Advertisement

ಒಪ್ಪಂದದ ವೇಳೆ ನಾನು ಅಧಿಕಾರದಲ್ಲಿರಲಿಲ್ಲ

06:00 AM Sep 27, 2018 | Team Udayavani |

ವಿಶ್ವಸಂಸ್ಥೆ/ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿ ವಿಚಾರ ಎರಡು ಸರ್ಕಾರಗಳ ನಡುವಿನ ಒಪ್ಪಂದ. ಆ ಒಪ್ಪಂದ ಏರ್ಪಟ್ಟ ಸಂದರ್ಭದಲ್ಲಿ ತಾವು ಅಧಿಕಾರದಲ್ಲಿ ಇರಲಿಲ್ಲ ಎಂದು ಫ್ರಾನ್ಸ್‌ ಅಧ್ಯಕ್ಷ  ಇಮಾನ್ಯುವಲ್‌ ಮ್ಯಾಕ್ರನ್‌ ವಿಶ್ವಸಂಸ್ಥೆಯಲ್ಲಿ ಹೇಳಿದ್ದಾರೆ. 

Advertisement

ಡೀಲ್‌ ಬಗ್ಗೆ ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆಯುತ್ತಿರುವಾಗಲೇ ಮ್ಯಾಕ್ರನ್‌ ಮೊದಲ ಬಾರಿಗೆ  ಸ್ಪಷ್ಟನೆ ನೀಡಿದ್ದಾರೆ. “ಕೆಲ ದಿನಗಳ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿ ಏನು ಹೇಳಿದ್ದಾರೋ, ನಾನೂ ಅದನ್ನೇ ಪ್ರಸ್ತಾಪಿಸಲು ಬಯಸುತ್ತೇನೆ. ಇದಕ್ಕಿಂತ ಹೆಚ್ಚಿನದ್ದು ಹೇಳಲು ಏನೂ ಇಲ್ಲ ಮತ್ತು ಆ ಸಂದರ್ಭದಲ್ಲಿ ನಾನು ಅಧಿಕಾರದಲ್ಲಿ ಇರಲಿಲ್ಲ. ನಮ್ಮಲ್ಲಿ ಸ್ಪಷ್ಟವಾದ ನಿಯಮಗಳು ಇವೆ’ ಎಂದು ಮ್ಯಾಕ್ರನ್‌ ನುಡಿದಿದ್ದಾರೆ. ಈ ಒಪ್ಪಂದವು  ಅತ್ಯಂತ ವ್ಯೂಹಾತ್ಮಕವಾದ್ದರಿಂದ ನನಗೆ ಮಹತ್ವದ್ದಾಗಿದೆ. ಇದು ಕೈಗಾರಿಗಾ ವಿಚಾರಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ ಎಂದೂ ಹೇಳಿದ್ದಾರೆ.

ನಿಲ್ಲದ ಟೀಕೆ: ಇದೇ ವೇಳೆ, ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ಮುಂದು ವರಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, “ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನಿಂದ 30 ಸಾವಿರ ಕೋಟಿ ರೂ.ಗಳನ್ನು ಕದ್ದು, ವಿಮಾನ ತಯಾರಿಕೆಯಲ್ಲಿ ಯಾವುದೇ ಕೌಶಲ್ಯ ಇಲ್ಲದಿರುವ (ಅನಿಲ್‌ ಅಂಬಾನಿಯವರ ಸಂಸ್ಥೆ) ವ್ಯಕ್ತಿಗೆ ನೀಡಲಾಗಿದೆ. ಕೇಂದ್ರ ಸರ್ಕಾರದ್ದು ಸ್ಕಿಲ್‌ ಇಂಡಿಯಾ ಅಲ್ಲ, ಯೆಸ್‌-ಕಿಲ್‌ ಇಂಡಿಯಾ(“ಹೌದು- ಭಾರತವನ್ನು ಕೊಲ್ಲುವ’ )ಕಾರ್ಯಕ್ರಮವಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ. ಇನ್ನೊಂದೆಡೆ, ಸೋನಿಯಾ ಅಳಿಯ ರಾಬರ್ಟ್‌ ವಾದ್ರಾ ಕೂಡ ಪ್ರತಿಕ್ರಿಯಿಸಿದ್ದು, “ಕಳೆದ 4 ವರ್ಷ ಗಳಿಂ ದಲೂ ಬಿಜೆಪಿ ನನ್ನ ವಿರುದ್ಧ ಆಧಾರರಹಿತ ರಾಜಕೀಯ ದಾಳಿ ನಡೆಸುತ್ತಾ ಬಂದಿದೆ’ ಎಂದು ಟ್ವೀಟಿಸಿದ್ದಾರೆ.

ರಮ್ಯಾ ವಿರುದ್ಧ ದೇಶದ್ರೋಹದ ಕೇಸು
ರಫೇಲ್‌ ಡೀಲ್‌ಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರನ್ನು ಟ್ವಿಟರ್‌ನಲ್ಲಿ “ಚೋರ್‌’ (ಕಳ್ಳ) ಎಂದು ಟೀಕಿಸಿದ ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ವಿರುದ್ಧ ದೇಶದ್ರೋಹದ ಕೇಸು ದಾಖಲಿಸಲಾಗಿದೆ. ನ್ಯಾಯವಾದಿ ಸಯ್ಯದ್‌ ರಿಜ್ವಾನ್‌ ಎಂಬುವರು ಸಲ್ಲಿಸಿದ ದೂರಿನ ಆಧಾರದಲ್ಲಿ ಉತ್ತರ ಪ್ರದೇಶದ ಗೋಮತಿನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಜತೆಗೆ ವಿಭೋರ್‌ ಆನಂದ್‌ ಎಂಬುವರು ಕೂಡ ರಮ್ಯಾ ವಿರುದ್ಧ 10 ಸಾವಿರ ಕೋಟಿ ರೂ. ಮೌಲ್ಯದ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next