮತ ಅಂತರದಿಂದ ಪರಾಭವಗೊಂಡಿದ್ದಾರೆ.

-ಡಿ.ಶ್ರೀಕಾಂತ

Advertisement

Udayavani is now on Telegram. Click here to join our channel and stay updated with the latest news.

Next