ಬೆಂಗಳೂರು: ಕುರಿ ಹಾಗೂ ಮೇಕೆ ಕದ್ದು ಹೊರ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದ 6 ಮಂದಿಯನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಪರಶುರಾಮ (28), ಅಮರೇಶ್(27), ರಮೇಶ್ (21), ವೆಂಕಟೇಶ್ (19), ಬಾಗಲಕೋಟೆಯ ಹುಲುಗಪ್ಪ (32) ಹಾಗೂ ಧಾರವಾಡದ ಈರಣ್ಣ (27) ಬಂಧಿತರು.
ಆರೋಪಿಗಳಿಂದ 2.43 ಲಕ್ಷ ರೂ. ನಗದು, 29 ಕುರಿ ಹಾಗೂ ಮೇಕೆಗಳು ಹಾಗು ಕೃತ್ಯಕ್ಕೆ ಬಳಸುತ್ತಿದ್ದ 1 ಬೊಲೆರೊ ವಾಹನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಬೊಲೆರೊ ವಾಹನದಲ್ಲೇ ಬೆಂಗಳೂರಿಗೆ ಬರುತ್ತಿದ್ದ ಆರೋಪಿಗಳು, ನಗರದ ಹೊರವಲಯದಲ್ಲಿ ಕುರಿ ಮತ್ತು ಮೇಕೆ ಸಾಗಾಣಿಕೆ ಮಾಡುತ್ತಿದ್ದ ಪ್ರದೇಶಗಳಲ್ಲಿ ಓಡಾಡುತ್ತಿದ್ದರು. ನಿರ್ದಿಷ್ಟ ಮನೆಯನ್ನು ಗುರುತಿಸಿ ತಡರಾತ್ರಿ ಬುಲೆರೋ ವಾಹನ ತಂದು ಕುರಿ ಹಾಗೂ ಮೇಕೆಗಳನ್ನು ಕೊಟ್ಟಿಗೆಯಿಂದ ಕಳವು ಮಾಡಿಕೊಂಡು ಪರಾರಿಯಾಗುತ್ತಿದ್ದರು.
ಇತ್ತೀಚೆಗೆ ದೊಡ್ಡಜಾಲ ಗ್ರಾಮದ ರೈತರೊಬ್ಬರ 15 ಮೇಕೆಗಳನ್ನು ಕಳವು ಮಾಡಿದ್ದರು. ಅಲ್ಲದೆ, ಬಿಲ್ಲಮಾರನಹಳ್ಳಿ, ಶೆಟ್ಟಿಗೆರೆ ಗ್ರಾಮದಲ್ಲೂ ಕುರಿ ಮತ್ತು ಮೇಕೆಗಳನ್ನು ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಸಮೀಪದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಹಾಗೂ ಬಾತ್ಮೀದಾರರ ಮಾಹಿತಿ ಮೇರೆಗೆ ಚಿಕ್ಕಬಾಣವಾರದಲ್ಲಿ 6 ಮಂದಿಯನ್ನು ಬಂಧಿಸಲಾಗಿದೆ.