Advertisement
ಅಮೆರಿಕದ ಸಿಯಾಟಲ್‌ನ ಬಾಥೆಲ್ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಕಂಡು ಸಂತೋಷಗೊಳ್ಳುವ ಅವಕಾಶವು ದೊರೆತಾಗ ಮೇಲೆ ಹೇಳಿದ ಸಂಗತಿಯು ನಿಜವಾದುದೆಂದು ಗೋಚರವಾಯಿತು. ಇದೇ ಫೆಬ್ರವರಿ 3, ಶನಿವಾರ ʻಕನ್ನಡ ಭಾರತಿಯʼ ಇಡೀ ದಿನದ ಕಾರ್ಯಕ್ರಮ ಬಾಥೆಲ್‌ದಲ್ಲಿ ನಡೆಯಿತು. ಶಾಲೆ ಶೃಂಗಾರಗೊಂಡಿತ್ತು. ಸಂತಸ ಮನೆಮಾಡಿತ್ತು. ಜಾತ್ರೆಯೋ, ಮದುವೆಯೋ, ಮುಂಜಿಯೋ(ಉಪನಯನವೋ), ದೇವಕಾರ್ಯವೋ ಎಂಬಂತೆ ಸಡಗರ ಎಲ್ಲಕಡೆಯೂ ಗೋಚರಿಸುತ್ತಿತ್ತು. ಒಳಹೋಗುತ್ತಿದ್ದಂತೆ ʼಮಂದಹಾಸದಿ ಮಂದಗಮನೆಯರು ಎಳ್ಳುಬೆಲ್ಲವನಿತ್ತು ಸ್ವಾಗತಿಸಿದರು ಮುದದಿʼ. ಪುಟಾಣಿಗಳು, ಬಾಲಕ – ಬಾಲಕಿಯರು, ಯುವಕ – ಯುವತಿಯರು, ಮಾತೆಯರು, ಮಹನೀಯರು, ವೃದ್ಧರು ಪಾಲ್ಗೊಂಡಿದ್ದರು. ಎಲ್ಲರೂ ಕನ್ನಡವನ್ನೇ ಮಾತನಾಡುತ್ತ, ನಗುತ್ತಾ ಓಡಾಡುವುದನ್ನು ಕಂಡಾಗ ಕನ್ನಡಿಗರ ಹೃದಯ ತುಂಬಿಬಾರದೇ ಇರುವುದಕ್ಕುಂಟೆ? ಎಲ್ಲರ ಕಂಗಳಲ್ಲಿ ಪ್ರೀತಿ ಇಣುಕುತ್ತಿತ್ತು.
Related Articles
Advertisement
ಭೋಜನಾ ನಂತರ ಸಾಂಸ್ಕೃತಿಕ ಕಾರ್ಯಕ್ರಮವು ಪ್ರಾರಂಭಗೊಂಡಿತು. ಪ್ರದರ್ಶನಗೊಂಡ ಪ್ರತಿಯೊಂದು ಕಾರ್ಯಕ್ರಮದಲ್ಲೂ ಭಾರತೀಯ ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳ ಲೇಪವಿದ್ದು ಪ್ರೇಕ್ಷಕರನ್ನು ಸಂತೋಷದಲ್ಲಿ ತೇಲಾಡುವಂತೆ ಮಾಡಿತು. ಗಾನ, ವಾದನ, ದಾಸರ ಪದಗಳು, ಶಾಸ್ತ್ರೀಯ ಸಂಗೀತ, ಕೋಲಾಟ, ಮೊದಲಾದ ಹತ್ತೆಂಟು ಬಗೆಯ ಕಲೆಗಳು ಪ್ರದರ್ಶನಗೊಂಡವು. ಎಲ್ಲದರಲ್ಲಿಯೂ ಅಚ್ಚುಕಟ್ಟಿಗೆ ಕೊರತೆ ಇರಲಿಲ್ಲ.
