Advertisement

ತ್ಯಾಜ್ಯ ವಿಲೇವಾರಿ: ಪುತ್ತೂರು: ಪ್ರಥಮ ಸ್ಥಾನದ ಗುರಿ

04:16 PM Feb 05, 2022 | Team Udayavani |

ಪುತ್ತೂರು: ತ್ಯಾಜ್ಯ ವಿಂಗಡನೆಯಲ್ಲಿ ರಾಜ್ಯದಲ್ಲೇ 6ನೇ ಸ್ಥಾನದಲ್ಲಿರುವ ನಗರಸಭೆ ಮುಂಬರುವ ದಿನಗಳಲ್ಲಿ ನಂಬರ್‌ ವನ್‌ ಸ್ಥಾನಕ್ಕೇರಿಸಲು ತ್ಯಾಜ್ಯ ಶೂನ್ಯ ವಲಯ ನಿರ್ಮಾಣಕ್ಕೆ ಮುಂದಡಿ ಇಟ್ಟಿದೆ.

Advertisement

ಜಿಲ್ಲಾಕೇಂದ್ರವಾಗಿ ರೂಪುಗೊಳ್ಳುವ ಪುತ್ತೂರಿನಲ್ಲಿ ತ್ಯಾಜ್ಯವನ್ನು ವೈಜ್ಞಾಕವಾಗಿ ನಿರ್ವಹಿಸಲು ನಾಲ್ಕೂವರೆ ಕೋ. ರೂ.ಗಳ ಮೆಗಾ ಯೋಜನೆಯ ಕಾರ್ಯ ಆರಂಭಗೊಂಡಿದೆ.

ಹಸಿಕಸ, ಒಣಕಸ ವಿಂಗಡಣೆ
ಈ ಹಿಂದೆ ನಗರಸಭೆ ವ್ಯಾಪ್ತಿಯಲ್ಲಿ ಬೇಕಾಬಿಟ್ಟಿ ತ್ಯಾಜ್ಯ ರಾಶಿ ಹಾಕಿ ಅಲ್ಲಿಂದ ತ್ಯಾಜ್ಯ ಆಯ್ದು ಬನ್ನೂರಿನ ಲ್ಯಾಂಡ್‌ಫಿಲ್‌ ಸೈಟ್‌ನಲ್ಲಿ ಸುರಿಯಲಾಗುತ್ತಿತ್ತು. ಈ ತ್ಯಾಜ್ಯದಿಂದ ಪರಿಸರ ಹಾನಿ ಯಾಗುತ್ತಿದೆ ಎಂದು 1 ಕೋಟಿ ರೂ. ವ್ಯಯಿಸಿ ನಗರಸಭೆಯಿಂದ ಬನ್ನೂರು ಡಂಪಿಂಗ್‌ ಯಾರ್ಡ್‌ನಲ್ಲಿ ಎರೆಹುಳ ಘಟಕ ನಿರ್ಮಿಸಲಾಗಿತ್ತು. ಆದರೆ ಎರೆಹುಳ ಗೊಬ್ಬರ ನಿರ್ಮಾಣ ಘಟಕ ದಲ್ಲಿ ಗೊಬ್ಬರವನ್ನೂ ಉತ್ಪಾದನೆ ಮಾಡಲಾಗಿಲ್ಲ.

ಅವೈಜ್ಞಾನಿಕ ತ್ಯಾಜ್ಯ ಸಂಗ್ರಹ, ನಿರ್ವಹಣೆ, ಸಂಸ್ಕರಣೆಯಿಲ್ಲದ ವ್ಯವಸ್ಥೆ, ಪಾಳು ಬಿದ್ದಿರುವ ಎರ ಗೊಬ್ಬರ ತಯಾರಿ ವ್ಯವಸ್ಥೆ, ಸ್ಥಳೀಯರಿಗೆ ಪದೇ ಪದೆ ಕಾಡುತ್ತಿರುವ ಅನಾರೋಗ್ಯ ಹೀಗೆ ಸಮಸ್ಯೆಗಳ ಸರಮಾಲೆಯೇ ಇದರ ಹಿಂದೆ ಬೆಳೆದು ನಗರಾಡಳಿತಕ್ಕೂ ತಲೆನೋವಾಗಿ ಪರಿಣಮಿಸಿತ್ತು.

