Advertisement
ವಿದ್ಯಾಕಾಶಿ, ಸಾಂಸ್ಕೃತಿಕ ನಗರಿ, ಪೇಢಾ ನಗರಿ ಎಂದೆಲ್ಲ ಕರೆಯಿಸಿಕೊಳ್ಳುವ ನಗರಕ್ಕೆ ಇದೀಗ ತ್ಯಾಜ್ಯ ವಿಲೇವಾರಿ ಸಮಸ್ಯೆ ಎದುರಾಗಿದ್ದು ಒಂದೆಡೆಯಾದರೆ, ಹೊಸತೊಂದು ಮುಜುಗರವನ್ನುಂಟು ಮಾಡುವ ಸಮಸ್ಯೆ ಎದುರಾಗಿದೆ. ನಗರದ ಎಲ್ಲಾ ದಿಕ್ಕಿನ ರಸ್ತೆಗಳಲ್ಲಿಯೂ ಎಲ್ಲೆಂದರಲ್ಲಿ ಶೌಚಾಲಯಗಳಿಂದ ಹೊರಗೆ ತೆಗೆದ ಮಲತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದ್ದು, ಇದು ಸುಸಂಸ್ಕೃತರು ತಲೆ ಎತ್ತಿ ಓಡಾಡದಂತಾಗಿದೆ.
Related Articles
Advertisement
ಮಲತ್ಯಾಜ್ಯ ಎಲ್ಲೆಲ್ಲಿ ಬೀಳುತ್ತಿದೆ?
ಸಂಗ್ರಹಿಸಿದ ಮಲತ್ಯಾಜ್ಯವನ್ನು ಹಳ್ಳಿ ಮತ್ತು ನಗರಗಳ ಮಧ್ಯೆ ರಸ್ತೆಗಳ ಇಕ್ಕೆಲಗಳಲ್ಲಿ ಚೆಲ್ಲಾಡಿ ಹೋಗುತ್ತಿದ್ದಾರೆ. ಈ ಹಿಂದಿನ ವರ್ಷಗಳಲ್ಲಿ ಮಲತ್ಯಾಜ್ಯ ತುಂಬಿಕೊಂಡು ಹೋಗುವ ವಾಹನ ಮಾಲೀಕರೇ ನಗರ ಮತ್ತು ಹಳ್ಳಿಗಳಿಂದ ದೂರವಿದ್ದ ಪ್ರದೇಶದಲ್ಲಿ ಜಾಗ ಖರೀದಿಸಿ ಅಲ್ಲಿ ಹೊಂಡ ತೋಡಿಸಿ ಅದರಲ್ಲಿ ತ್ಯಾಜ್ಯ ಬಿಡುತ್ತಿದ್ದರು. ಆದರೆ ಕಳೆದ ಒಂದು ವರ್ಷದಿಂದ ಅಂದರೆ ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಎಲ್ಲೆಂದರಲ್ಲಿ ಎಸೆಯುವ ಪದ್ಧತಿ ಶುರುವಿಟ್ಟುಕೊಂಡ ತ್ಯಾಜ್ಯ ಸಂಗ್ರಹಣೆಗಾರರು, ಹು-ಧಾ ಬೈಪಾಸ್ ಅಕ್ಕಪಕ್ಕ, ಧಾರವಾಡದಿಂದ ಇತರ ನಗರಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆಗಳ ಇಕ್ಕೆಲುಗಳಲ್ಲಿ, ಗ್ರಾಮಗಳ ಗೋಮಾಳ, ಕೆರೆ ಕುಂಟೆಗಳಲ್ಲಿ ಅಷ್ಟೇಯಲ್ಲ, ಕುಡಿಯುವ ನೀರಿನ ಕೆರೆಯಂಗಳದಲ್ಲಿಯೂ ಮಲತ್ಯಾಜ್ಯ ಬಿಸಾಕಿ ಹೋಗುತ್ತಿದ್ದಾರೆ. ಬೈಪಾಸ್ ರಸ್ತೆಯಲ್ಲಿ ಬಿದ್ದ ತ್ಯಾಜ್ಯವಂತೂ ಮಳೆಯಾದರೆ ನೇರವಾಗಿ ಅಕ್ಕಪಕ್ಕದ ಗ್ರಾಮಗಳ ಕೆರೆಯಂಗಳಕ್ಕೆ ಸೇರುತ್ತದೆ.
