ಎಚ್.ಡಿ.ಕೋಟೆ: ಜೀವನಾಂಶ ಪ್ರಕರಣದಲ್ಲಿ ವಿಚಾರಣೆಗೆ ಪದೇಪದೆ ಗೈರುಹಾಜರಾಗುತ್ತಿದ್ದ ವಾರೆಂಟ್‌ದಾರನ ಬಂಧನಕ್ಕೆ ಹೋಗಿದ್ದ ಪೊಲೀಸರು ವಾರೆಂಟ್‌ದಾರನ 2ನೇ ಪತ್ನಿ ಹಾಗೂ ಆಕೆಯ ಇಬ್ಬರು ಪುತ್ರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರಿಂದ ಹಲ್ಲೆಗೊಳಗಾಗಿ ದ್ದಾರೆ ಎನ್ನಲಾದ ತಾಲೂಕಿನ ಆಲನಹಳ್ಳಿ ಗ್ರಾಮದ ಚೌಡಮ್ಮ ಈಕೆಯ ಪುತ್ರರಾದ ಸ್ವಾಮಿನಾಯ್ಕ ಮತ್ತು ಪ್ರಕಾಶ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏನದು ಘಟನೆ: ಆಲನಹಳ್ಳಿ ಗ್ರಾಮದ ಕರಿನಾಯ್ಕ ತನ್ನ ಮೊದಲ ಪತ್ನಿ ಸಣ್ಣದೇವಮ್ಮನಿಂದ ದೂರಾಗಿ ಚೌಡಮ್ಮ ಎಂಬುವವರೊಂದಿಗೆ ಜೀವನ ನಡೆಸುತ್ತಿದ್ದರು. ಪತಿಯ ವಿರುದ್ಧ ನ್ಯಾಯಾಲಯದ ಮೊರೆ ಹೋದ ಮೊದಲ ಪತ್ನಿ ಸಣ್ಣದೇವಮ್ಮ ಜೀವನಾಂಶ ಕೊಡಿಸುವಂತೆ ನ್ಯಾಯಾಲಯದಲ್ಲಿ ದೂರು ದಾಖಲಿ ಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪದೇಪದೆ ವಿಚಾರಣೆಗೆ ಗೈರುಹಾಜರಾಗುತ್ತಿದ್ದ ಕರಿನಾಯ್ಕನನ್ನು ಬಂಧಿಸಿ ಕರೆತರುವಂತೆ ನ್ಯಾಯಾಲಯ ವಾರಂಟ್ ಜಾರಿ ಮಾಡಿ ಪೊಲೀಸರಿಗೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಕರಿನಾಯ್ಕನ ಬಂಧನಕ್ಕಾಗಿ ಪೊಲೀಸರು ಭಾನುವಾರ ತಡರಾತ್ರಿ ಆಲನಹಳ್ಳಿ ಕರಿನಾಯ್ಕನ ಮನೆಯ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದರು.
ಈ ಸಂದರ್ಭದಲ್ಲಿ ಚೌಡಮ್ಮ ಮತ್ತು ಮಕ್ಕಳಾದ ಸ್ವಾಮಿನಾಯ್ಕ ಹಾಗೂ ಪ್ರಕಾಶ ಮೂವರ ಮೇಲೆ ಪೊಲೀಸರು ಲಾಠಿ ಹಾಗೂ ಬೂಟಿನಿಂದ ಹೆಂಗಸು ಅನ್ನುವ ಅನುಕಂಪ ಇಲ್ಲದೆ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳುಗಳು ಆರೋಪಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂದು ಮೂರು ಮಂದಿಗೂ ಲಾಠಿಯಿಂದ ಹಲ್ಲೆ ನಡೆಸಿರುವ ಗಾಯಗಳ ಗುರುತುಗಳಿವೆ. ಪೊಲೀಸರ ಹಲ್ಲೆಯಿಂದ ಗಾಯಗೊಂಡ ಮೂವರು ಘಟನೆ ಬಳಿಕ ಆಂಬ್ಯುಲೆನ್ಸ್‌ನಲ್ಲಿ ತಾಲೂಕು ಕೇಂದ್ರ ಸ್ಥಾನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಜಿ ಶಾಸಕರಿಂದ ಧರಣಿ: ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಚಿಕ್ಕಣ್ಣ ಮತ್ತವರ ಬೆಂಬಲಿಗರಾದ ಚಾಕಹಳ್ಳಿ ಕೃಷ್ಣ, ಪ್ರಕಾಶ, ಸಿ.ಪಿ.ಎಂ. ಶಿವಣ್ಣ ಸೇರಿದಂತೆ ನೂರಾರು ಕಾರ್ಯಕರ್ತರು ಗಾಯಾಳುಗಳಿಂದ ಮಾಹಿತಿ ಪಡೆದು ಕೊಂಡರು. ಬಳಿಕ ಮಹಿಳೆ ಮೇಲೆ ಹಲ್ಲೆ ನಡೆಸಿರುವ ಪೊಲೀಸರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕ ಆಸ್ಪತ್ರೆ ಎದುರಿನಲ್ಲಿ ರಸ್ತೆತಡೆ ನಡೆಸಿದರು.
ಪರಿಣಾಮವಾಗಿ ಮುಕ್ಕಾಲು ತಾಸಿಗೂ ಅಧಿಕ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಯಿತು. ಬಳಿಕ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಎಚ್.ಡಿ.ಕೋಟೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅಶೋಕ್ ಘಟನೆ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದರು. ಈ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹಿರಿಯ ಅಧಿಕಾರಿಗಳು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.