ಜಮ್ಮು: ಸೂಕ್ತ ಭದ್ರತೆ ಮತ್ತು ಕಾಶ್ಮೀರದ ಹೊರವಲಯಕ್ಕೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ನೂರಾರು ಕಾಶ್ಮೀರಿ ಪಂಡಿತರಿಗೆ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು, ಯಾರು ಕೆಲಸಕ್ಕೆ ಹೋಗದೆ ಮನೆಯಲ್ಲೇ ಕುಳಿತುಕೊಳ್ಳುತ್ತಾರೋ ಅವರಿಗೆ ಸಂಬಳ ಸಿಗುವುದಿಲ್ಲ ಎಂದು ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:‘ಚಿಕನ್ ಟಿಕ್ಕಾ ಮಸಾಲಾ’ ಕಂಡುಹಿಡಿದ ಖ್ಯಾತ ಬಾಣಸಿಗ ಅಲಿ ಅಹಮದ್ ಅಸ್ಲಾಮ್ ಇನ್ನಿಲ್ಲ
“ಕಣಿವೆ ಪ್ರದೇಶದಲ್ಲಿ ವಾಸಿಸುತ್ತಿರುವ ಕಾಶ್ಮೀರಿ ಪಂಡಿತರು ಸೇರಿದಂತೆ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳ ಉದ್ಯೋಗಿಗಳ ಕುರಿತ ಸುರಕ್ಷತೆಗೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಆಡಳಿತ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು” ಗವರ್ನರ್ ಸಿನ್ಹಾ ಈ ಸಂದರ್ಭದಲ್ಲಿ ಭರವಸೆ ನೀಡಿರುವುದಾಗಿ ವರದಿ ತಿಳಿಸಿದೆ.
“ಇಬ್ಬರು ಸಹೋದ್ಯೋಗಿಗಳಾದ ರಾಹುಲ್ ಭಟ್ ಮತ್ತು ರಜಿನಿ ಭಲ್ಲಾ ಅವರನ್ನು ಹತ್ಯೆಗೈದ ಘಟನೆ ನಂತರ ಪಂಡಿತ್ ಸಮುದಾಯದ ಉದ್ಯೋಗಿಗಳು, ಮೀಸಲು ವರ್ಗದ ನೌಕರರು ಕಣಿವೆ ಪ್ರದೇಶದಿಂದ ಜಮ್ಮುವಿಗೆ ವಲಸೆ ಹೋಗಿದ್ದು, ಕಣಿವೆ ಪ್ರದೇಶದಲ್ಲಿ ಕಾಶ್ಮೀರಿ ಪಂಡಿತ್ ಸಮುದಾಯಕ್ಕೆ ಸೂಕ್ತ ಭದ್ರತೆ ಕೊಡಬೇಕೆಂದು ಆಗ್ರಹಿಸಿ ಕಳೆದ ಹಲವಾರು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ.
ಕಾಶ್ಮೀರಿ ಪಂಡಿತ್ ಸಮುದಾಯದ ನೌಕರರು ಮುಷ್ಕರ ನಡೆಸುತ್ತಿದ್ದು, ನಾನು ಅವರೆಲ್ಲರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅವರ ಎಲ್ಲಾ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ನಡೆಸಿದ್ದೇನೆ. ಬಹುತೇಕರನ್ನು ಜಿಲ್ಲಾ ಕೇಂದ್ರಕ್ಕೆ, ಜಿಲ್ಲಾಧಿಕಾರಿಗಳ ಕಚೇರಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.