ವಾಷಿಂಗ್ಟನ್: ನವೆಂಬರ್ 5ರಂದು ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಡೆಮಾಕ್ರಟಿಕ್ ಮತ್ತು ರಿಪಬ್ಲಿಕ್ ಪಕ್ಷ ಸೇರಿದಂತೆ ಇಬ್ಬರೂ ಅಭ್ಯರ್ಥಿಗಳ ಬಗ್ಗೆ ಯಾವುದೇ ಬೆಂಬಲ ನೀಡುವುದಿಲ್ಲ ಎಂದು ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ ಒಡೆತನದ ವಾಷಿಂಗ್ಟನ್ ಪೋಸ್ಟ್(The Washington Post) ನಿರ್ಧಾರ ಕೈಗೊಂಡ ಬೆನ್ನಲ್ಲೇ ಎರಡು ಲಕ್ಷಕ್ಕೂ ಅಧಿಕ ಸಬ್ಸ್ ಕ್ರೈಬರ್ಸ್ (Subscribers) ಅನ್ನು ಕಳೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಸೋಮವಾರ (ಅ.28) ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಬೆಜೋಸ್, ವಾಷಿಂಗ್ಟನ್ ಪೋಸ್ಟ್ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ಇದೊಂದು ಸಮರ್ಪಕವಾದ ಮತ್ತು ಶಿಸ್ತುಬದ್ಧ ನಿರ್ಧಾರವಾಗಿದೆ. ನಾವು ಡೋನಾಲ್ಡ್ ಟ್ರಂಪ್ ಆಗಲಿ ಅಥವಾ ಕಮಲಾ ಹ್ಯಾರಿಸ್ ಆಗಲಿ ಯಾರಿಂದಲೂ ಪ್ರಭಾವಿತರಾಗುವುದಿಲ್ಲ ಎಂದು ತಿಳಿಸಿದ್ದರು.
ವಾಷಿಂಗ್ಟನ್ ಪೋಸ್ಟ್(Washington Post) ನ ಸಂಪಾದಕೀಯ ಸಿಬಂದಿಗಳು ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಗೆ ಬೆಂಬಲ ನೀಡಲು ಸಿದ್ಧವಾಗಿದ್ದ ವಿಷಯ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಆದರೆ ಅಭ್ಯರ್ಥಿಗಳ ಆಯ್ಕೆ ನಿರ್ಧಾರ ನಮ್ಮ ಓದುಗರ ನಿಲುವಿಗೆ ಬಿಟ್ಟಿದ್ದು ಎಂದು ಪ್ರಕಾಶಕರು ಸಮಜಾಯಿಷಿ ನೀಡಿದ್ದರು.
ಪತ್ರಿಕೆಯ ನಿಲುವಿನ ನಂತರ ಸೋಮವಾರ ಮಧ್ಯಾಹ್ನ ವಾಷಿಂಗ್ಟನ್ ಪೋಸ್ಟ್ ನ ಡಿಜಿಟಲ್ ಆವೃತ್ತಿಯ ಸುಮಾರು 2 ಲಕ್ಷಕ್ಕೂ ಅಧಿಕ ಚಂದದಾರರು ತಮ್ಮ ಸಬ್ಸ್ ಕ್ರಿಪ್ಶನ್ ಅನ್ನು ರದ್ದು ಮಾಡಿರುವುದಾಗಿ ವರದಿ ತಿಳಿಸಿದೆ.
ವಾಷಿಂಗ್ಟನ್ ಪೋಸ್ಟ್ ನ ಇ-ಪೇಪರ್ ಬರೋಬ್ಬರಿ 2 ಮಿಲಿಯನ್ ಗೂ ಅಧಿಕ Paid ಚಂದಾದಾರರನ್ನು ಹೊಂದಿದ್ದು, ಅದರಲ್ಲಿ ಈಗ ಶೇ.8ರಷ್ಟು Subscribers ತಮ್ಮ Subscriptions ಅನ್ನು ಕ್ಯಾನ್ಸಲ್ ಮಾಡಿರುವುದಾಗಿ ವರದಿ ವಿವರಿಸಿದೆ.