Advertisement

ಕೃಷಿ ಭೂಮಿಗೆ ನುಗ್ಗಿದ ನೀರು, ಬಾವಿ ನೀರು ಕಲುಷಿತ : ಪ್ರಯೋಜನಕ್ಕಿಂತ ನಷ್ಟವೇ ಹೆಚ್ಚು

03:13 PM Feb 15, 2022 | Team Udayavani |

ಬೈಂದೂರು : ಜನಪ್ರತಿನಿಧಿಗಳು, ಸರಕಾರ, ಇಲಾಖೆ ಒಂದು ಮಹತ್ತರ ಉದ್ದೇಶದಿಂದ ಕೆಲವು ಯೋಜನೆಗಳನ್ನು ಜಾರಿಗೆ ತರುತ್ತದೆ. ಮಾತ್ರವಲ್ಲದೆ ಸರಕಾರದ ಮಟ್ಟದಲ್ಲಿ ಪರಿಶ್ರಮಪಟ್ಟು ಅನುದಾನ ದೊರಕಿಸಿಕೊಡುತ್ತದೆ. ಆದರೆ ಯೋಜನೆಯ ರೂಪುರೇಷೆ ನಿರ್ಮಿಸಬೇಕಾದ ಅಧಿಕಾರಿ ಗಳು ಗುತ್ತಿಗೆದಾರರ ಅಥವಾ ಸ್ಥಳೀಯ ರಾಜಕಾರಣಿಗಳ ಕೈಗೊಂಬೆಯಾದಾಗ ಹತ್ತಾರು ವರ್ಷ ಉಪಯೋಗವಾಗಬೇಕಾದ ಯೋಜನೆಗಳು ವರ್ಷದಲ್ಲೇ ಜನರಿಂದ ಹಿಡಿಶಾಪ ಹಾಕಲ್ಪಡುತ್ತದೆ. ಅದಕ್ಕೆ ಉದಾ ಹರಣೆಯಾಗಿ ಶಿರೂರು ಮೊಗೇರ ಹೊಳೆಗೆ ನಿರ್ಮಿಸಿದ ಕಿಂಡಿ ಅಣೆಕಟ್ಟು ಒಂದು ವರ್ಷ ಪೂರ್ಣಗೊಳ್ಳುವುದರ ಒಳಗೆ ಕೃಷಿಕರ ಬದುಕನ್ನು ಕಸಿದುಕೊಂಡು ಬಿಟ್ಟಿದೆ.

Advertisement

ಅಧಿಕಾರಿಗಳ ನಿರ್ಲಕ್ಷ್ಯ
ಪ್ರತೀ ಯೋಜನೆಗಳು ಇಲಾಖೆಯ ಅಧಿಕಾರಿಗಳು ತೊಡಗಿಸಿಕೊಳ್ಳುವುದರ ಮೇಲೆ ಅವಲಂಬಿತ ವಾಗಿರುತ್ತದೆ. ಇತ್ತೀಚೆಗೆ ಬಹುತೇಕ ನೀರಾವರಿ ಯೋಜನೆಗಳ ಸ್ಥಳ ಗುರುತು ಮಾಡಲು ನೀಲನಕ್ಷೆ ನಿರ್ಮಿಸಲು ಎಂಜಿನಿಯರ್‌ಗಳು ಗುತ್ತಿಗೆದಾರರ ಕಾರಿನಲ್ಲಿ ಬಂದು ಅವರ ಆಣತಿಯಂತೆ ಯೋಜನೆ ರೂಪಿಸುತ್ತಾರೆ. ಹೊರತುಪಡಿಸಿದರೆ ಸ್ಥಳೀಯ ಜನರ ಅಭಿಪ್ರಾಯಗಳನ್ನು ಕಲೆ ಹಾಕುವುದಿಲ್ಲ. 2021ರ ಸಾಲಿನಲ್ಲಿ ಪಶ್ಚಿಮವಾಹಿನಿ ಯೋಜನೆಯಡಿ ಸಣ್ಣ ನೀರಾವರಿ ಇಲಾಖೆಯಿಂದ ಉಡುಪಿ ಜಿಲ್ಲಾ ಬೈಂದೂರು ವಿಧಾನಸಭೆ ಕ್ಷೇತ್ರದ ಶಿರೂರು ಮೊಗೇರ ಹೊಳೆಗೆ 2.90 ಕೋ.ರೂ. ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಿದೆ. ಸೇತುವೆ ನಿರ್ಮಾಣವಾಗುವ ಮುಂಚೆ 3 ಬಾರಿ ಸ್ಥಳ ಬದಲಿಸಲಾಗಿದೆ. ಇದರಿಂದಾಗಿ ನೂರಾರು ಎಕರೆ ಕೃಷಿ ಭೂಮಿಗೆ ಅನುಕೂಲ ವಾಗಬೇಕಾದ ಯೋಜನೆ ಒಂದೆರಡು ಜನರ ತೋಟಕ್ಕೆ ನೀರುಣಿಸುವ ಯೋಜನೆಯಾಗಿ ಮಾರ್ಪಟ್ಟಿದೆ ಮತ್ತು ಸರಕಾರದ ಹಣ ವನ್ನು ವ್ಯಯಿಸುವ ಯೋಜನೆಯಂತಾಗಿದೆ ಎಂಬುದು ಸ್ಥಳೀ ಯರ ಆರೋಪವಾಗಿದೆ.

