Advertisement

ಕಡಲತಡಿಯ ತ್ಯಾಜ್ಯ ಹೊಳೆಗೆ ಸುರಿದರು!

12:34 AM Feb 12, 2021 | Team Udayavani |

ಕುಂದಾಪುರ: ಸ್ವತ್ಛ ಭಾರತ ಅಭಿಯಾನ ಜಾರಿಯಲ್ಲಿ ಇರುವಂತೆಯೇ ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ಒಂದು ಎಡವಟ್ಟು ನಡೆದಿದೆ. ಕೋಡಿ ಕಡಲತಡಿಯಲ್ಲಿ ಸ್ವತ್ಛತ ಕಾರ್ಯಕರ್ತರು ಸಂಗ್ರಹಿಸಿದ ತ್ಯಾಜ್ಯವನ್ನು ಮತ್ತೆ ಕಡಲಿಗೆ ಸೇರುವಂತೆ ನದಿಗೆ ತಂದು ಎಸೆಯಲಾಗಿದೆ. ಸರಕಾರವೇ ದತ್ತು ತೆಗೆದುಕೊಂಡು ಬೀಚ್‌ ಸ್ವತ್ಛತೆ ಅಂಗವಾಗಿ ಸಂಗ್ರಹಿಸಿದ ತ್ಯಾಜ್ಯವೂ ಈ ರಾಶಿಯಲ್ಲಿದೆ. ಗುರುವಾರ ಈ ಕಸದ ರಾಶಿ ಪತ್ತೆಯಾಗಿದ್ದು ಸಾರ್ವಜನಿಕರು ಸ್ವತ್ಛತಾ ಕಾರ್ಯ ನಡೆಸಿದರು.

Advertisement

ಕ್ಲೀನ್‌ ಕುಂದಾಪುರ
ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್‌ನವರು ಒಂದೂವರೆ ವರ್ಷದಿಂದ ಪ್ರತಿ ವಾರ ಕೋಡಿ, ಬೀಜಾಡಿ, ಗೋಪಾಡಿ ಕಡಲತಡಿಯಲ್ಲಿ ಸ್ವತ್ಛತೆ ನಡೆಸುತ್ತಿದ್ದಾರೆ. ಇದಕ್ಕೆ ಎಫ್ಎಸ್‌ಎಲ್‌ ಇಂಡಿಯಾದವರು ಕೈ ಜೋಡಿಸಿದ್ದಾರೆ. ಅರಣ್ಯ ಇಲಾಖೆ, ಪೊಲೀಸ್‌ ಇಲಾಖೆ ಸೇರಿದಂತೆ ಸರಕಾರದ ಇಲಾಖೆಗಳು, ವೈದ್ಯ, ವಕೀಲ ಸರಕಾರಿ ಎಂದು ನೋಡದೆ ಸಮಾಜದ ಬೇರೆ ಬೇರೆ ಸ್ತರದಲ್ಲಿ ಉದ್ಯೋಗಿಗಳಾಗಿರುವವರು ಪ್ರತಿ ವಾರ ಈ ಅಭಿಯಾನದಲ್ಲಿ ಭಾಗವಹಿಸುತ್ತಿದ್ದಾರೆ. ಅನಂತರ ಕ್ಲೀನ್‌ ಕೋಡಿ ಪ್ರಾಜೆಕ್ಟ್ ಎಂದು ಮತ್ತೂಂದು ಸಂಘಟನೆ ಆರಂಭವಾಗಿ ಅವರೂ ಸ್ವತ್ಛತೆಯಲ್ಲಿ ಭಾಗಿಯಾಗುತ್ತಿದ್ದಾರೆ.

