Advertisement

11ರಿಂದ ತ್ಯಾಜ್ಯ ವಿಲೇವಾರಿ ಸ್ಥಗಿತ

11:59 AM Jun 09, 2018 | Team Udayavani |

ಬೆಂಗಳೂರು: ಸಮರ್ಪಕ ತ್ಯಾಜ್ಯ ವಿಲೇವಾರಿ ಆಗದ ಕಾರಣ ಈಗಾಗಲೇ ನಗರದಲ್ಲಿ ತ್ಯಾಜ್ಯ ಸಮಸ್ಯೆ ಸೃಷ್ಟಿಯಾಗಿದ್ದು, ಇದೀಗ ಬಾಕಿ ಬಿಲ್‌ ಪಾವತಿಗೆ ಒತ್ತಾಯಿಸಿ ಲಾರಿ ಮಾಲೀಕರು ಹಾಗೂ ಗುತ್ತಿಗೆದಾರರು ಜೂ.11ರಿಂದ ವಿಲೇವಾರಿ ಸ್ಥಗಿತಗೊಳಿಸಲು ನಿರ್ಧರಿಸಿರುವುದು ಮತ್ತೆ ತ್ಯಾಜ್ಯ ವಿಲೇವಾರಿ ಸಮಸ್ಯೆ ತಾರಕಕ್ಕೇಳುವ ಆತಂಕ ಎದುರಾಗಿದೆ.

Advertisement

ಗುತ್ತಿಗೆ ಪೌರಕಾರ್ಮಿಕರಿಗೆ ವೇತನ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಕಾರ್ಮಿಕರು ಕೆಲ ದಿನಗಳಿಂದ ತ್ಯಾಜ್ಯ ವಿಲೇವಾರಿ ನಡೆಸುತ್ತಿಲ್ಲ. ಪರಿಣಾಮ ನಗರದ ಬಹುತೇಕ ಬಡಾವಣೆಗಳ ರಸ್ತೆ ಬದಿಯಲ್ಲಿ ತ್ಯಾಜ್ಯ ರಾಶಿ ಸೃಷ್ಟಿಯಾಗಿದೆ. ಇದರ ನಡುವೆಯೇ ಬಾಕಿ ಬಿಲ್‌ ಪಾವತಿಸುವಂತೆ ಒತ್ತಾಯಿಸಿ ಜೂ.11ರಿಂದ ಅನಿರ್ದಿಷ್ಟಾವಧಿವರೆಗೆ ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಲು ಮಹಾನಗರ ಸ್ವತ್ಛತೆ ಮತ್ತು ಲಾರಿ ಮಾಲೀಕರು ಹಾಗೂ ಗುತ್ತಿಗೆದಾರರ ಸಂಘ ತೀರ್ಮಾನಿಸಿದ್ದು, ಬಿಲ್‌ ಪಾವತಿಸಿದರೆ ಮಾತ್ರ ತ್ಯಾಜ್ಯ ವಿಲೇವಾರಿ ಮಾಡುವುದಾಗಿ ತಿಳಿಸಿದೆ.

ಸುಮಾರು 450ಕ್ಕೂ ಹೆಚ್ಚು ಕಾಂಪ್ಯಾಕ್ಟರ್‌ಗಳು, 4 ಸಾವಿರಕ್ಕೂ ಹೆಚ್ಚು ಆಟೋಗಳು ಹಾಗೂ 7 ಸಾವಿರಕ್ಕೂ ಹೆಚ್ಚು ಕಸ ವಿಲೇವಾರಿ ಸಿಬ್ಬಂದಿ, ಗುತ್ತಿಗೆದಾರರ ಬಳಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದೊಮ್ಮೆ ಜೂ.11ರಿಂದ ತ್ಯಾಜ್ಯ ವಿಲೇವಾರಿ ಸ್ಥಗಿತಗೊಂಡರೆ ದಿನ ಒಂದಕ್ಕೆ ಸುಮಾರು 4 ಸಾವಿರ ಟನ್‌ ತ್ಯಾಜ್ಯ ನಗರದಲ್ಲೇ ಉಳಿಯಲಿದೆ. ಮಳೆಗಾಲ ಆರಂಭವಾಗಿರುವ ಕಾರಣ, ತ್ಯಾಜ್ಯ ಕೊಳೆತು ದುರ್ವಾಸನೆ ಬೀರಲಿದೆ. ಇದರೊಂದಿಗೆ ಸಾಂಕ್ರಾಂಮಿಕ ರೋಗ ಭೀತಿ ಸೃಷ್ಟಿಯಾಗಲಿದೆ.

