Advertisement

Stalin ನಿಮ್ಮ ಸ್ನೇಹಿತರೇ ಅಲ್ಲವೇ? ಮೇಕೆದಾಟು ಅಣೆಕಟ್ಟು ಕಟ್ಟಿ: ಕುಮಾರಸ್ವಾಮಿ ಟೀಕೆ

03:18 PM Aug 18, 2023 | Team Udayavani |

ಬೆಂಗಳೂರು: ಜನರಿಗೆ ದುಂಬಾಲು ಬಿದ್ದು ಪೆನ್ ಕೊಡಿ, ಪೆನ್ ಕೊಡಿ ಎಂದು ಕೇಳಿದರು. ಪಾಪ.. ಜನರೂ ನಂಬಿ ಪೆನ್ ಕೊಟ್ಟರು. ಈಗ ಆ ಪೆನ್ ಅನ್ನು ತೆಗೆದುಕೊಂಡು ಹೋಗಿ ತಮಿಳುನಾಡಿಗೆ ಒತ್ತೆ ಇಟ್ಟಿದ್ದಾರೆ. ರೆಡ್ ಕಾರ್ಪೆಟ್ ಹಾಕಿ ಆ ರಾಜ್ಯದ ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಸ್ವಾಗತ ಕೊರುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಜೆ.ಪಿ.ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರಕಾರ ಏಕಪಕ್ಷೀಯವಾಗಿ ತಮಿಳುನಾಡಿಗೆ ನೀರು ಹರಿಸಿದೆ. ಯಾರನ್ನು ಕೇಳಿ ಇವರು ನೀರು ಹರಿಸಿದ್ದಾರೆ? ಜನರನ್ನು ಕೇಳಿದ್ದಾರೆಯೇ? ಪ್ರತಿಪಕ್ಷಗಳ ಜತೆ ಚರ್ಚೆ ಮಾಡಿದ್ದಾರೆಯೇ? ಅಥವಾ ನೀರು ಬಿಡುವಂತೆ ಸರಕಾರಕ್ಕೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಇಲ್ಲವೇ ಸುಪ್ರೀಂ ಕೋರ್ಟ್ ನಿರ್ದೇಶನ ಇದೆಯೇ? ಹಾಗೇನಾದರೂ ಇದ್ದರೆ ಜನತೆಗೆ ತೀಸಬೇಕು ಎಂದು ಅವರು ಒತ್ತಾಯ ಮಾಡಿದರು.

ಕುಮಾರಸ್ವಾಮಿ ಅವರು ಅವರ ಕಾಲದಲ್ಲಿ ನೀರು ಬಿಟ್ಟಿಲ್ವಾ? ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಅವರಿಗೆ ತಿಳಿವಳಿಕೆ ಕೊರತೆ ಇದೆ. ನಾನು ಎರಡು ಸಲ ಮುಖ್ಯಮಂತ್ರಿ ಆಗಿದ್ದಾಗ ತಮಿಳುನಾಡಿಗೆ ನೀರು ಹರಿಸಿದ್ದು ನಿಜ. ಆಗ ನಮ್ಮಲ್ಲಿ ಯಥೇಚ್ಛವಾಗಿ ನೀರು ಇತ್ತು. ಸಂಕಷ್ಟದ ಪರಿಸ್ಥಿತಿ ಇರಲಿಲ್ಲ. ದೇವೇಗೌಡರ ಕಾಲದಲ್ಲಿಯೂ ಕೇಂದ್ರ ಸರಕಾರದ ಮನವಿ ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ನೀರು ಬಿಡಲಾಗಿತ್ತು. ಏಕಪಕ್ಷೀಯವಾಗಿ ಹಿಂದಿನ ಯಾವ ಸರಕಾರವೂ ನಿರ್ಧಾರ ಕೈಗೊಂಡು ಸರ್ವಾಧಿಕಾರಿ ಮನೋಭಾವದಿಂದ ಜನರ ಸಂಕಷ್ಟ ಲೆಕ್ಕಿಸದೆ ನೆರೆ ರಾಜ್ಯಕ್ಕೆ ನೀರು ಹರಿಸಿರಲಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ದೇವೇಗೌಡರ ಬಗ್ಗೆ ಮಾತನಾಡಬೇಕಾದರೆ ಇತಿಹಾಸ ತಿಳಿದು ಮಾತನಾಡಬೇಕು. 1962ರಿಂದ ಅವರು ಕಾವೇರಿ, ಕೃಷ್ಣಾ ಸೇರಿದಂತೆ ವಿವಿಧ ನದಿ ನೀರು ಹಕ್ಕಿಗಾಗಿ ಅವರು ನಡೆಸಿದ ಹೋರಾಟವನ್ನು ತಿಳಿದು ಮಾತನಾಡಬೇಕು. ಅವರೆಂದೂ ನಮ್ಮ ರಾಜ್ಯದ ರೈತರ ಹಿತಾಸಕ್ತಿ ಕಡೆಗಣಿಸಿ ನೆರೆ ರಾಜ್ಯಕ್ಕೆ ನೀರು ಬಿಟ್ಟಿಲ್ಲ. ಅವರ ಬಗ್ಗೆ ಮಾತಾಡೋಕೆ ಯಾರಿಗೂ ನೈತಿಕತೆ ಇಲ್ಲ ಎಂದು ಅವರು ತಿಳಿಸಿದರು.