ರಾಶಿ ರಾಶಿ ತ್ಯಾಜ್ಯ ಪತ್ತೆ
ಚರ್ಚ್‌ರೋಡ್‌ ಮೂಲಕ ಕೋಡಿಗೆ ಹೋಗುವಲ್ಲಿ, ಜಟ್ಟಿಗೇಶ್ವರ ದೇವಸ್ಥಾನದ ಎದುರು ನದಿಯಲ್ಲಿ ಕಾಂಡ್ಲಾವನ ಇರುವಲ್ಲಿ ರಾಶಿ ರಾಶಿ ತ್ಯಾಜ್ಯ ಪತ್ತೆಯಾಗಿದೆ. ಲೋಡುಗಟ್ಟಲೆ ತ್ಯಾಜ್ಯ ಇಲ್ಲಿ ನದಿಗೆ ಹೋಗುವಂತೆ ಎಸೆಯಲಾಗಿದೆ. ಒಂದಷ್ಟು ತ್ಯಾಜ್ಯದ ಕಟ್ಟುಗಳು ನದಿಯಲ್ಲಿ ತೇಲುತ್ತಿದ್ದವು. ಕೋಡಿ ಬೀಚ್‌ ದತ್ತು ಸ್ವೀಕಾರದ ಅನ್ವಯ ಸಂಗ್ರಹ ಮಾಡಿ, ವಿಂಗಡಿಸಿ ನೀಡಿದ ತ್ಯಾಜ್ಯದ ಬ್ಯಾಗುಗಳೇ ಇಲ್ಲಿ ಪತ್ತೆಯಾಗಿವೆ. ಎಂಪ್ರಿ ಸಂಸ್ಥೆಯು ಆರಂಭದಿಂದಲೂ ಪುರಸಭೆಗೇ ತ್ಯಾಜ್ಯವನ್ನು ವಿಲೇಗೆ ನೀಡುತ್ತಿದ್ದು ಸ್ವಂತ ಸಾಗಾಟ ವ್ಯವಸ್ಥೆ ಹಾಗೂ ಸ್ವಂತ ವಿಲೇ ವ್ಯವಸ್ಥೆ ಹೊಂದಿಲ್ಲ. ಆದ್ದರಿಂದ ಇದೇ ಚೀಲಗಳು ಇಲ್ಲಿ ಪತ್ತೆಯಾದ ಕಾರಣ ಪುರಸಭೆಯ ತ್ಯಾಜ್ಯ ವಿಲೇ ಕುರಿತು ಎಲ್ಲರ ಅನುಮಾನದ ನೋಟ ನೆಟ್ಟಿದೆ. ಹೀಗೆ ನದಿಗೆ ಎಸೆಯುವುದರಿಂದ ಅದು ಅಲ್ಲೇ ಸಮೀಪದಲ್ಲಿ ಇರುವ ಸಮುದ್ರವನ್ನು ಸೇರಲು ಹೆಚ್ಚು ಸಮಯ ಬೇಕಿಲ್ಲ. ಅಷ್ಟಲ್ಲದೇ ಉಬ್ಬರ ಇಳಿತದ ಸಂದರ್ಭದಲ್ಲೂ ಬೇಗನೇ ಸಮುದ್ರವನ್ನು ಕೂಡಿಕೊಳ್ಳುತ್ತದೆ. ಇದೇ ತ್ಯಾಜ್ಯವನ್ನು ಸಮುದ್ರ ಮತ್ತೆ ತೀರಕ್ಕೆ ತಂದು ಹಾಕುತ್ತದೆ. ಹಾಗೆ ಸಂಗ್ರಹಿಸಿದ್ದನ್ನು ಮತ್ತೆ ಸಮುದ್ರಕ್ಕೇ ಸೇರುವಂತೆ ಎಸೆದ ಬೇಜವಾಬ್ದಾರಿ ವರ್ತನೆಗೆ ಎಲ್ಲೆಡೆ ಖಂಡನೆ ವ್ಯಕ್ತವಾಗಿದೆ.

ಸ್ವಚ್ಛತೆ

ಗುರುವಾರ ತ್ಯಾಜ್ಯ ರಾಶಿ ಇರುವುದು ಗಮನಕ್ಕೆ ಬರುತ್ತಲೇ ವಿವಿಧ ಸಂಘಟನೆಗಳು, ನಾಗರಿಕರು ನದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್, ಎಫ್ಎಸ್‌ಎಲ್‌ ಇಂಡಿಯಾದ ಸ್ವಯಂಸೇವಕರು ದೋಣಿಯಲ್ಲಿ ಹೋಗಿ ನದಿಯಲ್ಲಿನ ತ್ಯಾಜ್ಯದ ಬ್ಯಾಗುಗಳನ್ನು ತಂದರು. ಪುರಸಭೆ ಗಮನಕ್ಕೂ ತರಲಾಯಿತು.

