ಲಕ್ನೋ: ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ತಾನೇ ಎಂಬುದಾಗಿ ಪರೋಕ್ಷವಾಗಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ (ಜನವರಿ 22) ಉಲ್ಟಾ ಹೊಡೆದಿದ್ದು, ತಾನು ಉತ್ತರಪ್ರದೇಶ ಸಿಎಂ ಅಭ್ಯರ್ಥಿ ಆಕಾಂಕ್ಷಿ ಅಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಐವರ ಬಾಳಿಗೆ ಬೆಳಕಾದ ದರ್ಶನ್: ಏರ್‌ಲಿಫ್ಟ್ ಮೂಲಕ ಮೈಸೂರಿನಿಂದ ಚೆನ್ನೈಗೆ ಹೃದಯ
ಎಎನ್ ಐ ನ್ಯೂಸ್ ಏಜೆನ್ಸಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ, ನಾನು ಉತ್ತರಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿ ಎಂಬ ಅರ್ಧದಲ್ಲಿ ಹೇಳಿಕೆ ನೀಡಿಲ್ಲ, ಪದೇ, ಪದೇ ನನಗೆ ಸಿಎಂ ಅಭ್ಯರ್ಥಿ ಯಾರೆಂಬ ಪ್ರಶ್ನೆಗೆ ಉತ್ಪ್ರೇಕ್ಷೆಯಾಗಿ ಹಾಗೆ ಹೇಳಿರುವುದಾಗಿ ಪ್ರಿಯಾಂಕಾ ಸ್ಪಷ್ಟನೆ ನೀಡಿರುವುದಾಗಿ ತಿಳಿಸಿದೆ.
ಶುಕ್ರವಾರ ಉತ್ತರಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಯುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದ ಸಂದರ್ಭದಲ್ಲಿ ಸುದ್ದಿಗಾರರು ಸಿಎಂ ಅಭ್ಯರ್ಥಿ ಯಾರೆಂದು ಪ್ರಶ್ನಿಸಿದ್ದು, ಕಾಂಗ್ರೆಸ್ ಪಕ್ಷದಲ್ಲಿ ನಿಮಗೆ ಬೇರೆ ಯಾರ ಮುಖ ಕಾಣಿಸುತ್ತಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ತಾನೇ ಸಿಎಂ ಅಭ್ಯರ್ಥಿ ಎಂಬುದಾಗಿ ಹೇಳಿದ್ದರು.
ಕಳೆದ ವಾರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಈ ಬಾರಿಯ ಉತ್ತರಪ್ರದೇಶ ಚುನಾವಣೆ ಶೇ.80 ಮತ್ತು ಶೇ.20ರ ನಡುವಿನ ಹೋರಾಟವಾಗಲಿದೆ ಎಂದು ಹೇಳಿಕೆ ನೀಡಿದ್ದರು.
ಸಿಎಂ ಯೋಗಿಯ ಈ ಹೇಳಿಕೆಗೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು ಧರ್ಮಾಧಾರಿತ ಧ್ವನಿಯ ಹೇಳಿಕೆಯಾಗಿದೆ ಎಂದು ತಿರುಗೇಟು ನೀಡಿದ್ದವು. ಬಿಜೆಪಿ ಹಾಗೂ ಮುಖಂಡರು ಉತ್ತರಪ್ರದೇಶದಲ್ಲಿನ ನಿರುದ್ಯೋಗದ ಕುರಿತು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದರು.