Advertisement

ಸಭೆ, ಸಮಾರಂಭಕ್ಕೆ ಹೋಗುವ ಶಿಕ್ಷಕರಿಗೆ ಇಲಾಖೆಯಿಂದ ಎಚ್ಚರಿಕೆ

12:25 AM Feb 08, 2019 | |

ಬೆಂಗಳೂರು: ಶಾಲಾ ಶಿಕ್ಷಕರು ತರಗತಿ ಬಿಟ್ಟು ವಿವಿಧ ಸಭೆ, ಸಮಾರಂಭಗಳಲ್ಲಿ ಭಾಗವಹಿ ಸಲು ಆಸಕ್ತಿ ತೋರುತ್ತಿರುವುದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೊಡಕುಂಟಾಗುತ್ತಿದೆ. ಇದರಿಂದ ಶೈಕ್ಷಣಿಕ ಚಟುವಟಿಕೆಗೆ ಹಿನ್ನಡೆಯಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರಿಗೆ ಸೂಚಿಸಿದೆ.

Advertisement

ವಿದ್ಯಾರ್ಥಿಗಳ ಶೈಕ್ಷಣಿಕ ಸರ್ವತೋಮುಖ ಪ್ರಗತಿಗೆ ಕಾರಣವಾಗಬೇಕಾದ ಶಿಕ್ಷಕರು ತಮ್ಮ ಜವಾಬ್ದಾರಿ ಮರೆತು ಶಾಲಾ ಅವಧಿಗಳಲ್ಲಿ ವಿವಿಧ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿ, ಬೋಧನಾ ಅವಧಿಯನ್ನು ಕಳೆಯುತ್ತಿರುವ ಬಗ್ಗೆ ದೂರು ಬಂದಿದೆ. ಇದರಿಂದ ಶೈಕ್ಷಣಿಕ ಪ್ರಗತಿ ಕುಸಿಯುತ್ತಿದ್ದು, ಇದು ಆರೋಗ್ಯಕರ ಬೆಳವಣಿಗೆಯಲ್ಲ ಎಂದು ಎಚ್ಚರಿಕೆ ನೀಡಿದೆ.

ಸಭೆ, ಸಮಾರಂಭಗಳಲ್ಲಿ ಭಾಗವಹಿಸು ತ್ತಿರುವುದರಿಂದ ಬೋಧನಾ ಅವಧಿ ಕೊರತೆಯಿಂದ, ತಮ್ಮ ವಿಷಯಕ್ಕೆ ಸಂಬಂಧಿಸಿದ ಪಠ್ಯಕ್ರಮ ಮುಗಿಸುವ ಧಾವಂತದಲ್ಲಿ ಬೋಧನೆ ಮಾಡುತ್ತಿದ್ದಾರೆ. ಇದು ಮಕ್ಕಳಿಗೆ ಮನ ಮುಟ್ಟುವಂತೆ ಹೇಳಿಕೊಡುವಲ್ಲಿ ವಿಫ‌ಲರಾಗುತ್ತಿರುವುದನ್ನು ಸೂಚಿಸುತ್ತದೆ ಎಂದು ಇಲಾಖೆ ಶಿಕ್ಷಕರಿಗೆ ನಿರ್ದೇಶಿಸಿದೆ.

ಶಿಕ್ಷಣೇತರ ಸಮಾರಂಭಕ್ಕೆ ಎರಡೇ ರಜೆ

ಬೆಂಗಳೂರು: ಶಾಲಾ ಶಿಕ್ಷಕರು ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳು ವರ್ಷದಲ್ಲಿ ಎರಡು ಬಾರಿ ಮಾತ್ರ ಶಿಕ್ಷಣೇತರ ಸಭೆ, ಸಮಾರಂಭಗಳಲ್ಲಿ ಭಾಗವಹಿಸಲು ಅನುಮತಿ ನೀಡಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ವಿವಿಧ ವೃಂದದ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಶೈಕ್ಷಣಿಕ ವರ್ಷದ ಶಾಲಾ ದಿನಗಳಲ್ಲಿ ಶಿಕ್ಷಣೇತರ ವಿವಿಧ ಸಭೆ, ಸಮಾರಂಭ, ಕಾರ್ಯಾಗಾರ ಮತ್ತು ವಿಚಾರಗೋಷ್ಠಿಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಹೆಚ್ಚಿನ ಸಂಖ್ಯೆಯ ಶಿಕ್ಷಕರು ಭಾಗವಹಿಸುವ ಉದ್ದೇಶದಿಂದ ಅನ್ಯಕಾರ್ಯದ ನಿಮಿತ್ತ ರಜೆ ನೀಡುವಂತೆ ಸಂಘದ ಪದಾಧಿಕಾರಿಗಳು ಇಲಾಖೆಗೆ ಮನವಿ ಸಲ್ಲಿಸುತ್ತಿರುತ್ತಾರೆ. ಶಿಕ್ಷಕರ ಸಂಘದ ಪದಾಧಿಕಾರಿಗಳು ಮೂಲತಃ ಶಿಕ್ಷಕ ವೃತ್ತಿಗೆ ಗೌರವ ಸೂಚಿಸುವುದು ಅವರ ಕರ್ತವ್ಯವಾಗಿರುತ್ತದೆ. ಇಷ್ಟಾದರೂ ಅನ್ಯಕಾರ್ಯದ ನಿಮಿತ್ತ ವರ್ಷಕ್ಕೆ ಎರಡಕ್ಕಿಂತ ಹೆಚ್ಚಿನ ರಜೆಗೆ ನಿರ್ದೇಶನ ನೀಡುವುದು ಸರಿಯಲ್ಲ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ಆದರ್ಶ ವಿದ್ಯಾಲಯಕ್ಕೆ ಅರ್ಜಿ: 15ರವರೆಗೂ ಅವಕಾಶ

ಬೆಂಗಳೂರು: ರಾಜ್ಯದ ಆದರ್ಶ ವಿದ್ಯಾಲಯಕ್ಕೆ 2019-20ನೇ ಸಾಲಿಗೆ 6ನೇ ತರಗತಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಫೆ.15ರವರೆಗೂ ಅವಕಾಶ ಕಲ್ಪಿಸಲಾಗಿದೆ. ಆಯಾ ತಾಲೂಕಿನ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಅದೇ ತಾಲೂಕಿನಲ್ಲಿ ಅರ್ಜಿ ಸಲ್ಲಿಸಬಹುದು. ಆಯಾ ತಾಲೂಕಿನ ವಿದ್ಯಾರ್ಥಿಗಳು ಬೇರೆ ತಾಲೂಕು, ಜಿಲ್ಲೆ ಅಥವಾ ರಾಜ್ಯದಲ್ಲಿ 5ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದರೂ ಮೂಲ ತಾಲೂಕಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಮಾ.7ರಿಂದ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. www.schooleducation.kar.nic.in ಅಥವಾ www.vidyavahini.karnataka.gov.in ವೆಬ್‌ಸೈಟ್‌ನಲ್ಲಿ ಮಾಹಿತಿ ಪಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next