Advertisement

ದತ್ತು ಸ್ವೀಕಾರ
ಈಗ ಕೋಡಿ ಬೀಚನ್ನು ಸರಕಾರದ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನೆ ಸಂಸ್ಥೆ ಕೇಂದ್ರದ ಅನುದಾನದಲ್ಲಿ ದತ್ತು ತೆಗೆದುಕೊಂಡಿದೆ. ನವೆಂಬರ್‌ನಿಂದ ಮಾರ್ಚ್‌ ತನಕ ಪ್ರತಿದಿನ ಸ್ವತ್ಛತಾ ಕಾರ್ಯಕರ್ತರ ಮೂಲಕ ಸ್ವತ್ಛತಾ ಕಾರ್ಯ ನಡೆಸಲಾಗುತ್ತಿದೆ. ಹೀಗೆ ಸಂಗ್ರಹಿಸಿದ ತ್ಯಾಜ್ಯವನ್ನು ಪ್ಲಾಸ್ಟಿಕ್‌, ಚಪ್ಪಲಿ, ಗಾಜು, ಥರ್ಮೋಕೋಲ್‌, ಬಟ್ಟೆ ಎಂದು ಪ್ರತ್ಯೇಕಿಸಿ ಪುರಸಭೆಗೆ ತ್ಯಾಜ್ಯ ವಿಲೇಗೆ ನೀಡಲಾಗುತ್ತಿದೆ.

ನೋಟಿಸ್‌ ನೀಡಲಾಗುವುದು
ದತ್ತು ಸ್ವೀಕಾರ ಅನ್ವಯ ಸಂಗ್ರಹಿಸಿದ ಕಸವನ್ನು ವಿಲೇವಾರಿಗೆ ಪುರಸಭೆಗೆ ನೀಡಲಾಗುತ್ತಿದೆ. ಅವೇ ಬ್ಯಾಗುಗಳೇ ಪತ್ತೆಯಾದ ಕಾರಣ, ತ್ಯಾಜ್ಯ ವಿಲೇಗೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ಪುರಸಭೆಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗುತ್ತಿದೆ. ಶಿಸ್ತುಕ್ರಮಕ್ಕೆ ಆಗ್ರ ಹಿಸಿ ಜಿಲ್ಲಾ ಸಮಿತಿಯಲ್ಲಿ ಶಿಫಾರಸು ಮಾಡಿ, ರಾಜ್ಯ ಸಮಿತಿಗೆ ವರದಿ ಸಲ್ಲಿಸಲಾಗುವುದು.
-ಡಾ| ದಿನೇಶ್‌, ಜಿಲ್ಲಾ ಪ್ರಾದೇಶಿಕ ನಿರ್ದೇಶಕ (ಪರಿಸರ) ಅರಣ್ಯ ಇಲಾಖೆ

ಪುರಸಭೆ ಕಾರ್ಮಿಕರಲ್ಲ
ಕಸದಿಂದ ಗೊಬ್ಬರ ಉತ್ಪಾದನೆ ಮಾಡುತ್ತಿರುವ ಕಾರಣ ಕಸ ಎಷ್ಟಿದ್ದರೂ ಪುರಸಭೆಯ ಘನತ್ಯಾಜ್ಯ ವಿಲೇ ಘಟಕಕ್ಕೆ ಅವಶ್ಯವಿದೆ. ಪುರಸಭೆಯಲ್ಲಿ ಇದಕ್ಕೆ ಸಂಬಂಧಿಸಿದ ಕಾರ್ಮಿಕರನ್ನು, ಚಾಲಕರನ್ನು ವಿಚಾರಿಸಿದ್ದು ಪುರಸಭೆ ವತಿಯಿಂದ ಈ ಲೋಪ ಆಗಿಲ್ಲ. ಕಳೆದ ಮೂರು ವರ್ಷಗಳಿಂದ ಕೋಡಿ ಕಡಲತಡಿಯಿಂದ ಕಸ ವಿಲೇ ಮಾಡಿ ಘನತ್ಯಾಜ್ಯ ವಿಲೇ ಘಟಕಕ್ಕೆ ಸಾಗಿಸಲಾಗುತ್ತಿದೆ. ಹೆಚ್ಚುವರಿ ವಾಹನ ಕೂಡ ತರಿಸಲಾಗಿದ್ದು ಕಸ ವಿಲೇಯಲ್ಲಿ ಅಸಡ್ಡೆ ಮಾಡಿಲ್ಲ.

-ಗೋಪಾಲಕೃಷ್ಣ ಶೆಟ್ಟಿ ಮುಖ್ಯಾಧಿಕಾರಿ, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next