ಮಧ್ಯಂತರದಲ್ಲಿ ಕಲಾ ಪ್ರೋತ್ಸಾಹಕರಿಗೆ, ಪ್ರಾಯೋಜಕರಿಗೆ, ಸಂಘ ಕಟ್ಟುವಲ್ಲಿ ಶ್ರಮಿಸಿದವರಿಗೆ, ಸಾಧಕರಿಗೆ ಮೆಚ್ಚುಗೆಯ ಮಾತಾಡಿ ಗೌರವಿಸಿದರು. ಸನ್ಮಾನಕ್ಕೆ ಅರ್ಹರಾದವರನ್ನು ಸನ್ಮಾನಿಸಿದ್ದೂ ಔಚಿತ್ಯಪೂರ್ಣವಾಗಿತ್ತು. ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ನಿರೂಪಕರಾಗಿ ತೊಡಗಿಕೊಂಡವರ ಪಾಲೂ ಸಹ ಮಹತ್ವದ್ದಾಗಿರುತ್ತದೆ. ನಿರೂಪಕರಾಗಿ ತೊಡಗಿಕೊಂಡವರೆಲ್ಲಾ ಅನುಭವಿಗಳಾಗಿದ್ದು, ತಮ್ಮ ಕೌಶಲ್ಯಪೂರ್ಣ ಮಾತುಗಾರಿಕೆಯಿಂದ ವಿಶೇಷ ಮೆರುಗು ನೀಡಿದರು. ಎಲ್ಲರೊಳಗೊಂದಾಗಿ ಬೆರೆಯಲು, ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಗಳಾಗಲು ನಮಗೂ ಅವಕಾಶ ದೊರಕಿದ್ದು ನಮ್ಮ ಭಾಗ್ಯ. ಯಕ್ಷಗಾನದ ತಾಳಮದ್ದಳೆಯ ತುಣುಕೊಂದು ನಮ್ಮಿಂದ ಪ್ರದರ್ಶಿಸಲ್ಪಟ್ಟಿದ್ದು, ವಾಲಿಮೋಕ್ಷ ಪ್ರಸಂಗದ ಕೊನೆ ಸನ್ನಿವೇಶವಿತ್ತು.
ಇನ್ನೊಂದು ವಿಷಯವನ್ನು ಪ್ರಸ್ತಾಪಿಸಲೇಬೇಕು. Consulate General of India ಪ್ರಕಾಶ್ ಗುಪ್ತಾರವರು ಹಾಗೂ Deputy Consulate General of India ಸುರೇಶ್ ಶರ್ಮಾ ರವರು ಕಾರ್ಯಕ್ರಮಕ್ಕೆ ಆಗಮಿಸಿದ್ದರಷ್ಟೇ ಅಲ್ಲ, ಕನ್ನಡ ಭಾರತಿಯ ಕಾರ್ಯವೈಖರಿಯ ಕುರಿತು ಮೆಚ್ಚುಗೆಯ ಮಾತನಾಡಿದರು. ‘ಪ್ರಾದೇಶಿಕ ಭಾಷೆಗಳು ಉಳಿಯಬೇಕು, ಉಳಿಯಬೇಕಾದರೆ ಇಂಥ ಕಾರ್ಯಕ್ರಮಗಳು ಮತ್ತೆ ಮತ್ತೆ ನಡೆಯಬೇಕು ಎಂದರು. ಕನ್ನಡ ಭಾರತಿಯ ಜೊತೆ ತಾವಿದ್ದೇವೆ’ ಎಂದು ನುಡಿಯುವ ಮೂಲಕ ತಮ್ಮ ಹೃದಯ ವೈಶಾಲ್ಯವನ್ನು ಮೆರೆದರು. ಕನ್ನಡ ಭಾರತಿ ಅವರನ್ನು ಪ್ರೀತಿಯಿಂದ ಗೌರವಿಸಿತು.
