ಮುದ್ದೇಬಿಹಾಳ: ಹೋಳಿ ಹಬ್ಬದ ಹಿನ್ನೆಲೆ ಶಾಂತಿ ಕದಡದಂತೆ ಎಚ್ಚರಿಕೆ ನೀಡಲು ನಡೆಸಿದ ಎಂಒಬಿ (ಪ್ರಾಪರ್ಟಿ ಅಫೆಂಡರ್ಸ್), ರೌಡಿಶೀಟರ್ ಪರೇಡ್ ನಂತರ ಎಲ್ಲರನ್ನೂ ಸ್ವತ್ಛತೆಗೆ ಹಚ್ಚುವ ಮೂಲಕ ಪೊಲೀಸ್ ಅಧಿ ಕಾರಿಗಳು ಸ್ವತ್ಛತೆಯ ಮಹತ್ವ, ಶ್ರಮದಾನದ ಅರಿವು ಮೂಡಿಸಿದ ಅಪರೂಪದ ಘಟನೆ ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಶನಿವಾರ ನಡೆಯಿತು.
ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ 55 ಎಂಒಬಿ, ರೌಡಿಶೀಟರ್‌ಗಳನ್ನು ಹೋಳಿ ಹಬ್ಬದ ಹಿನ್ನೆಲೆ ಇಲ್ಲಿನ ಠಾಣೆಗೆ ಕರೆಸಲಾಗಿತ್ತು. ಸಿಪಿಐ ಆನಂದ ವಾಘೊ¾àಡೆ, ಪಿಎಸೈ ಎಂ.ಬಿ. ಬಿರಾದಾರ ಅವರು ಎಂಒಬಿ, ರೌಡಿಶೀಟರ್‌ಗಳ ಪರೇಡ್ ನಡೆಸಿ ಅವರಿಗೆ ಅಪರಾಧ ಚಟುವಟಿಕೆಗಳಿಂದ ದೂರ ಇರುವಂತೆ ತಿಳಿಹೇಳಿ ಅಪರಾಧ ಚಟುವಟಿಕೆಯಿಂದ ಸಮಾಜದಲ್ಲಿ ಉಂಟಾಗುವ ಅಶಾಂತಿ, ಕೌಟುಂಬಿಕ ಸಮಸ್ಯೆ, ಸಮಾಜದಲ್ಲಿ ಅಗೌರವ ಮುಂತಾದವುಗಳ ಕುರಿತು ಬುದ್ಧಿವಾದ ಹೇಳಿ ಅವರು ಶಾಂತಿಗೆ ಭಂಗ ತರುವ ಕೆಲಸ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿಸಿಕೊಂಡಿದ್ದರು.
ಪರೇಡ್ ನಂತರ ಅವರನ್ನು ಹಾಗೆಯೇ ಕಳಿಸಿದರೆ ಪ್ರಯೋಜನವಿಲ್ಲ ಎಂದರಿತ ಪಿಎಸೈ ಬಿರಾದಾರರವರು ಎಲ್ಲರನ್ನೂ ಪೊಲೀಸ್ ಠಾಣೆ ಆವರಣ ಸ್ವತ್ಛಗೊಳಿಸಲು ಅಣಿಗೊಳಿಸಿದರು. ಎಲ್ಲರೂ ಠಾಣೆಯ ಸುತ್ತಲೂ ಇದ್ದ ಕಸಕಡ್ಡಿ ಸಂಗ್ರಹಿಸಿ ಒಂದೆಡೆ ಹಾಕಿ ಸ್ವತ್ಛಗೊಳಿಸುವ ಮೂಲಕ ಸ್ವತ್ಛತೆಯ ಮಹತ್ವ, ಶ್ರಮದಾನದ ಪರಿಣಾಮವನ್ನು ಪ್ರಾಯೋಗಿಕವಾಗಿ ಅರಿತುಕೊಂಡರು. ಈ ವೇಳೆ ಪೊಲೀಸ್ ಠಾಣೆಯ ಎಲ್ಲ ಸಿಬ್ಬಂದಿ ಜೊತೆಗಿದ್ದರು.
