ಮುಂಬೈ: ವೆಸ್ಟ್ ಇಂಡೀಸ್ ತಂಡದ ವಿರುದ್ಧ ಏಕದಿನ ಮತ್ತು ಟಿ20 ಸರಣಿಯನ್ನು ಜಯಿಸಿದ ಭಾರತ ತಂಡವು ಇದೀಗ ಜಿಂಬಾಬ್ವೆ ವಿರುದ್ಧದ ಸರಣಿಗೆ ತಯಾರಾಗಿದೆ. ಜಿಂಬಾಬ್ವೆ ವಿರುದ್ಧ ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದ್ದು, ಈ ಪಂದ್ಯಗಳು ಹರಾರೆಯಲ್ಲಿ ನಡೆಯಲಿದೆ.
ಕೆಎಲ್ ರಾಹುಲ್ ನೇತೃತ್ವದ ಭಾರತ ತಂಡ ಈಗಾಗಲೇ ಜಿಂಬಾಬ್ವೆ ತಲುಪಿದ್ದು, ಅಭ್ಯಾಸದಲ್ಲಿ ತೊಡಗಿದೆ. ಆದರೆ ಬಹಳ ಕಾಲದ ಬಳಿಕ ತಂಡಕ್ಕೆ ಮರಳಿದ್ದ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರು ಮತ್ತೆ ಗಾಯಗೊಂಡಿದ್ದು, ಸರಣಿಯಿಂದ ಹೊರಬಿದ್ದಿದ್ದಾರೆ.
ಕಳೆದೊಂದು ವರ್ಷದಿಂದ ಗಾಯದಿಂದ ಬಳಲುತ್ತಿರುವ ವಾಷಿಂಗ್ಟನ್ ಸುಂದರ್ ಅವರು ಇಂಗ್ಲೆಂಡ್ ನ ಕೌಂಟಿ ಕೂಟದಲ್ಲಿ ಆಡುತ್ತಿದ್ದರು. ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾದ ಸುಂದರ್ ಅವರು ಮತ್ತೆ ಬ್ಲೂ ಜೆರ್ಸಿಯಲ್ಲಿ ತೊಡಲು ಕಾತರರಾಗಿದ್ದರು. ಆದರೆ ಆದರೆ ಇಂಗ್ಲೆಂಡ್ ನ ಲಂಕಾಶೈರ್ ಪರ ಆಡುತ್ತಿದ್ದ ವಾಷಿಂಗ್ಟನ್ ಸುಂದರ್ ಎಡ ಭುಜಕ್ಕೆ ಗಾಯ ಮಾಡಿಕೊಂಡಿದ್ದಾರೆ. ಇದರಿಂದಾಗಿ ಜಿಂಬಾಬ್ವೆ ಪ್ರವಾಸವನ್ನು ತಪ್ಪಿಸಿಕೊಂಡಿದ್ದಾರೆ.
ಇದನ್ನೂ ಓದಿ:ಕೋಲಾರದಲ್ಲಿ ಲಿಮ್ಕಾ ದಾಖಲೆ ಬರೆದ ಬೃಹತ್ ರಾಷ್ಟ್ರಧ್ವಜ
ವಾಷಿಂಗ್ಟನ್ ಸುಂದರ್ ಬದಲಿಗೆ ಆರ್ ಸಿಬಿ ಆಲ್ ರೌಂಡರ್ ಶಹಬಾಜ್ ಅಹಮದ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. 27 ವರ್ಷದ ಯುವ ಆಟಗಾರ ಶಹಬಾಜ್ ಅಹಮದ್ ಗೆ ಇದು ಮೊದಲ ರಾಷ್ಟ್ರೀಯ ತಂಡದ ಕರೆಯಾಗಿದೆ.
ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿ ಆಗಸ್ಟ್ 18ರಿಂದ 22ರವರೆಗೆ ನಡೆಯಲಿದೆ. ಎಲ್ಲಾ ಮೂರು ಪಂದ್ಯಗಳು ಹರಾರೆ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆಯಲಿದೆ.
ಭಾರತ ತಂಡ: ಕೆಎಲ್ ರಾಹುಲ್ (ನಾ), ಶಿಖರ್ ಧವನ್ (ಉ.ನಾ), ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ಶಹಬಾಜ್ ಅಹಮದ್, ಅಕ್ಸರ್ ಪಟೇಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ , ದೀಪಕ್ ಚಾಹರ್.