ಇದನ್ನೂ ಓದಿ:Fodder scam: ಲಾಲು ಪ್ರಸಾದ್ ಯಾದವ್ ಜಾಮೀನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಸಿಬಿಐ

Advertisement

ಈಗ ರಾಜ್ಯದಲ್ಲಿ ಮಳೆ ಇಲ್ಲ, ಬರ ಬಂದು ಕೂತಿದೆ. ಇದು ಸರಕಾರದ ಪಾಪದ ಫಲ. ಇವರ ಲೂಟಿ ಹೊಡೆಯುವ ಕುಕೃತ್ಯಕ್ಕೆ ಪ್ರಕೃತಿಯೂ ಸಹಕಾರ ನೀಡುತ್ತಿಲ್ಲ ಎಂದು ಅವರು ಕಿಡಿಕಾರಿದರು.

ಮೇಕೆದಾಟು ಎಲ್ಲಗೆ ಬಂತು?: ಕಾಂಗ್ರೆಸ್ ನವರು ಮೇಕೆದಾಟ ಪಾದಯಾತ್ರೆ ಮಾಡಿದರು, ಅದು ಎಲ್ಲಿಗೆ ಬಂತು? ಚಿಕನ್ ಲೆಗ್, ಮಟನ್ ಪೀಸ್ ತಿಂದು ಹೋರಾಟ ಮಾಡಿದ್ದು ಅಷ್ಟೇ ಆಯಿತು ಅಲ್ಲಿ. ಡಿಎಂಕೆ ನಿಮ್ಮ ಮಿತ್ರಪಕ್ಷ ಅಲ್ಲವೇ? ತಮಿಳುನಾಡು ಮುಖ್ಯಾಮಂತಿ ಸ್ಟಾಲಿನ್ ಅವರು ನಿಮ್ಮ ಸ್ನೇಹಿತರೇ ಅಲ್ಲವೇ? ಕೊಟ್ಟು ತಗೆದುಕೊಳ್ಳುವ ಸಂಬಂಧ ಮಾಡ್ತಾ ಇದ್ದೀರಲ್ಲಾ? ಮೇಕೆದಾಟು ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಅವರು ಟಾಂಗ್ ನೀಡಿದರು.

ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ನಲ್ಲಿ ತಮಿಳುನಾಡಿನವರು ಅರ್ಜಿ ಹಾಕಿದ್ದಾರೆ. ರಾಜ್ಯ ಸರಕಾರ ಏನು ಮಾಡುತ್ತಿದೆ. ಈಗಾಗಲೇ ಜನರನ್ನು ಲೆಕ್ಕಕ್ಕೆ ಇಡದೇ ತಮಿಳುನಾಡಿಗೆ ನೀರು ಬಿಡುತ್ತಿದ್ದೀರಿ. ಅವರು ಹೆಚ್ಚುವರಿ ನೀರು ಕೇಳಿದರೆ ಕೊಡಲು ಆಗುತ್ತಾ? ನಮ್ಮ ರೈತರು ಇನ್ನೂ ಒಂದು ಬೆಳೆಯನ್ನೂ ಬೆಳೆದಿಲ್ಲ. ತಮಿಳುನಾಡಿನಲ್ಲಿ ಏನು ಪರಿಸ್ಥಿತಿ ಇದೆ, ಅಲ್ಲಿ ಎಷ್ಟು ಬೆಳೆಗಳನ್ನು ತೆಗೆಯಲಾಗುತ್ತಿದೆ ಎನ್ನುವುದು ಈ ಸರಕಾರಕ್ಕೆ ಗೊತ್ತಿದೆಯಾ? ಅಲ್ಲಿ ನಾಲ್ಕು ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಮಾಡಿಕೊಂಡಿದ್ದಾರೆ. ಕನಿಷ್ಠ ಜ್ಞಾನ ಈ ಸರಕಾರಕ್ಕೆ ಇದೆಯಾ ಎಂದು ಕುಮಾರಸ್ವಾಮಿ ಅವರು ಕಿಡಿ ಕಾರಿದರು.

ಮಾಡಿದ ಪ್ರಮಾದವನ್ನು ಮುಚ್ಚಿಕೊಳ್ಳಲು ಸರಕಾರ, ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಕಾಂಗ್ರೆಸ್ ನವರು ಆರೋಪ ಮಾಡುತ್ತಿದ್ದಾರೆ. ನಾವು ವಿಪಕ್ಷದಲ್ಲಿ ಇರುವುದೇ ರಾಜಕೀಯ ಮಾಡಲು ಹಾಗೂ ಸರಕಾರದ ಲೋಪಗಳನ್ನು ಎತ್ತಿ ತೋರಿಸಲು. ಕರ್ನಾಟಕದ ರೈತರ ಔದಾರ್ಯ ಬೆಲೆ ಇದೆಯಾ? I.n.d.i.a. ಮೈತ್ರಿ ಕೂಟಕ್ಕೆ ಶಕ್ತಿ ತುಂಬಲು ರಾಜ್ಯದ ರೈತರನ್ನು ಬಲಿ ಕೊಡಲು ಹೊರಟಿದ್ದೀರಿ. ಇಂಥ ಓಲೈಕೆ ಅಗತ್ಯ ಇತ್ತಾ? ಸುಪ್ರೀಂ ಕೋರ್ಟ್ ಮುಂದೆ ತಮಿಳುನಾಡಿನವರು ಮತ್ತೊಂದು ಅರ್ಜಿ ಹಾಕಿದರೆ, ಆಗ ನೀವೇನು ಮಾಡುತ್ತೀರಿ? ಎಂದು ಮಾಜಿ ಮುಖ್ಯಮಂತ್ರಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ಮಾಜಿ ಸಚಿವರಾದ ಬಂಡೆಪ್ಪ ಕಾಷೆಂಪೂರ್,  ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಮುಂತಾದವರು ಜತೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next