ವಾಡಿ: ಪಟ್ಟಣದ ಹೊರ ವಲಯದಲ್ಲಿರುವ ಸ್ಥಳೀಯ ಪುರಸಭೆಗೆ ಸೇರಿದ ಕಸ ವಿಲೇವಾರಿ ಘಟಕ ಕಸ ಸಂಸ್ಕರಣೆಗೆ ಬಳಕೆಯಾಗದೆ, ಕೇವಲ ಕಸ ಸುಡುವ ಕಾರ್ಯಕ್ಕೆ ಮಾತ್ರ ಬಳಕೆಯಾಗುತ್ತಿದೆ. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ನಿತ್ಯ ಸಂಗ್ರಹವಾಗುವ ಅಪಾರ ಪ್ರಮಾಣದ ಘನತ್ಯಾಜ್ಯ, ಒಣ ಕಸ ಮತ್ತು ಹಸಿ ಕಸ ಬೇರ್ಪಡಿಸದೆ ಎಲ್ಲವೂ ಒಂದೆಡೆ ಸೇರಿಸಿ ಗುಡ್ಡೆ ಹಾಕುವ ಮೂಲಕ ಕಡ್ಡಿ ಗೀರಲಾಗುತ್ತಿದೆ.
ಕಸ ವಿಂಗಡಿಸಿ ಪ್ರತ್ಯೇಕ ತೊಟ್ಟಿಗಳಲ್ಲಿ ಹಾಕುವ ವ್ಯವಸ್ಥೆ ಮಾಡಬೇಕಾದ ಪುರಸಭೆ ಅಧಿಕಾರಿಗಳು, ಪೌರಕಾರ್ಮಿಕರು ವಿಲೇವಾರಿ ಮಾಡಿದ ಕಸದ ರಾಶಿಯನ್ನು ಗಾಳಿಗೆ ಹಾರಿ ಹೋಗುವಂತೆ ಹಾಗೂ ಮಳೆ, ಬಿಸಿಲಿಗೆ ಕೊಳೆಯುವಂತೆ ನೋಡಿಕೊಳ್ಳುತ್ತಿರುವುದು ಇವರ ಕರ್ತವ್ಯ ಕಾರ್ಯವೈಖರಿಗೆ ಕನ್ನಡಿ ಹಿಡಿದಂತಿದೆ.
ಕೇವಲ ನಿವೇಶನ ರೂಪದಲ್ಲಿದ್ದ ಪಟ್ಟಣದ ಕಸ ವಿಲೇವಾರಿ ಘಟಕದ ಅಭಿವೃದ್ಧಿಗೆ 2015/16ನೇ ಸಾಲಿನಲ್ಲಿ ಪುರಸಭೆ ಅನುದಾನದಡಿ ಒಟ್ಟು 2 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಅಂದಿನ ಮುಖ್ಯಾಧಿಕಾರಿ, ಹಾಲಿ ಪುರಸಭೆ ತಹಶೀಲ್ದಾರ ಕೆ.ಆನಂದಶೀಲ ಹಾಗೂ ಪುರಸಭೆಯ ಅಂದಿನ ಅಧ್ಯಕ್ಷ ಭಾಗವತ ಸುಳೆ ಕಸ ಸಂಸ್ಕರಣಾ ಘಟಕ ಸ್ಥಾಪನೆಗೆ ಮುಂದಾಗಿದ್ದರು.
ಕಸ ವಿಂಗಡಿಸುವ ವೈಬ್ರೋ ಸ್ಕ್ರೀನಿಂಗ್ ಮಶೀನ್ ಹಾಗೂ ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ಲಕ್ಷಾಂತರ ರೂ. ವೆಚ್ಚದ ಯಂತ್ರಗಳನ್ನು ಖರೀದಿಸಿ ಘಟಕದಲ್ಲಿರಿಸಿದ್ದರು. ಯಂತ್ರಗಳ ಬಳಕೆ ಮಾತ್ರ ಇಂದಿಗೂ ಸಾಧ್ಯವಾಗಿಲ್ಲ. ಕಸವನ್ನು ಕೊಳೆಸಿ ಒಣಗಿಸಲು ದೊಡ್ಡ ಹೊಂಡವನ್ನೇ ನಿರ್ಮಿಸಲಾಗಿದೆ.
ಆದರೂ ಹಿಡಿ ಗೊಬ್ಬರ ಸಿದ್ಧಪಡಿಸಲಾಗಿಲ್ಲ. ಘಟಕದಲ್ಲಿ ನೂರಾರು ಟನ್ ಘನತ್ಯಾಜ್ಯ ಕಸ ಮರುಬಳಕೆಯಾಗದೆ ಬೇಕಾಬಿಟ್ಟಿ ಹರಡಿಕೊಂಡಿದೆ. 2 ಕೋಟಿ ರೂ. ವೆಚ್ಚದ ಕಸ ಸಂಸ್ಕರಣಾ ಘಟಕ ನಿರುಪಯುಕ್ತವಾಗಿದೆ. ಕಸ ವಿಂಗಡಿಸಿ ಗೊಬ್ಬರ ತಯಾರಿಸುವ ಎರಡು ಯಂತ್ರಗಳು ವಿದ್ಯುತ್ ಸಂಪರ್ಕ ಕಾಣದೆ ಕೊಳೆಯುತ್ತಿವೆ.
ಕಸ ವಿಲೇವಾರಿ ಘಟಕದಲ್ಲಿನ ತ್ಯಾಜ್ಯದ ಕಸವನ್ನು ರಸವನ್ನಾಗಿ ಪರಿವರ್ತಿಸುವಲ್ಲಿ ಅಧಿಧಿಕಾರಿಗಳು ವಹಿಸಿರುವ ಬೇಜವಾಬ್ದಾರಿ ಧೋರಣೆಗೆ ಸಾರ್ವಜನಿಕರ ತೆರಿಗೆಯಿಂದ ಸಂಗ್ರಹವಾದ ಕೋಟ್ಯಂತರ ರೂ. ಅನುದಾನ ಕಸದ ರಾಶಿ ಪಾಲಾಗಿದೆ. ಇದು ಕಸ ಸುಡುವ ಕೇಂದ್ರವಾಗಿ ಅಕ್ಷರಶಃ ಸ್ಮಶಾನದಂತೆ ಗೋಚರಿಸುತ್ತಿದೆ.
* ಮಡಿವಾಳಪ್ಪ ಹೇರೂರ