“ಗುತ್ತಿಗೆದಾರರನ್ನು ಪಾಲಿಕೆ ಅಧಿಕಾರಿಗಳು ಅಸಡ್ಡೆಯಿಂದ ನಡೆಸಿಕೊಳ್ಳುತ್ತಿದ್ದು, ಐದು ತಿಂಗಳಿಂದ ಬಿಲ್‌ ಪಾವತಿಸಿಲ್ಲ. 2018ರ ಜನವರಿಂದ ಮೇ ತಿಂಗಳವರೆಗೆ ಸುಮಾರು 200 ಕೋಟಿ ರೂ. ಬಿಲ್‌ ಬಾಕಿ ಇದೆ. ಜತೆಗೆ 2017ರ ಆಗಸ್ಟ್‌ನಿಂದ ಡಿಸೆಂಬರ್‌ವರೆಗಿನ ಬಿಲ್‌ನಲ್ಲಿ ಶೇ.10ರಷ್ಟು ಹಣವನ್ನು ಹಿಡಿದುಕೊಳ್ಳಲಾಗಿದೆ.

ಈ ಕುರಿತು ಹಲವು ಬಾರಿ ಅಧಿಕಾರಿಗಳು ಹಾಗೂ ಮೇಯರ್‌ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ಬಿಲ್‌ ಪಾವತಿಸುವವರೆಗೆ ನಗರದಲ್ಲಿ ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌.ಬಾಲಸುಬ್ರಹ್ಮಣ್ಯ ತಿಳಿಸಿದರು. 

Advertisement

100 ಕಾಂಪ್ಯಾಕ್ಟರ್‌ಗಳು ಕಾಣೆಯಾಗಿದ್ದು, ಗುತ್ತಿಗೆದಾರರು ಅಕ್ರಮವಾಗಿ ಬಿಲ್‌ ಪಡೆಯುತ್ತಿದ್ದಾರೆ ಎಂದು ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತರು ಆರೋಪಿಸಿದ್ದಾರೆ. ಆದರೆ, ಯಾವ ಗುತ್ತಿಗೆದಾರರಿಂದ ಅಕ್ರಮವಾಗಿದೆ, ಯಾರು ತ್ಯಾಜ್ಯ ಸಾಗಣೆ ನಡೆಸದಿದ್ದರೂ ಬಿಲ್‌ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿಲ್ಲ. ಜತೆಗೆ ಈವರೆಗೆ ಅವರು ಯಾವುದೇ ತನಿಖೆ ನಡೆಸಲು ಏಕೆ ಮುಂದಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.

ತ್ಯಾಜ್ಯ ಗುತ್ತಿಗೆ ಮೇಲಿನ ಸೇವಾ ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯಿಂದ ಗುತ್ತಿಗೆದಾರರಿಗೆ ನಿರಂತರವಾಗಿ ನೋಟಿಸ್‌ಗಳು ಬರುತ್ತಿವೆ. ಈ ಹಿಂದಿನ ಆಯುಕ್ತರು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ ಎಂದು ಆರೋಪಿಸಿದರು.

ಸೇವೆ ಬೇಕಾ? ಬೇಡವಾ?: ಗುತ್ತಿಗೆದಾರರಿಗೆ ಪಾಲಿಕೆಯಿಂದ ಪಾವತಿಸಬೇಕಾದ ಬಾಕಿ ಬಿಲ್‌ ಪಾವತಿಸಿದ ನಂತರ “ನಮ್ಮ ಸೇವೆ ಬೇಕಾ? ಅಥವಾ ಬೇಡವಾ?’ ಎಂಬುದನ್ನು ಖಚಿತಪಡಿಸಿಕೊಳ್ಳಲಿದ್ದೇವೆ. ಒಂದೊಮ್ಮೆ ನಮ್ಮ ಸೇವೆಯ ಅಗತ್ಯವಿಲ್ಲ ಎಂದರೆ, ಆ ದಿನದಿಂದಲೇ ಗುತ್ತಿಗೆದಾರರು ತ್ಯಾಜ್ಯ ವಿಲೇವಾರಿಯಿಂದ ಹಿಂದೆ ಸರಿಯಲಿದ್ದು, ಪಾಲಿಕೆಯ ಅಧಿಕಾರಿಗಳೇ ವಿಲೇವಾರಿಗೆ ಅಗತ್ಯ ಕ್ರಮಕೈಗೊಳ್ಳಲಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next