ಬಜಪೆ: ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಜಾಗದ ಕೊರತೆಯಿಂದಾಗಿ ವಿಲೇವಾರಿಗೆ ತಿಂಗಳಿಗೆ 2.5 ಲಕ್ಷ ರೂ. ಖರ್ಚು ಮಾಡಲಾಗುತ್ತಿತ್ತು.ಇದೇ ಆದಾಯ ಉಳಿಕೆ ಹಾಗೂ ತ್ಯಾಜ್ಯ ನಿರ್ವಹಣೆಗೆ ಸ್ಥಳೀಯಾಡಳಿತವು ವಿನೂತನ ಮಾದರಿ ಯೋಜನೆಯೊಂದನ್ನು ರೂಪಿಸಿದೆ.
ಪಂಚಾಯತ್ ಕಚೇರಿಯ ಸಮೀಪದಲ್ಲಿಯೇ ತ್ಯಾಜ್ಯ ಮಾದರಿ ತೊಟ್ಟಿಯನ್ನು ನಿರ್ಮಿಸಲಾಗಿದೆ. ಶಿಶಿರ ಕಾಂಪೋಸ್ಟ್ (ಬಯೋಮೆಸ್ ಕಾಂಪೋಸ್ಟ್ ) ಮಾದರಿಯಲ್ಲಿ ತ್ಯಾಜ್ಯವನ್ನು ಕಾಂಪೋಸ್ಟ್ ಮಾಡಲಾಗುತ್ತಿದೆ. ಸೋಮವಾರದ ಸಂತೆಯ ತ್ಯಾಜ್ಯ, ಕಸ, ಮಾರುಕಟ್ಟೆ, ಸಮೀಪದ ಹೊಟೇಲ್ ಮತ್ತು ಅಂಗಡಿಗಳ ಹಸಿ ಕಸವನ್ನು ತಂದು ಈ ತೊಟ್ಟಿಗೆ ಹಾಕಲಾಗುತ್ತದೆ.
2 ತೊಟ್ಟಿ ನಿರ್ಮಾಣ :
ಪ್ರಾಯೋಗಿಕವಾಗಿ ಪಟ್ಟಣ ಪಂಚಾಯತ್ ಕಚೇರಿಯ ಹಿಂದುಗಡೆ ಸುಮಾರು 1 ಲಕ್ಷ ರೂ. ವೆಚ್ಚದಲ್ಲಿ 2 ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಅಡಿ ಭಾಗವನ್ನು ಕಲ್ಲಿನಿಂದ ಕಟ್ಟಿ, ಸುತ್ತ ನೆಟ್ ಹಾಕಲಾಗಿದೆ. ಗಾಳಿ ಹೋಗಲು ರಂಧ್ರಗಳನ್ನು ಕೊರೆದ ಮೂರು ಪೈಪ್‌ಗ್ಳನ್ನು ಅಳವಡಿಸಲಾಗಿದೆ. ತ್ಯಾಜ್ಯಕ್ಕೆ ಮರದ ಹುಡಿ ಅಥವಾ ತೆಂಗಿನ ನಾರು ಹುಡಿಯನ್ನು ಹಾಕಲಾಗುತ್ತಿದ್ದು, ಸುಮಾರು 45 ದಿನಗಳ ಕಾಲ ಕಾಂಪೋಸ್ಟ್ ಮಾಡಲಾಗುತ್ತದೆ. ಈ ಎರಡು ತೊಟ್ಟಿಗಳ ಪೈಕಿ ಸುಮಾರು 2 ಟನ್ ಕಾಂಪೋಸ್ಟ್ ಸಿಗಲಿದೆ.
ಸೋಮವಾರ ಸಂತೆಯ ಬಳಿಕ ಪಟ್ಟಣ ಪಂಚಾಯತ್‌ನ ಕಸ ಸಂಗ್ರಹ ವಾಹನವನ್ನು ಅಲ್ಲಿ ನಿಲ್ಲಿಸಲಾಗುತ್ತದೆ. ಸಂತೆಯ ಹಸಿ ತ್ಯಾಜ್ಯವನ್ನು ವಾಹನಕ್ಕೆ ಹಾಕಲಾಗುತ್ತದೆ. ಇದರಿಂದ ಸಂತೆಯ ಪರಿಸರ ಸ್ವತ್ಛತೆಗೆ ಹಾಗೂ ತ್ಯಾಜ್ಯ ವಿಲೇವಾರಿಗೆ ಉಪಕ್ರಮ ಕೈಗೊಂಡತಾಗಿದೆ.
ಜಾಗೃತಿ ಮಾಹಿತಿ :
ಬಜಪೆ ಪ.ಪಂ. ತ್ಯಾಜ್ಯ ಘಟಕಕ್ಕೆ ಜಾಗದ ಕೊರತೆ ಇದೆ. ಪಟ್ಟಣ ಪಂಚಾಯತ್ ಕಚೇರಿಯ ಸಮೀಪದಲ್ಲಿಯೇ ಹಸಿ ಕಸದಿಂದ ಕಾಂಪೋಸ್ಟ್ ತಯಾರಿ ಮಾದರಿ ತೊಟ್ಟಿಯನ್ನು ನಿರ್ಮಿಸಲಾಗಿದೆ. ವಸತಿ ಸಮುಚ್ಚಯಗಳು ಹೆಚ್ಚು ಇರುವುದರಿಂದ ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಬಳಿಕ ಸರಕಾರಿ ಕಚೇರಿಗಳಿಗೆ, ಅಂಗನವಾಡಿ ಕೇಂದ್ರಗಳಿಗೆ, ಶಾಲೆಗಳಿಗೆ ಮಾಹಿತಿ ನೀಡಲಾಗುತ್ತದೆ. ಮನೆಯಲ್ಲಿ ಹಸಿ ಕಸ, ಒಣಕಸ ಬೇರೆ ಬೇರೆ ಮಾಡಿ ನೀಡಿದ್ದಲ್ಲಿ ತ್ಯಾಜ್ಯ ವಿಲೇವಾರಿ ಸುಲಭವಾಗಲಿದೆ.
– ಪೂರ್ಣಕಲಾ ವೈ.ಕೆ., ಮುಖ್ಯಾಧಿಕಾರಿ, ಬಜಪೆ ಪ.ಪಂ.