Advertisement

ಸಹ್ಯಾದ್ರಿಯ ಮಡಿಲಿನ ಬೆಚ್ಚಗಿನ ಕುರುಹು

02:48 PM Jul 12, 2018 | Team Udayavani |

ಸ್ನೇಹಿತರ ಗುಂಪು ಕಟ್ಟಿಕೊಂಡು ಪ್ರವಾಸ ಹೊರಡುವ ಯೋಜನೆಯೊಂದು ಸಿದ್ಧವಾಯಿತು. ಆದರೆ ಎಲ್ಲಿಗೆ, ಹೇಗೆ, ಯಾವಾಗ ಎಂಬ ಪ್ರಶ್ನೆಗಳು ಆರಂಭವಾದಾಗ ಗೋವಾದಿಂದ ಚರ್ಚೆ ಶುರುವಾಗಿ ಕೊನೆಗೆ ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಕರೆಯಲ್ಪಡುವ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ನಿಂತಿತು.

Advertisement

ಮುಂಜಾನೆ ವೇಳೆ ಹಕ್ಕಿಗಳ ಚಿಲಿಪಿಲಿ ಕಲರವ ಕೇಳಿ ಬರುತ್ತಿರುವಾಗಲೇ ಮೊಬೈಲ್‌ ಅಲರಾಂ ಹೊಡೆಯಲು ಪ್ರಾರಂಭಿಸಿತು. ಎಲ್ಲರನ್ನೂ ಎಬ್ಬಿಸಿ, ನಿತ್ಯ ಕರ್ಮಾದಿಗಳನ್ನು ಮುಗಿಸಿ ಎಲ್ಲರೂ ಬಸ್‌ ನಿಲ್ದಾಣದಲ್ಲಿ ಒಟ್ಟು ಸೇರಿ ಮಂಗಳೂರಿನಿಂದ 119 ಕಿ.ಮೀ. ದೂರದಲ್ಲಿರುವ ಆಗುಂಬೆಯತ್ತ ಬಸ್‌ ಮೂಲಕ ನಮ್ಮ ಪ್ರಯಾಣ ಸುಮಾರು 7 ಗಂಟೆಗೆ ಪ್ರಾರಂಭವಾಯಿತು. 

ಮೂರು ಗಂಟೆಯ ಸುದೀರ್ಘ‌ ಪ್ರಯಾಣದ ಬಳಿಕ ನಾವೆಲ್ಲರೂ ಆಗುಂಬೆ ತಲುಪಿದೆವು. ದಟ್ಟವಾದ ಮಂಜು ಮುಸುಕಿದ ವಾತಾವರಣ ನಮ್ಮನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸುತ್ತಿತ್ತು. ಮಂಜು ಹೆಚ್ಚಾಗಿದ್ದರೆ ಚಳಿಯೂ ಹೆಚ್ಚಾಗತೊಡಗಿತು. ಈ ನಡುವೆ ಬಸ್‌ ನಿಲ್ದಾಣದ
ಹತ್ತಿರವಿದ್ದ ಹೊಟೇಲ್‌ ವೊಂದಕ್ಕೆ ತೆರಳಿ ತಿಂಡಿ, ಕಾಫಿ  ಮುಗಿಸಿದೆವು.

ಬಳಿಕ ದಟ್ಟ ಮಂಜು ಆವರಿಸಿದ ಆಗುಂಬೆಯನ್ನು ಹತ್ತತೊಡಗಿದೆವು. ಸಹ್ಯಾದ್ರಿ ಶ್ರೇಣಿಗಳ ಮೇಲಿನಿಂದ ಕೆಳಕ್ಕೆ ಧುಮ್ಮುಕ್ಕುವ ಚಿಕ್ಕಚಿಕ್ಕ ಜಲಪಾತಗಳು ಕಣ್ಮನಸ್ಸಿಗೆ ಮುದ ನೀಡಿದವು. ಪ್ರಕೃತಿಯ ಸೌಂದರ್ಯದ ನಡುವೆ ಬೀಗುತ್ತಿರುವ ಜೈನ ಮಂದಿರಗಳು, ಕೆಲವು ಜಲಪಾತಗಳು ನಮ್ಮನ್ನು ಕೈ ಬೀಸಿ ಕರೆದವು. ಈ ನಡುವೆ ಹೊಟ್ಟೆಯ ಹಸಿವನ್ನು ತಣಿಸಿದೆವು. ಎಲ್ಲೆಡೆ ಸುತ್ತಾಡಿ ಬರುವಷ್ಟರಲ್ಲಿ ಸೂರ್ಯಾಸ್ತಮಾನದ ಸಮಯವಾಗುತ್ತಿತ್ತು. ಕಟ್ಟಿಕೊಂಡು ಬಂದಿದ್ದ ತಿಂಡಿಪೊಟ್ಟಣಗಳೆಲ್ಲ ಖಾಲಿಯಾಗಿದ್ದವು. ದಾರಿಯಲ್ಲಿ ಮುಂದೆಮುಂದೆ ಸಾಗುತ್ತಿದ್ದಾಗ ದೈತ್ಯ ವೃಕ್ಷಗಳು ನಮ್ಮನ್ನು ತಲೆಯೆತ್ತಿ ಇಣುಕಿ ಮತ್ತೊಮ್ಮೆ ಬನ್ನಿ ಎಂದು ಹೇಳಿದಂತೆ ಭಾಸವಾಗುತ್ತಿತ್ತು.

ಸೂರ್ಯಾಸ್ತಮಾನವನ್ನು ಸವಿಯಲು ಬೆಟ್ಟದ ತುದಿಗೆ ನಾವೆಲ್ಲರೂ ತೆರಳುತ್ತಿದ್ದಂತೆಯೇ ಸೂರ್ಯನು ನಮಗೆ ಬೀಳ್ಕೊಡಲು ಸಿದ್ಧನಾಗಿ ನಿಂತಿದ್ದ. ಮಳೆಗಾಲವಾದ್ದರಿಂದ ಪ್ರಕೃತಿಯ ಸೊಬಗನ್ನು ಸವಿಯಲು ಬಂದಿದ್ದ ಪ್ರವಾಸಿಗರ ದಂಡೇ ಇಲ್ಲಿ ನೆರೆದಿತ್ತು. ಸೂರ್ಯಾಸ್ತಮಾನದ ಸೊಬಗನ್ನು ಕಣ್ತುಂಬಿಕೊಂಡು ಒಲ್ಲದ ಮನಸ್ಸಿನಿಂದ ಆಗುಂಬೆಯಿಂದ ಹಿಂತಿರುಗಿ ಮಂಗಳೂರಿನ ಹಾದಿ ಹಿಡಿದೆವು.

Advertisement

ರೂಟ್‌ ಮ್ಯಾಪ್‌
· ಮಂಗಳೂರಿನಿಂದ ಉಡುಪಿ ಮೂಲಕ ಆಗುಂಬೆಗೆ ಸುಮಾರು 119 ಕಿ.ಮೀ. ದೂರ
· ಸಾಕಷ್ಟು ಬಸ್‌ ಸೌಲಭ್ಯಗಳಿವೆ. ಖಾಸಗಿ ವಾಹನ ಮಾಡಿಕೊಂಡು ಹೋದರೆ ಹೆಚ್ಚಿನ ಸ್ಥಳಗಳನ್ನು ಸುತ್ತಾಡಬಹುದು.
· ಸೂರ್ಯಾಸ್ತಮಾನ, ