Advertisement

3 ದಿನಕ್ಕೊಮ್ಮೆ ಸ್ನಾನ, ನಾಲ್ಕು ದಿನಕ್ಕೊಮ್ಮೆ ಬಟ್ಟೆ ಒಗೆಯುತ್ತೇವೆ!

09:15 AM Apr 29, 2019 | sudhir |

ಮಲ್ಪೆ: ಉಡುಪಿ ನಗರಸಭೆಯ ಸಮುದ್ರ ತೀರದ ವಾರ್ಡ್‌ಗಳಾದ ಕಲ್ಮಾಡಿ, ಮಲ್ಪೆ ಸೆಂಟ್ರಲ್‌ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. ಈಗ 3 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದ್ದು ನೀರಿನ ಒತ್ತಡ ಸಾಕಾಗುತ್ತಿಲ್ಲ. ಈ ಎರಡೂ ವಾರ್ಡ್‌ನ ಹೆಚ್ಚಿನ ಭಾಗ ಉಪ್ಪು ನೀರಿನ ಪ್ರದೇಶವಾದ್ದರಿಂದ ಬೇಸಗೆಯಲ್ಲಿ ಜನ ನೀರಿಗೆ ಪರದಾಡುತ್ತಾರೆ.

Advertisement

ತೀವ್ರ ಸಮಸ್ಯೆಯಿರುವ ಪ್ರದೇಶಗಳು
ಕಲ್ಮಾಡಿ ವಾರ್ಡ್‌ ಬಾಪುತೋಟ, ಮೂಡು ತೋಟ, ಹೊಸಕಟ್ಟ ಸಸಿತೋಟ, ಮಠತೋಟ, ಕಕ್ಕೆತೋಟ, ಬಿಲ್ಲುಗುಡ್ಡೆ, ಬೊಟ್ಟಲ ಕಲ್ಮಾಡಿ ಚರ್ಚ್‌ ಹಿಂಬದಿ ಮತ್ತು ಮಲ್ಪೆ ಸೆಂಟ್ರಲ್‌ ವಾರ್ಡ್‌ನ ಪಡುಕರೆ, ಶಾಂತಿನಗರ, ಬಾಪುತೋಟ, ಕೊಪ್ಪಲ ತೋಟ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ.
ಕಲ್ಮಾಡಿ ವಾರ್ಡ್‌ನಲ್ಲಿ ಸುಮಾರು 525 ಮನೆಗಳಿದ್ದು ಎಲ್ಲ ಮನೆಗೂ ನಳ್ಳಿ ಸಂಪರ್ಕವಿದೆ. ಇಲ್ಲಿರುವ ಬಾವಿಗಳ ನೀರು ಯಾವುದೇ ಬಳಕೆಗೆ ಯೋಗ್ಯವಾಗಿಲ್ಲ. ಇದರಿಂದ ನಗರಸಭೆ ನೀರೇ ಗತಿ. ಹೊಳೆತೀರದ ಗಡಿಯಲ್ಲಿರುವ ಮಂದಿಯ ಮನೆಗೆ ನೀರು ಸರಿಯಾಗಿ ಬರುತ್ತಿಲ್ಲ.

ಮಲ್ಪೆ ಸೆಂಟ್ರಲ್‌ ವಾರ್ಡ್‌ ಭಾಗಶಃ ಸಮಸ್ಯೆ
ಮಲ್ಪೆ ಸೆಂಟ್ರಲ್‌ ವಾರ್ಡ್‌ನ ಕೊಪ್ಪಲತೋಟ, ಪಡುಕರೆ, ಶಾಂತಿನಗರದಲ್ಲಿ ಸಮಸ್ಯೆ ಇದೆ. ವಾರ್ಡ್‌ನ ಇತರ ಭಾಗದಲ್ಲಿ ಬಾವಿ ನೀರನ್ನು ಉಪಯೋಗಿಸುತ್ತಿದ್ದಾರೆ. ಇನ್ನು ಕೆಲವು ಭಾಗದಲ್ಲಿ ಮನೆ ಬಾವಿಗಳಲ್ಲೂ ನೀರಿನ ಒರತೆ ಕಡಿಮೆಯಾಗಿದೆ.

ಮೂರು ದಿನಕ್ಕೊಮ್ಮೆ ಸ್ನಾನ
ನಾಲ್ಕು ದಿನಕ್ಕೊಮ್ಮೆ ಬಟ್ಟೆ ಒಗೆಯುತ್ತೇವೆ, ಮೂರು ದಿನಕ್ಕೊಮ್ಮೆ ಸ್ನಾನ ಮಾಡುತ್ತೇವೆ. ಕೆಲವೊಮ್ಮ ಸ್ನಾನಕ್ಕೆ ಅನಿವಾರ್ಯವಾಗಿ ತಮ್ಮ ಸಂಬಂಧಿಕರ ಮನೆಗಳಿಗೆ ಹೋಗಬೇಕಾಗುವ ಪರಿಸ್ಥಿತಿ ಇದೆ. ಇಂತಹ ಸ್ಥಿತಿ ಈ ಹಿಂದೆ ಬಂದಿಲ್ಲ ಎನ್ನುತ್ತಾರೆ ಬಾಪುತೋಟ ಹೊಳೆತೀರದ ನಿವಾಸಿ ಹಸೀನಾ ಅವರು.

ಚಹಾಕ್ಕೂ ನೀರಿಲ್ಲ
ಮೂರು ದಿನಕ್ಕೊಮ್ಮೆ ನೀರು ಬಂದರೂ 10 ಕೊಡ ನೀರು ಸಿಗುವುದು ಕಷ್ಟ. ಬಟ್ಟೆ ಒಗೆಯಲು, ಸ್ನಾನಕ್ಕೆ ದೂರದ ಬಾವಿಗಳಿಂದ ಹೊತ್ತು ತರಬೇಕು. ಕೆಲವೊಂದು ಮನೆಗಳಲ್ಲಿ ಅದಕ್ಕೆ ಅವಕಾಶ ಕೊಡುವುದಿಲ್ಲ. ಮೊನ್ನೆ ಚಹಾ ಮಾಡಲೂ ನೀರಿರಲಿಲ್ಲ ಎಂದು ಸಂಕಟ ತೋಡುತ್ತಾರೆ ಬಾಪುತೋಟದ ಮುಮ್ತಾಜ್‌ ಅವರು.

Advertisement

ಚುನಾವಣೆ ಮುಗಿದ ಮೇಲೆ ನೀರಿಲ್ಲ
ಚುನಾವಣೆ ಮುಗಿಯುವರೆಗೆ ಪ್ರತಿನಿತ್ಯ ನೀರು ಬರುತ್ತಿತ್ತು. ನೀರಿನ ಪ್ರಶ್ಶರ್‌ ಕೂಡ ಜಾಸ್ತಿಯಾಗಿತ್ತು. ಎ. 18ರಂದು ಚುನಾವಣೆ ಮುಗಿದ ಮಾರನೇ ದಿನವೇ ನೀರಿಲ್ಲ. ಈಗ 3 ದಿನಕ್ಕೊಮ್ಮೆ ನೀರು ಬಂದರೂ ಪ್ರಶ್ಶರ್‌ ಇಲ್ಲ. ಕುಡಿಯಲು ಸಾಕಾಗುತ್ತಿಲ್ಲ. ಇನ್ನು ಬಟ್ಟೆ ತೊಳೆಯಲು, ಶೌಚಾಲಯ ಬಳಕೆ ಹೇಗೆ ಸಾಧ್ಯ? ಎನ್ನುತ್ತಾರೆ ಕೊಪ್ಪಲತೋಟದ ಇಂದಿರಾ ಕುಂದರ್‌.

ಟ್ಯಾಂಕರ್‌ ಅವಲಂಬನೆ ಅನಿವಾರ್ಯ
ಕಳೆದ ವರ್ಷವೂ ಈ ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗಿತ್ತು. ಮೂರು ದಿನಕ್ಕೊಮ್ಮೆ ನೀರು ಬಿಡುತ್ತಿದ್ದರೂ ಮಧ್ಯೆ ಟ್ಯಾಂಕರ್‌ ನೀರು ಸರಬರಾಜಿತ್ತು.
ಬೇಗನೆ ಮಳೆಯಾದ್ದರಿಂದ ನೀರಿನ ಸಮಸ್ಯೆಯಿಂದ ಪಾರಾಗಿತ್ತು. ಈ ಬಾರಿ ನೀರಿನ ಕೊರತೆ ಹೆಚ್ಚಾಗಿದ್ದರಿಂದ ಮತ್ತೆ ಸಮಸ್ಯೆ ಎದುರಾಗಿದೆ. ಸಮಸ್ಯೆ ಇರುವ ಕಡೆ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಲು ನಗರಸಭೆ ಕ್ರಮ ತೆಗೆದುಕೊಳ್ಳಬೇಕಾಗಿದೆ.

