ಹೊಸದಿಲ್ಲಿ : ಏರ್ ಇಂಡಿಯಾ ಸಿಬಂದಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಶಿವಸೇನೆ ಸಂಸದ ರವೀಂದ್ರ ಗಾಯಕ್‌ವಾಡ್ ಅವರು ಗುರುವಾರ ಸಂಸತ್‌ನಲ್ಲಿ ಮಾತನಾಡಿದ ಬಳಿಕ ಕೇಂದ್ರ ಸಚಿವರಿಬ್ಬರ ಮಧ್ಯೆಯ ತೀವ್ರ ಜಟಾಪಟಿ ನಡೆದಿದೆ.
ಗಾಯಕ್ವಾಡ್ ಮಾತನಾಡಿ ಮೊದಲು ನನ್ನ ಮೇಲೆ ಏರ್ ಇಂಡಿಯಾ ಸಿಬಂದಿಯಿಂದ ಹಲ್ಲೆ ನಡೆದಿದ್ದು, ಅವರ ಅನುಚಿತ ವರ್ತನೆಯಿಂದಲೇ ಘಟನೇ ನಡೆದಿದೆ. ನಾನು ತಾಳ್ಮೆಯಿಂದ ವರ್ತಿಸಿದ್ದೆ. ಘಟನೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಸಂಸತ್‌ನ ಕ್ಷಮೆ ಯಾಚಿಸುತ್ತೇನೆ.ಆದರೆ ಯಾವುದೇ ಕಾರಣಕ್ಕೂ ಏರ್‌ಇಂಡಿಯಾ ಸಿಬಂದಿಗಳ ಕ್ಷಮೆ ಯಾಚಿಸುವುದಿಲ್ಲ ಪ್ರಕರಣದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಅವರು ಗಾಯಕ್‌ವಾಡ್ ವಿರುದ್ಧ ಕಿಡಿ ಕಾರಿ,ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ.ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಬಳಿಕ ಅಶೋಕ್ ಗಜಪತಿ ರಾಜು ವಿರುದ್ಧ ಶಿವಸೇನೆ ಯ ಸಚಿವ ಅನಂತ್‌ಗೀತೆ ಕಿಡಿ ಕಾರಿದ ಘಟನೆ ನಡೆದಿರುವುದಾಗಿ ವರದಿಯಾಗಿದೆ.ಗೀತೆಗೆ ಶಿವಸೇನೆ ಸಂಸದರು ಬೆಂಬಲಕ್ಕೆ ನಿಂತಿದ್ದರು ಎನ್ನಲಾಗಿದೆ.
ತಮ್ಮ ಕೊಠಡಿಗೆ ಆಗಮಿಸಿದ ಗಣಪತಿ ರಾಜು ವಿರುದ್ಧ ತೀವ್ರ ವಾಗ್ವಾದ ನಡೆಸಿದ್ದು, ಈ ವೇಳೆ ಗೃಹ ಸಚಿವ ರಾಜ್‌ನಾಥ್ ಸಿಂಗ್ ಮತ್ತು ಸಚಿವೆ ಸ್ಮೃತಿ ಇರಾನಿ ಮಧ್ಯ ಪ್ರವೇಶಿಸಿದ್ದಾರೆ ಎಂದು ವರದಿಯಾಗಿದೆ.