ಎಂಒಬಿ, ರೌಡಿಶೀಟರ್‌ಗಳಿಗೆ ಎಚ್ಚರಿಕೆ: ಪರೇಡ್ ಸಂದರ್ಭ ಪಿಎಸೈ ಎಂ.ಬಿ. ಬಿರಾದಾರ ಮಾತನಾಡಿ, ಮುಂಬರುವ ಹೋಳಿ, ಯುಗಾದಿ, ರಮಜಾನ್ ಸೇರಿ ಪ್ರಮುಖ ಹಬ್ಬಗಳ ಸಂದರ್ಭ ಶಾಂತಿ ಕದಡುವ ಕೆಲಸದಲ್ಲಿ ಭಾಗಿಯಾಗಬಾರದು. ನಿಮ್ಮ ಹೆಂಡತಿ, ಮಕ್ಕಳು, ತಂದೆ, ತಾಯಿ, ಕುಟುಂಬದ ಜೊತೆ ನೆಮ್ಮದಿಯ ಜೀವನ ನಡೆಸಬೇಕು. ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವುದು, ಅದರಲ್ಲಿ ಪಾಲ್ಗೊಳ್ಳುತ್ತಿರುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ನಿಮ್ಮನ್ನು ಹಿಡಿದು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಹಿತಕರ ಘಟನೆಗಳು ನಿಮ್ಮ ವ್ಯಾಪ್ತಿಯಲ್ಲಿ ನಡೆದರೆ ಮೊದಲು ನಿಮ್ಮನ್ನೇ ಸಂಶಯದಿಂದ ನೋಡುವಂತಾಗುತ್ತದೆ. ನಿಮಗೆ ತಿಳಿದೋ, ತಿಳಿಯದೆಯೋ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿ ಎಂಒಬಿ, ರೌಡಿಶೀಟರ್‌ಗಳಾಗಿದ್ದೀರಿ. ಹಿಂದಿನದನ್ನು ಮರೆತು ಮುಂದಿನ ನೆಮ್ಮದಿಯ ಜೀವನದ ದಾರಿ ಕಂಡುಕೊಳ್ಳಿ. ನಿಮ್ಮ ಮಕ್ಕಳೂ ನಿಮ್ಮ ದಾರಿ ತುಳಿಯದಂತೆ ನೋಡಿಕೊಳ್ಳಿ. ಮಾದಕದ್ರವ್ಯ ಸೇವನೆಯಿಂದ ದೂರ ಇರಿ. ಶಿಸ್ತಿನಿಂದ ಜೀವಿಸಿ ಎಂದು ಸಲಹೆ ರೂಪದ ಎಚ್ಚರಿಕೆ ನೀಡಿದರು.
ಸಿಪಿಐ ಆನಂದ ವಾಘೊ¾àಡೆ ಮಾತನಾಡಿ, ಈಗಾಗಲೇ ಅಪರಾಧ ಚಟುವಟಿಕೆಯಲ್ಲಿ ಪಾಲ್ಗೊಂಡ ಆರೋಪ ತಲೆ ಮೇಲೆ ಹೊತ್ತು ತಿರುಗುತ್ತಿರುವ ನೀವು ಮತ್ತೇ ಅಂಥದ್ದೇ ಚಟುವಟಿಕೆಗಳಲ್ಲಿ ಪಾಲ್ಗೊಂಡದ್ದು ಕಂಡು ಬಂದಲ್ಲಿ ನಿಮ್ಮ ಭವಿಷ್ಯವೇ ಸರ್ವನಾಶವಾಗುತ್ತದೆ. ನಿಮ್ಮನ್ನು ನಂಬಿದವರು ಬೀದಿಗೆ ಬೀಳುತ್ತಾರೆ. ಒಂದು ವೇಳೆ ಜೈಲಿನಿಂದ ಹೊರಗೆ ಬಂದರೂ ಸಮಾಜದಲ್ಲಿ ನಿಮಗೆ ಗೌರವ ಇರುವುದಿಲ್ಲ. ನಿಮ್ಮನ್ನು ಸಂಶಯದಿಂದಲೇ ಎಲ್ಲರೂ ನೋಡುವಂತಾಗುತ್ತದೆ. ದಿನನಿತ್ಯ ಪೊಲೀಸ್ ಠಾಣೆ ಅಲೆಯಬೇಕಾಗುತ್ತದೆ. ಇದೆಲ್ಲ ಗೊಜಲು ಬೇಡ ಎಂದರೆ ಉತ್ತಮ ಪ್ರಜೆಗಳಾಗಿ ಜೀವಿಸಲು ಪ್ರಯತ್ನಿಸಿ. ಪೊಲೀಸರು ಕರೆದಾಗ ಠಾಣೆಗೆ ಬಂದು ವರದಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.