ಬೆಂಗಳೂರು: ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುಲಿಕೇಶಿನಗರ ಸಂಚಾರ ಠಾಣೆ ಹೆಡ್ ಕಾನ್‌ಸ್ಟೆಬಲ್ ಗುರುಮೂರ್ತಿ ಇದೀಗ ಸಂಪೂರ್ಣವಾಗಿ ಗುಣಮುಖರಾಗಿ ಶನಿವಾರ ಬಿಡುಗಡೆಯಾದರು. ಸಂಜೆ 4.30ರಲ್ಲಿ ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು.
ಈ ವೇಳೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ. ಬಿ.ಆರ್. ರವಿಕಾಂತೇ ಗೌಡ, ಡಿಸಿಪಿ ನಾರಾಯಣ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಪುಷ್ಪವೃಷ್ಟಿ ಮೂಲಕ ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಹಿರಿಯ ಅಧಿಕಾರಿಗಳು ತೋರಿದ ಕಾಳಜಿಗೆ ಹೆಡ್ ಕಾನ್‌ಸ್ಟೆಬಲ್ ಗುರುಮೂರ್ತಿ ಗೌರವ ವಂದನೆ ಸಲ್ಲಿಸಿದ್ದು, ಭಾವುಕರಾದರು.
ಬಳಿಕ ಇಲಾಖೆಯ ವಾಹನದಲ್ಲಿಯೆ ಮನೆಗೆ ಕರೆದೊಯ್ಯಲಾಯಿತು. 10 ದಿನದಲ್ಲಿ ಗುಣಮುಖ: ಹೆಗಡೆನಗರದ ಪೊಲೀಸ್ ವಸತಿ ಗೃಹದಲ್ಲಿ ಕುಟುಂಬದ ಜತೆ ನೆಲೆಸಿರುವ ಗುರುಮೂರ್ತಿ ಪುಲಿಕೇಶಿನಗರ ಸಂಚಾರ ಠಾಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿದ್ದಾರೆ. ಡಿಜಿಪಿ ಆದೇಶದ ಹಿನ್ನೆಲೆಯಲ್ಲಿ ಕೋವಿಡ್ 19 ಪರೀಕ್ಷೆಗೆ ಒಳ ಪಡಿಸ ಲಾಗಿತ್ತು. ಮೇ 20ರಂದು ಸೋಂಕು ತಗುಲಿರುವು ದು ದೃಢಪಟ್ಟಿತ್ತು.
ಬಳಿಕ ವಿಕ್ಟೋರಿಯಾ ಆಸ್ಪತ್ರೆ ಯಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದು, 10 ದಿನದಲ್ಲಿಯೇ ಗುಣಮುಖರಾಗಿದ್ದಾರೆ. ಸೋಂಕಿನ ಲಕ್ಷಣ ಕಾಣಿಸಿಕೊಂಡ ಕೂಡಲೇ ಚಿಕಿತ್ಸೆಗೆ ದಾಖಲಿಸಲಾಯಿತು. ಇದೀಗ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಪಡಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.
ಪ್ರಾಥಮಿಕ ಸಂಪರ್ಕಿತರಿಗೆ ಸೋಂಕಿಲ್ಲ: ಸಾರಿಗೆ ವ್ಯವಸ್ಥೆ ಇಲ್ಲದಿದ್ದರಿಂದ ಮಹಿಳಾ ಕಾನ್‌ಸ್ಟೆಬಲ್ ವೊಬ್ಬರನ್ನು ಹೆಣ್ಣೂರಿನಲ್ಲಿರುವ ಪೇಯಿಂಗ್ ಗೆಸ್ಟ್‌ಗೆ ಡ್ರಾಪ್ ಮಾಡಿದ್ದರು. ಈ ವೇಳೆ ಗುರುಮೂರ್ತಿಗೆ ಸೋಂಕು ತಗುಲಿರುವುದು ಗೊತ್ತಿರಲಿಲ್ಲ. ಮರು ದಿನ ವರದಿ ಬಂದಿದ್ದು ಸೋಂಕು ತಗುಲಿರು ವುದು ದೃಢ ಪಟ್ಟಿತ್ತು.
ಬಳಿಕ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮಹಿಳಾ ಕಾನ್‌ಸ್ಟೆಬಲ್ ಹಾಗೂ ಪೊಲೀಸ್ ಇನ್ ಸ್ಪೆಕ್ಟರ್ ಸೇರಿ 20 ಮಂದಿಯನ್ನು ಗುರುತಿಸಿ ಕೋವಿಡ್ 19 ಪರೀಕ್ಷೆಗೆ ಒಳಪಡಿಸಿ, ಕ್ವಾರಂಟೈನ್ ಮಾಡಲಾಗಿತ್ತು. ಎಲ್ಲರಿಗೂ ನೆಗೆಟಿವ್ ವರದಿ ಬಂದಿದೆ. ಸಿಬ್ಬಂದಿಗೆ ಕಾಡುತ್ತಿದ್ದ ಆತಂಕವೂ ದೂರಾಗಿದೆ ಎಂದು ಈಶಾನ್ಯ ವಿಭಾಗದ ಸಂಚಾರ ಡಿಸಿಪಿ ನಾರಾಯಣ ಹೇಳಿದರು.