ತರಾತುರಿಯಲ್ಲಿ ಕಾಮಗಾರಿ
ಬಹುನಿರೀಕ್ಷಿತ ಈ ಯೋಜನೆ ಒಂದೆರಡು ತಿಂಗಳಲ್ಲಿ ಪೂರ್ಣಗೊಂಡಿದೆ. ಅಸಮರ್ಪಕ ಜಾಗದಲ್ಲಿ ನಿರ್ಮಾಣವಾದುದರಿಂದ ಮೊದಲ ಮಳೆಗಾಲದಲ್ಲಿ ಹತ್ತಾರು ಎಕರೆ ಕೃಷಿಭೂಮಿ ನೀರಿನಿಂದಾವೃತಗೊಂಡಿದೆ. ಮಾತ್ರವಲ್ಲದೆ ನಿರೋಡಿ, ಮುದ್ರಮಕ್ಕಿ ಮುಂತಾದ ಕಡೆಗಳಲ್ಲಿ ಹಲವು ವರ್ಷದಿಂದ ಸಿಹಿ ನೀರು ಹೊಂದಿದ್ದು ಬಾವಿ ನೀರು ಈಗ ಕೆಸರುಮಯವಾಗಿದೆ. ಸುಗ್ಗಿ ಮಾಡಬೇಕಾದ ರೈತರು ಸೇತುವೆ ನಿರ್ಮಾಣದಿಂದ ಕೃಷಿಯನ್ನೇ ಕೈಬಿಡುವಂತಾಗಿದೆ. ಮಾತ್ರವಲ್ಲದೆ ಕಾಮಗಾರಿ ಕೂಡ ಇಲಾಖಾ ಅಧಿಕಾರಿ ಗಳಿಂದ ಪರಿಶೀಲನೆಯಾಗ ದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಮೊಗೇರ ಹೊಳೆ ಸೇತುವೆ ಇಲಾಖೆಯ ಅನುದಾನವನ್ನು ವ್ಯಯಿಸಲು ಸಿದ್ಧಪಡಿಸಿದ ಯೋಜನೆ ಯಂತಾಗಿರುವುದು ದೌರ್ಭಾಗ್ಯವೇ ಸರಿ, ಕನಿಷ್ಠ ಪಕ್ಷ ಎರಡು ಕಡೆ ಸೈಡ್‌ ವಾಲ್‌ ನಿರ್ಮಾಣವಾದರೆ ಒಂದಿಷ್ಟು ಅನುಕೂಲವಾಗುತ್ತದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ಬಾವಿ ನೀರು ಕಪ್ಪು ಬಣ್ಣಕ್ಕೆ
ಕೃಷಿ ಹಾಗೂ ವ್ಯರ್ಥವಾಗಿ ಸಮುದ್ರಕ್ಕೆ ನೀರು ಹರಿಯುವುದನ್ನು ತಡೆಯಲು ಸರಕಾರ ರೂಪಿಸಿದ ಉತ್ತಮ ಯೋಜನೆಯಾಗಿದೆ. ಬೇಸಗೆಯಲ್ಲಿ ಕಟ್ಟ ಹಾಕುವುದರಿಂದ ನೀರಿನ ಪ್ರಮಾಣ ಅಧಿಕವಾಗಿ ಬಾವಿ ನೀರು ಕಪ್ಪು ಬಣ್ಣಕ್ಕೆ ತಿರುಗುತ್ತದೆ ಮತ್ತು ಕೃಷಿ ಭೂಮಿಗೆ ನೀರು ನುಗ್ಗದಂತೆ ಇಲಾಖೆ ಯೋಜನೆ ರೂಪಿಸಬೇಕು. -ರವೀಂದ್ರ ಶೆಟ್ಟಿ, ಉಪಾಧ್ಯಕ್ಷರು, ಗ್ರಾ.ಪಂ. ಶಿರೂರು

ಸ್ಥಳೀಯರ ಅಭಿಪ್ರಾಯ ಕೇಳಿಲ್ಲ
ನಿರ್ಮಾಣ ಸಮಯದಲ್ಲಿ ಸಾರ್ವಜನಿಕರು ಮತ್ತು ಸ್ಥಳೀಯರ ಅಭಿಪ್ರಾಯ ಪಡೆಯದಿರುವುದು ಹಾಗೂ ಅವೈಜ್ಞಾನಿಕ ಯೋಜನೆಯಿಂದ ಸಮಸ್ಯೆ ಉಂಟಾಗಿದೆ. ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕಿದೆ.

Advertisement

– ಲಿಂಗಪ್ಪ ಮೇಸ್ತ, ಸ್ಥಳೀಯ ಗ್ರಾ.ಪಂ. ಸದಸ್ಯರು.

– ಅರುಣ್‌ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next