ಮುಂಬೈ: ವಿರಾಟ್ ಕೊಹ್ಲಿ ಅವರು ಮೂರು ಮಾದರಿ ಕ್ರಿಕೆಟ್ ತಂಡದ ನಾಯಕತ್ವವನ್ನು ತೊರೆದ ಬಳಿಕ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕಳೆದೊಂದು ವರ್ಷದಿಂದ ತಂಡದ ಚುಕ್ಕಾಣಿ ಹಿಡಿದಿರುವ ರೋಹಿತ್ ಶರ್ಮಾ, ಈ ವರ್ಷಾಂತ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.
ರೋಹಿತ್ ಶರ್ಮಾ ಅವರ ನಾಯಕತ್ವದಿಂದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅವರು ಸಂತುಷ್ಟರಾಗಿಲ್ಲ. ರೋಹಿತ್ ರಿಂದ ನಾವು ಹೆಚ್ಚು ನಿರೀಕ್ಷೆ ಮಾಡಿದ್ದೆವು ಎಂದು ಅವರು ಹೇಳಿಕೊಂಡಿದ್ದಾರೆ.
“ನಾವು ರೋಹಿತ್ ಶರ್ಮಾ ಅವರಿಂದ ಹೆಚ್ಚು ನಿರೀಕ್ಷೆ ಮಾಡಿದ್ದೆವು. ಆದರೆ ಕೆಲವು ವಿಭಾಗಗಳಲ್ಲಿ ಅವರು ನಮ್ಮನ್ನು ನಿರಾಸೆ ಮಾಡಿದ್ದಾರೆ. ಸ್ವದೇಶದಲ್ಲಿ ಬೇರೆ ಕಥೆ, ಆದರೆ ವಿದೇಶದಲ್ಲಿ ಉತ್ತಮ ಪ್ರದರ್ಶನ ನೀಡುವುದು ನಿಜವಾದ ಪರೀಕ್ಷೆ. ಈ ವಿಚಾರದಲ್ಲಿ ರೋಹಿತ್ ರಿಂದ ನಿರಾಸೆಯಾಗಿದೆ. ಟಿ20 ಮಾದರಿಯಲ್ಲೂ ಅಷ್ಟೇ, ನೂರಕ್ಕೂ ಹೆಚ್ಚು ಐಪಿಎಲ್ ಪಂದ್ಯಗಳಲ್ಲಿ ನಾಯಕನಾಗಿ ಆಡಿ ಅನುಭವವಿರುವ ರೋಹಿತ್ ಗೆ ಟಿ20 ವಿಶ್ವಕಪ್ ಫೈನಲ್ ಕೂಡಾ ತಲುಪಲಾಗಲಿಲ್ಲ”ಎಂದರು.
ಭಾರತ ತಂಡದ ಸೋಲಿನ ನಂತರ ನಾಯಕ ಮತ್ತು ತಂಡದ ನಿರ್ವಹಣೆಯ ವಿಮರ್ಶೆಯನ್ನು ಮಾಡಲಾಗಿದೆಯೇ ಎಂದು ಗಾವಸ್ಕರ್ ಪ್ರಶ್ನಿಸಿದರು. ನಿರ್ದಿಷ್ಟವಾಗಿ ಡಬ್ಲ್ಯೂಟಿಸಿ ಫೈನಲ್ ನಲ್ಲಿ ರೋಹಿತ್ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರು ಪಂದ್ಯದ ಸಮಯದಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಕೇಳಬೇಕಿತ್ತು ಎಂದು ಹೇಳಿದರು.
“ಆ ಪಂದ್ಯದಲ್ಲಿ ಮೊದಲು ಬೌಲಿಂಗ್ ಯಾಕೆ ಮಾಡಿದ್ದು? ಮೋಡ ಕವಿದ ವಾತಾವರಣದ ಕಾರಣ ಎಂದು ಅವರು ಟಾಸ್ ಸಮಯದಲ್ಲಿ ಹೇಳಿದ್ದರು ಇರಲಿ; ಆದರೆ ಶಾರ್ಟ್ ಬಾಲ್ ಗೆ ಟ್ರಾವಿಸ್ ಹೆಡ್ ಉತ್ತಮವಾಗಿ ಆಡುವುದಿಲ್ಲ ಎಂದು ನಿಮಗೆ ಗೊತ್ತಿರಲಿಲ್ಲವೇ? ಅವರು 80 ರನ್ ಗಳಿಸಿದ ಬಳಿಕ ನೀವು ಯಾಕೆ ಬೌನ್ಸರ್ ಹಾಕಲು ಆರಂಭಿಸಿದ್ದು? ಹೆಡ್ ಬ್ಯಾಟಿಂಗ್ ಗೆ ಬಂದಾಗಲೇ ಕಾಮೆಂಟರಿಯಲ್ಲಿದ್ದ ರಿಕಿ ಪಾಂಟಿಂಗ್ ಬೌನ್ಸರ್ ಹಾಕುವಂತೆ ಹೇಳುತ್ತಿದ್ದರು. ಎಲ್ಲರಿಗೂ ಈ ವಿಚಾರ ಗೊತ್ತು ಆದರೆ ನೀವು ಮಾತ್ರ ಪ್ರಯತ್ನವೂ ಪಡಲಿಲ್ಲ” ಎಂದು ರೋಹಿತ್ ವಿರುದ್ಧ ಸುನಿಲ್ ಗಾವಸ್ಕರ್ ಕಿಡಿಕಾರಿದರು.