ಬೆಂಗಳೂರು: ಗ್ರಾಮ ಪಂಚಾಯತ್ ಮಟ್ಟದಲ್ಲಿ ಘನ ಹಾಗೂ ದ್ರವ ತ್ಯಾಜ್ಯ ನಿರ್ವಹಣೆಗೆ ಒತ್ತು ನೀಡಲಾಗಿದ್ದು, ಇದಕ್ಕಾಗಿ ಗ್ರಾಮೀಣ ನೈರ್ಮಲ್ಯ ನೀತಿ ಕಾರ್ಯತಂತ್ರ ಮತ್ತು ಉಪ ವಿಧಿ ಜಾರಿಗೆ ತರಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಯೋಜನೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ರಾಷ್ಟ್ರದಲ್ಲೇ ಮೊದಲು ಎಂಬಂತೆ ರಾಜ್ಯದಲ್ಲಿ ಗ್ರಾಮೀಣ ನೈರ್ಮಲ್ಯ ನೀತಿ ಕಾರ್ಯತಂತ್ರ ಜಾರಿಗೊಳಿಸಿ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ಅನುಷ್ಠಾನ ಮಾಡಲಾಗುತ್ತಿದೆ ಎಂದರು.
ರಾಜ್ಯದ 6,000 ಗ್ರಾ. ಪಂ.ಪೈಕಿ ಇದುವರೆಗೆ 4,768 ಪಂಚಾಯತ್‌ಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಯೋಜನೆಯ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದ್ದು, 289.64 ಕೋ.ರೂ. ಬಿಡುಗಡೆ ಮಾಡಲಾಗಿದೆ. 1,883 ಗ್ರಾ. ಪಂ.ಗಳಲ್ಲಿ ತ್ಯಾಜ್ಯ ನಿರ್ವಹಣೆ ಆರಂಭವಾಗಿದೆ ಎಂದರು.
4,466 ಗ್ರಾಮ ಪಂ.ಗಳಲ್ಲಿ ದ್ರವತ್ಯಾಜ್ಯ ನಿರ್ವಹಣೆಗಾಗಿ 821.40 ಕೋ. ರೂ. ಮೊತ್ತದ ಯೋಜನೆಗೆ ಅನುಮೋದನೆ ನೀಡಿ ಮೊದಲ ಕಂತು 205 . 35 ಕೋ. ರೂ. ಅನ್ನು ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ :ಗಾಮಗಳಲ್ಲಿ ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ ಅಭಿಯಾನ ನಡೆಸಲಾಗಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯ, ಸ್ವಚೊfàತ್ಸವ ಮತ್ತು ನಿತ್ಯೋತ್ಸವ, ಸ್ವಚ್ಛ ಗ್ರಾಮ, ಸ್ವಚ್ಛ ಪರಿಸರ ಆಂದೋಲನವನ್ನೂ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಇದುವರೆಗೆ ಒಟ್ಟು 22.60 ಲಕ್ಷ ಮಂದಿಗೆ ಮೊದಲ ಡೋಸ್, 4.51 ಲಕ್ಷ ಮಂದಿ ಎರಡನೇ ಡೋಸ್ ಕೊರೊನಾ ಲಸಿಕೆ ಪಡೆದಿದ್ದಾರೆ ಎಂದರು.
ಗುತ್ತಿಗೆ ನೌಕರರಿಗೂ ಪರಿಹಾರ: ಗ್ರಾಮ ಪಂಚಾಯತ್ ಮಟ್ಟದ ಗುತ್ತಿಗೆ ನೌಕರರನ್ನು ಖಾಯಂ ಮಾಡುವುದಿಲ್ಲ. ಒಂದೊಮ್ಮೆ ಕೊರೊನಾದಿಂದ ಅವರು ಮೃತಪಟ್ಟಿದ್ದರೆ 30 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ಗ್ರಾಮೀಣ ನೈರ್ಮಲ್ಯ ನೀತಿ ಕಾರ್ಯತಂತ್ರ, ಸ್ವತ್ಛ ಸಂಕೀರ್ಣ ಮತ್ತು ಸ್ವತ್ಛತೆಯ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.
ಪರಿಸರ ಜಾಗೃತಿಗೆ ಚಾಲನೆ : ಕಾರ್ಕಳದ ಜಾಗೃತಿ ಫೌಂಡೇಶನ್ ಮತ್ತು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಸಹಯೋಗದಲ್ಲಿ ರಾಜ್ಯದ ಎಲ್ಲ 6,090 ಗ್ರಾಮ ಪಂಚಾಯತ್‌ಗಳಲ್ಲಿ ವನ ಮೋಹತ್ಸವ ಆಚರಿಸಿ ಪರಿಸರದ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ ಚಾಲನೆ ನೀಡಿದರು.