ಶಿಸ್ತುಬದ್ಧ ತ್ಯಾಜ್ಯ ವಿಲೇವಾರಿ ಕ್ರಮ ಅತ್ಯಗತ್ಯ
ಜಿಲ್ಲೆಯಲ್ಲಿ 1.76 ಲಕ್ಷ ಶೌಚಾಲಯಗಳು ಬಳಕೆಯಲ್ಲಿವೆ. ನಗರದಲ್ಲಿದ್ದಂತೆ ಗ್ರಾಮೀಣ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಈ ಪೈಕಿ ಅರ್ಧದಷ್ಟು ಶೌಚಾಲಯಗಳಿಗೆ ತಿಪ್ಪೆಗುಂಡಿ, ಗೋಬರ್‌ಗ್ಯಾಸ್ ಸಂಪರ್ಕವೂ ಉಂಟು. ಆದರೆ ಕಡಿಮೆ ಜಾಗ, ಹಿತ್ತಲುಗಳ ಕೊರತೆ ಇರುವಲ್ಲಿ ಮಾತ್ರ ಶೌಚಾಲಯ ತ್ಯಾಜ್ಯ ಹೊರಹಾಕಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಮಲದಗುಂಡಿ ಯಂತ್ರಗಳ ಸಹಾಯದಿಂದಲೇ ಸ್ವತ್ಛವಾಗಬೇಕಿದೆ. ಬಯಲು ಶೌಚಾಲಯ ಪದ್ಧತಿ ನಿರ್ಮೂಲನೆಗೆ ಜಿಪಂ ಮತ್ತು ಮಹಾನಗರ ಪಾಲಿಕೆ ದಶಕಗಳ ಕಾಲ ಪ್ರಯತ್ನಿಸಿ ಯಶಸ್ವಿಯಾಗಿದೆ. ಇದೀಗ ಮಲತ್ಯಾಜ್ಯ ವಿಲೇವಾರಿಗೂ ಒತ್ತು ನೀಡಿ ಅದರ ಸದ್ಭಳಕೆ ಅಥವಾ ಅದನ್ನು ಇತರರಿಗೆ ಕಿರಿಕಿರಿಯಾಗದಂತೆ ವಿಲೇವಾರಿ ಮಾಡುವ ಶಿಸ್ತುಬದ್ಧ ಕ್ರಮ ರೂಪಿಸಬೇಕಿದೆ.
ಗ್ರಾಮಗಳ ರಸ್ತೆಗಳ ಅಕ್ಕಪಕ್ಕವೇ ರಾತ್ರೋರಾತ್ರಿ ಶೌಚಾಲಯದ ಮಲತ್ಯಾಜ್ಯ ಚೆಲ್ಲಿ ಹೋಗುತ್ತಿದ್ದಾರೆ. ಶಿಸ್ತುಬದ್ಧ ವಿಲೇವಾರಿಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಬೇಕು. ನಾಗರಿಕ ಸಮಾಜ ಬಯಲು ಶೌಚ ಪದ್ಧತಿ ನಿರ್ಮೂಲನೆ ಮಾಡಿದಂತೆ ಅಶಿಸ್ತಿನ ಮಲತ್ಯಾಜ್ಯ ವಿಲೇವಾರಿಯನ್ನು ಕೊನೆಗಾಣಿಸಬೇಕು.
–ಪ್ರಕಾಶ ಪಾಟೀಲ, ಬಾಡ ನಿವಾಸಿ
ಮಲತ್ಯಾಜ್ಯ ಅತ್ಯುತ್ತಮ ಗೊಬ್ಬರವಾಗಿದ್ದು, ಇದನ್ನು ಕೃಷಿಗೆ ಬಳಕೆ ಮಾಡಕೊಳ್ಳಬಹುದು. ಬಯೋಗ್ಯಾಸ್ ಜೊತೆ ಶೌಚಾಲಯ ಸಂಪರ್ಕ, ಮಲಮೂತ್ರಗಳ ವಿಭಾಗೀಸುವ ಪದ್ಧತಿಯ ಆಯ್ಕೆ ಕುರಿತು ಹಳ್ಳಿಗರಲ್ಲಿ ಜಾಗೃತಿ ಮೂಡಬೇಕು. ಮನಸ್ಸಿನಲ್ಲಿನ ಜಾಡ್ಯ ಬಿಡಬೇಕು.
-ಡಾ| ಪ್ರಕಾಶ ಭಟ್, ಸುಸ್ಥಿರ ಅಭಿವೃದ್ಧಿ ಚಿಂತಕ