ಟ್ಯಾಂಕರ್‌ ನೀರಿಗೆ ಕ್ರಮ
ಕುಡಿಯುವ ನೀರು ಸರಬರಾಜು ಮಾಡುವ ಬಜೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹದ ಮಟ್ಟ ತೀರ ಕುಸಿದಿದೆ. ಜಿಲ್ಲಾಧಿಕಾರಿಗಳು ಸಭೆಯಲ್ಲಿ ನಗರದ ನೀರಿನ ಸಮಸ್ಯೆ, ನಗರದ ನೀರಿನ ಸ್ಥಿತಿಗತಿ, ಪರಿಹಾರದ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ನೀರಿನ ತೀರಾ ಅಭಾವ ಇರುವ ಕಡೆ ಟ್ಯಾಂಕರ್‌ ನೀರಿಗೆ ಕ್ರಮ ಕೈಗೊಳ್ಳಲಾಗುವುದು.
– ಆನಂದ್‌ ಸಿ. ಕಲ್ಲೊಳಿಕರ್‌, ಪೌರಾಯುಕ್ತರು, ಉಡುಪಿ ನಗರಸಭೆ

ಬಂದವರನ್ನು ದೂಡಲು ಆಗುತ್ತಾ ?
ಮಕ್ಕಳಿಗೆ ಶಾಲೆಗೆ ರಜೆ, ದೂರದ ಊರಿನ ಸಂಬಂಧಿಗಳು ಮನೆಯಲ್ಲಿ ಉಳಿದುಕೊಳ್ಳಲು ಬರುತ್ತಾರೆ. ಈಗ ಸಿಗುವ ನೀರು ಮನೆಯಲ್ಲಿದ್ದವರಿಗೆ ಕುಡಿಯಲು ಸಾಕಾಗುತ್ತಿಲ್ಲ. ಮನೆಗೆ ಬಂದವರನ್ನು ದೂಡಲು ಆಗುತ್ತಾ? ದಿನಾ ದುಡ್ಡು ಕೊಟ್ಟು ಟ್ಯಾಂಕರ್‌ ನೀರು ಎಷ್ಟೆಂದು ಖರೀದಿಸುವುದು?
-ಪ್ರದೀಪ್‌ ಟಿ. ಸುವರ್ಣ, ಕಲ್ಮಾಡಿ ಬೊಟ್ಟಲ

ಸ್ವಂತ ಖರ್ಚಿನಿಂದ ಪೂರೈಕೆ
ಬಾಪುತೋಟ, ಸಸಿತೋಟದ ಕೊನೆಯಲ್ಲಿರುವ ಮನೆಗಳಿಗೆ ಸರಿಯಾಗಿ ನೀರು ಸಿಗುತ್ತಿಲ್ಲ. ಆ ಭಾಗದ ಮಂದಿ ಪೋನ್‌ ಮಾಡಿ ತಮ್ಮ ಅಳಲನ್ನು ಹೇಳುತ್ತಿದ್ದಾರೆ. ಅಂತಹ ಕೆಲವು ಮನೆಗಳಿಗೆ ಅನಿವಾರ್ಯವಾಗಿ ನನ್ನ ಸ್ವಂತ ಖರ್ಚಿನಿಂದ ಟ್ಯಾಂಕರ್‌ ನೀರನ್ನು ಪೂರೈಸಿದೇªನೆ. ಜಿಲ್ಲಾಡಳಿತ ಮಾನವೀಯ ನೆಲೆಯಲ್ಲಿ ಟ್ಯಾಂಕರ್‌ ನೀರು ಪೂರೈಕೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
-ಸುಂದರ್‌ ಜೆ. ಕಲ್ಮಾಡಿ, ನಗರಸಭಾ ಸದಸ್ಯರು

ವಾರ್ಡ್‌ ಜನರ ಬೇಡಿಕೆ
– ತೀರ ಅಗತ್ಯ ಪ್ರದೇಶಗಳಿಗೆ ಟ್ಯಾಂಕರ್‌ ನೀರು ಪೂರೈಕೆ ಮಾಡಬೇಕು.
– ಬಜೆ ಅಣೆಕಟ್ಟೆ ಹೂಳೆತ್ತಲಿ
– ಮಾನವೀಯ ನೆಲೆಯಲ್ಲಿ ಸಂಘ ಸಂಸ್ಥೆಗಳು ನೆರವಿಗೆ ಬರಲಿ.
– ಕನಿಷ್ಠ 2ದಿನಕ್ಕೊಮ್ಮೆ ನೀರು ಕೊಡಬೇಕು.
– ನೀರಿನ ಪ್ರಶ್ಶರ್‌ ಜಾಸ್ತಿ ಮಾಡಲಿ.

– ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next