ಅಮೆರಿಕಾ ಸರ್ಕಾರದಿಂದ ಕೊಡಮಾಡುವ ‘President’s volunteer award’ ಕನ್ನಡ ಭಾರತಿಯ ಸ್ವಯಂ ಸೇವಕರಿಗೆ ನೀಡಲ್ಪಟ್ಟಿತು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆಲ್ಲ ಮಕುಟಪ್ರಾಯವಾದುದು ‘ಸಂಗೀತ ರಸಸಂಜೆ. ಸುಮಾರು ಎರಡು ತಾಸುಗಳಷ್ಟು ನಡೆದ ಈ ಕಾರ್ಯಕ್ರಮದಲ್ಲಿ ‘ಸರೆಗಮಪ’ ಖ್ಯಾತಿಯ ಸುಪ್ರಿಯಾ ಜೋಶಿ ಹಾಗೂ ‘ಎದೆ ತುಂಬಿ ಹಾಡುವೆನು’ ಖ್ಯಾತಿಯ ವಿಜಯೇಂದ್ರ ರಾವ್ ಪಾಲ್ಗೊಂಡಿದ್ದರು. ಹಿಮ್ಮೇಳನದ ಸಂಗೀತವನ್ನೊದಗಿಸಿದ ಕಲಾವಿದರ ಪ್ರಬುದ್ಧತೆ ಮೆಚ್ಚುವಂತಿತ್ತು.
“ಕ್ರಾಸ್ ಆಫ್ ಕ್ರೈಸ್ಟ್ ಲುಥೆರನ್ ಚರ್ಚ್” ಮತ್ತು ಕನ್ನಡ ಭಾರತಿಗೂ ನಿಜವಾಗಿ ಬಿಡಿಸಲಾರದ ನಂಟಿದೆ.ಭಾರತೀಯ ಹಾಗೂ ಎಲ್ಲರೀತಿಯ ಕಲೆಗಳ ಕುರಿತು ತುಂಬ ಅಭಿಮಾನವಿರುವ ಚರ್ಚಿನ ಆಡಳಿತ ಮಂಡಳಿಯು ಕರ್ನಾಟಕಿ ಸಂಗೀತ,ಹಿಂದುಸ್ತಾನಿ ಸಂಗೀತ, ಭರತನಾಟ್ಯ, ತಬಲಾ,ಗಿಟಾರ್ ಮೊದಲಾದ ತರಗತಿಗಳನ್ನು ನಡೆಸಲು ಕನ್ನಡ ಭಾರತಿಗೆ ಅನುವುಮಾಡಿಕೊಟ್ಟಿದೆ. ಚರ್ಚಿನ ಪಾಸ್ಟರ್ ಡೇವ್ ರವರು ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಘದ ಗೌರವವನ್ನು ಪ್ರೀತಿಯಿಂದ ಸ್ವೀಕರಿಸಿದರು.
ವಾಷಿಂಗ್ಟನ್‌ನ ʻಕನ್ನಡ ಭಾರತಿʼ. ಮಂಜುನಾಥ ಶೆಟ್ಟರು ಸಂಘ ಮುನ್ನಡೆಸುವ ಸಾರಥಿ. ಅವರ ಜೊತೆಗಿದೆ ಸಮಾನ ಮನಸ್ಕರ ದೊಡ್ಡ ತಂಡ. ಕರೆದಾಗ ಬರುವರು ಎಲ್ಲ, ಮನಸಾ ಕೈಜೋಡಿಸುವರು ಎಲ್ಲ. ಬಹುಕಾಲ ಬದುಕಿ ಬೆಳಗಲಿ ಸಂಘ, ಬೆಳಗುವಲ್ಲಿ ಅನುಮಾನವಿಲ್ಲ. ಅನುಮಾನ ಸಲ್ಲ. ಜೈ ಕನ್ನಡ ಭಾರತಿ.
– ಸುಲೋಚನಾ ಹೆಗಡೆ, ಹರಿಕೇರಿ