ತ್ಯಾಜ್ಯವನ್ನು ಹಸಿಕಸ ಮತ್ತು ಒಣಕಸ ವಿಂಗಡಿಸಿ ನೀಡುವಂತೆ ಸಾರ್ವಜನಿಕ ಅಭಿಯಾನ, ಮನವರಿಕೆ ಮಾಡಿತು. ಪರಿಣಾಮ ಶೇ. 75ರಷ್ಟು ಮಂದಿ ಹಸಿಕಸ-ಒಣಕಸ ವಿಭಜಿಸಿ ನೀಡುತ್ತಿದ್ದಾರೆ.

Advertisement

ತ್ಯಾಜ್ಯ ವಿಂಗಡನೆ ಯಶಸ್ವಿ
ನಗರಸಭೆಯು ತ್ಯಾಜ್ಯ ವಿಲೇಗೆ ಕೈಗೊಂಡ ಕ್ರಮದಿಂದ ತ್ಯಾಜ್ಯ ವಿಲೇ ವಾರಿಯಲ್ಲಿ ರಾಜ್ಯದಲ್ಲಿ 36ನೇ ಸ್ಥಾನದಲ್ಲಿದ್ದ ಪುತ್ತೂರು ನಗರಸಭೆ 6ನೇ ಸ್ಥಾನಕ್ಕೇರಿದೆ. 82 ಪೌರಕಾರ್ಮಿಕರ ಹುದ್ದೆ ಬೇಕಾಗಿದ್ದರೂ 42 ಪೌರಕಾರ್ಮಿಕರಿಂದ ತ್ಯಾಜ್ಯ ವಿಲೇವಾರಿ ಕಾರ್ಯ ನಡೆಯುತ್ತಿದ್ದು, ನಗರದ 15 ಸಾವಿರಕ್ಕೂ ಮಿಕ್ಕಿದ ಮನೆ, ಕಟ್ಟಡಗಳಿಂದ ದಿನಂಪ್ರತಿ 8 ಟನ್‌ಗಿಂದ ಅಧಿಕ ತ್ಯಾಜ್ಯ ವಿಂಗಡನೆಯಾಗಿಯೇ ಬನ್ನೂರು ಡಂಪಿಂಗ್‌ ಯಾರ್ಡ್‌ ಸೇರುತ್ತಿದೆ.

ಸಿದ್ಧತೆ ಆರಂಭ
ತ್ಯಾಜ್ಯ ವಿಲೇವಾರಿಯಲ್ಲಿ ಪುತ್ತೂರು ರಾಜ್ಯದಲ್ಲೇ ಮೊದಲ ಸ್ಥಾನ ಪಡೆಯಲು ಈಗಾಗಲೇ ಸಿದ್ಧತೆ ನಡೆಸಿದೆ. ನಗರಸಭೆ ವ್ಯಾಪ್ತಿಯಲ್ಲಿ ವೈಜ್ಞಾನಿಕವಾಗಿ ನಿರ್ವಹಿಸುವ ಈ ಬೃಹತ್‌ ಯೋಜನೆಗೆ 4.49 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಶೇ. 35 ಅನ್ನು ಕೇಂದ್ರ ಸರಕಾರ (1.57 ಕೋಟಿ ರೂ.) ಭರಿಸಲಿದೆ. ಶೇ. 23.30(1.04 ಕೋಟಿ ರೂ.) ರಾಜ್ಯ ಸರಕಾರ, ಶೇ. 41.70 (1.87 ಕೋಟಿ ರೂ. ) ನಗರಸಭೆ ಭರ್ತಿ ಮಾಡಲಾಗಿದೆ. ತ್ಯಾಜ್ಯ ಸಂಗ್ರಹ ಮತ್ತು ಸಾಗಾಟ ಯೋಜನೆಗೆ 1.19 ಕೋಟಿ ರೂ., ಸಂಸ್ಕರಣೆ ಮತ್ತು ನಿರ್ವಹಣೆಗೆ 3.30 ಕೋಟಿ ರೂ. ನಿಗದಿ ಮಾಡಲಾಗಿದೆ.

ವಿಂಗಡಿಸಿ ಸಂಗ್ರಹ
ಶೇ. 75ರಷ್ಟು ಹಸಿಕಸ ಮತ್ತು ಒಣಕಸ ವಿಂಗಡನೆಯಾಗಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ತ್ಯಾಜ್ಯ ವಿಲೇವಾರಿಯಲ್ಲಿ ಪುತ್ತೂರು ನಗರಸಭೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ.
-ಜೀವಂಧರ್‌ ಜೈನ್‌,
ಪುತ್ತೂರು ನಗರಸಭೆ ಅಧ್ಯಕ್ಷ

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next