Advertisement
ಬಿಬಿಎಂಪಿ ವ್ಯಾಪ್ತಿಯಲ್ಲಿ 19.50 ಲಕ್ಷಕ್ಕೂ ಹೆಚ್ಚಿನ ಆಸ್ತಿಗಳಿವೆ ಎಂಬುದು ಜಿಐಎಸ್ ಪದ್ಧತಿಯಿಂದ ತಿಳಿದುಬಂದಿದೆ. ಆದರೆ, ಎಲ್ಲ ಆಸ್ತಿಗಳಿಗೆ ಪಾಲಿಕೆಗೆ ತೆರಿಗೆ ಸಂಗ್ರಹವಾಗುತ್ತಿಲ್ಲ. ತೆರಿಗೆ ಪಾವತಿಸುವಂತೆ ಹಲವಾರು ಬಾರಿ ನೋಟಿಸ್ ಜಾರಿಗೊಳಿಸಿದರೂ, ಆಸ್ತಿದಾರರು ಮಾತ್ರ ತೆರಿಗೆ ಪಾವತಿಗೆ ಮುಂದಾಗುತ್ತಿಲ್ಲ. ಜತೆಗೆ ಪಾಲಿಕೆಯ ಅಧಿಕಾರಿಗಳು ಸಹ ಅಂತಹವರ ವಿರುದ್ಧ ಕ್ರಮಕ್ಕೆ ಮುಂದಾಗದಿರುವುದು ಕಂಡುಬಂದಿದೆ.
Related Articles
Advertisement
ಗುರಿ ಮುಟ್ಟುವ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ: ಪಾಲಿಕೆಯಿಂದ ನೀಡಲಾಗಿದ ಆಸ್ತಿ ತೆರಿಗೆ ಸಂಗ್ರಹ ಗುರಿಯನ್ನು ಶೇ.100 ಸಾಧನೆ ಮಾಡುವ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲು ಕ್ರಮಕೈಗೊಳ್ಳಬೇಕೆಂದು ಮೇಯರ್‌ಗೆ ಬಿಬಿಎಂಪಿ ಆಡಳಿತ ಪಕ್ಷ ನಾಯಕ ಎಂ.ಶಿವರಾಜು ಅವರು ಪತ್ರ ಬರೆದಿದ್ದಾರೆ.
ಆಸ್ತಿ ತೆರಿಗೆ ಪಾಲಿಕೆಯ ಪ್ರಮುಖ ಆದಾಯದ ಮೂಲವಾಗಿದೆ. ಅದರೆ, ಅಧಿಕಾರಿಗಳು ಸಮರ್ಪಕವಾಗಿ ತೆರಿಗೆ ಸಂಗ್ರಹ ಮಾಡದ ಹಿನ್ನೆಲೆಯಲ್ಲಿ ಸಂಪನ್ಮೂಲ ಕ್ರೂಢೀಕರಣದ ಕಷ್ಟವಾಗುತ್ತಿದೆ. ಹೀಗಾಗಿ ತೆರಿಗೆ ಸಂಗ್ರಹಿಸುವ ಕಂದಾಯ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ನೀಡುವುದರಿಂದ ಅವರಿಗೂ ತೆರಿಗೆ ಸಂಗ್ರಹಿಸಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಉಲ್ಲೇಖೀಸಿದ್ದಾರೆ.
ಮೇಯರ್ ಅವರ ಅಧ್ಯಕ್ಷತೆಯಲ್ಲಿ ವಲಯವಾರು ಕಂದಾಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೆರಿಗೆ ಹೆಚ್ಚಳಕ್ಕೆ ಪ್ರಯತ್ನಿಸಲಾಗುತ್ತಿದೆ. ಜತೆಗೆ ಹೆಚ್ಚಿನ ತೆರಿಗೆ ಸಂಗ್ರಹ ಮಾಡುವಂತಹ ಅಧಿಕಾರಿಗಳಿಗೆ ಕೆಂಪೇಗೌಡ ಜಯಂತಿ ವೇಲೆ ಉತ್ತಮ ನೌಕರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಇಂತಹ ಕ್ರಮಗಳಿಗೆ ಅಧಿಕಾರಿಗಳಿಗೂ ಹೆಚ್ಚಿನ ತೆರಿಗೆ ಸಂಗ್ರಹಿಸಬೇಕೆಂಬ ಮನೋಭಾವನೆ ಬರುವುದರಿಂದ ವಾರ್ಡ್‌ಗಳಲ್ಲಿ ಶೇ.100 ತೆರಿಗೆ ಸಂಗ್ರಹಿಸುವ ಅಧಿಕಾರಿಗಳಿಗೂ ಪ್ರಶಂಸನಾ ಪತ್ರ ನೀಡುವುದಾಗಿ ಆಯುಕ್ತರ ಮೂಲಕ ಸುತ್ತೋಲೆ ಹೊರಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಬಾಕಿದಾರರ ಮೇಲೆ ಅಧಿಕಾರಿಗಳಿಗೆ ಪ್ರೀತಿ: ಕೆಎಂಸಿ ಕಾಯ್ದೆಯಂತೆ ಪಾಲಿಕೆಗೆ ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿದಾರರಿಗೆ ಕಾರಣ ಕೇಳಿ ಒಂದು ಬಾರಿ ನೋಟಿಸ್ ಜಾರಿಗೊಳಿಸಬೇಕು. ಆದರೆ, ಪಾಲಿಕೆಯ ಅಧಿಕಾರಿಗಳು ತೆರಿಗೆ ಸಂಗ್ರಹಕ್ಕೆ ಒತ್ತು ನೀಡುವ ಬದಲಿಗೆ, ಬಾಕಿ ಉಳಿಸಿಕೊಂಡವರಿಗೆ ಎರಡು ಮೂರು ಬಾರಿ ಕಾರಣ ಕೇಳಿ ನೋಟಿಸ್ ನೀಡಿರುವುದು ಕಂಡುಬಂದಿದೆ.
ಆ ಹಿನ್ನೆಲೆಯಲ್ಲಿ ಒಂದು ಬಾರಿ ನೋಟಿಸ್ ಜಾರಿಗೊಳಿಸಿದ ನಂತರವೂ ತೆರಿಗೆ ಪಾವತಿಸದಂತಹ ಆಸ್ತಿಗಳಿಗೆ ಕೂಡಲೇ ಜಪ್ತಿ ವಾರೆಂಟ್ ಜಾರಿಗೊಳಿಸುವಂತೆ ಜಂಟಿ ಆಯುಕ್ತ ವೆಂಕಟಾಚಲಪತಿ ಸೂಚಿಸಿದ್ದಾರೆ.