Advertisement

ಜನಜಾಗೃತಿಯಿಂದ ದುಶ್ಚಟ ನಿಯಂತ್ರಣ: ಡಾ|ಎಂ.ಆರ್‌. ರವಿ

02:50 AM Jul 19, 2017 | Team Udayavani |

ಕುಂಟಿಕಾನ: ಪ್ರತಿ ಮನೆಯೂ ಧೂಮಪಾನ ಮುಕ್ತವಾಗುವ ನಿಟ್ಟಿನಲ್ಲಿ ನಾಗರಿಕರು ಕಾರ್ಯೋನ್ಮುಖರಾಗಬೇಕು. ಜನರು ಜಾಗೃತರಾದರೆ ಇಂತಹ ದುಶ್ಚಟಗಳನ್ನು ಸಂಪೂರ್ಣ ನಿಯಂತ್ರಿಸಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್‌ ಸಿಇಒ ಡಾ| ಎಂ.ಆರ್‌.ರವಿ ಹೇಳಿದರು.

Advertisement

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಎ.ಜೆ. ದಂತ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ “ಧೂಮಪಾನ ಮುಕ್ತ ಮನೆ’ ಜಾಗೃತಿ ಅಭಿಯಾನಕ್ಕೆ ನಗರದ ಎ.ಜೆ. ಸಂಸ್ಥೆಯ ಸಭಾಂಗಣದಲ್ಲಿ ಅವರು ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲ ತಾಲೂಕುಗಳಿಗೆ ವಿಸ್ತರಿಸುವ ಅಗತ್ಯವಿದೆ. ಜಿ.ಪಂ. ಈ ನಿಟ್ಟಿನಲ್ಲಿ ಎ.ಜೆ. ಆಸ್ಪತ್ರೆಗೆ ಸಂಪೂರ್ಣ ಸಹಕಾರ ನೀಡಲಿದೆ. ಪ್ರಸ್ತುತ ಸಾರ್ವಜನಿಕರ ಆರೋಗ್ಯ ರಕ್ಷಣೆ ಸವಾಲಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನವನ್ನು ನಿಷೇಧಿಸಿದ ಬಳಿಕ  ಸಮಸ್ಯೆ ಸಾಕಷ್ಟು ಹತೋಟಿಗೆ ಬಂದಿದೆ. ಆದಾಗ್ಯೂ ಯುವಕರು ಇದಕ್ಕೆ ದಾಸರಾಗುತ್ತಿರುವುದು ನಡೆಯುತ್ತಲೇ ಇದೆ. ಜನರನ್ನು ಅದರಿಂದ ಹೊರಬರುವಂತೆ ಮಾಡುವ ನಿಟ್ಟಿನಲ್ಲಿ ಧೂಮಪಾನಮುಕ್ತ ಮನೆ ಪರಿಕಲ್ಪನೆ ಉತ್ತಮ ಆರಂಭವಾಗಿದೆ ಎಂದರು.

ಧೂಮಪಾನ ಸೇವನೆಯ ದುಶ್ಚಟಗಳ ಬಗ್ಗೆ ಜನಜಾಗೃತಿ ಮೂಡಿಸಲು ನೆರವಾಗುವ ಮಾಹಿತಿ ಪತ್ರಗಳನ್ನು ಬಿಡುಗಡೆಗೊಳಿಸಿದರು. 

ಲಕ್ಷ್ಮೀ ಮೆಮೋರಿಯಲ್‌ ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ| ಎ. ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ರಾಜೇಶ್‌ ಬಿ. ವಿ., ಪ್ರಾಂಶುಪಾಲ ಡಾ| ವೈ. ಭರತ್‌ ಶೆಟ್ಟಿ, ಉಪ ಪ್ರಾಂಶುಪಾಲ ಡಾ| ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.

Advertisement

ಎ.ಜೆ. ದಂತ ವಿಜ್ಞಾನ ಸಂಸ್ಥೆಯ ಪಬ್ಲಿಕ್‌ ಹೆಲ್ತ್‌ ಡೆಂಟಿಸ್ಟ್ರಿ ವಿಭಾಗದ ಮುಖ್ಯಸ್ಥೆ ಡಾ| ವಿಜಯ ಹೆಗ್ಡೆ ಪ್ರಸ್ತಾವನೆಗೈದರು. ಡಾ| ಶ್ರೇಷ್ಠಾ ಅತಿಥಿಗಳನ್ನು ಪರಿಚಯಿಸಿದರು. 

ಪಿಎಚ್‌ಸಿ ವ್ಯಾಪ್ತಿ
ಕಾರ್ಯಕ್ರಮವು ಪ್ರಥಮ ಹಂತದಲ್ಲಿ ಮಂಗಳೂರು ತಾಲೂಕು ವ್ಯಾಪ್ತಿಯ 31 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಎರಡು ಸಮುದಾಯ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಆರಂಭಗೊಳ್ಳುತ್ತಿದೆ. ಯೋಜನೆಯಲ್ಲಿ  ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಜಾಗೃತಿ ಅಭಿಯಾನ ನಡೆಯಲಿದ್ದು, ಆಶಾ ಕಾರ್ಯಕರ್ತೆಯರ ಮೂಲಕ ಎ.ಜೆ. ದಂತ ವಿಜ್ಞಾನ ಸಂಸ್ಥೆಯ ವೈದ್ಯರು, ಆಪ್ತ ಸಮಾಲೋಚಕರು ಮತ್ತು ವಿದ್ಯಾರ್ಥಿಗಳು ತಾಲೂಕು ವ್ಯಾಪ್ತಿಯ ಮನೆಗಳನ್ನು ಸಂಪರ್ಕಿಸಿ ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ| ನವೀನ್‌ಚಂದ್ರ  ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next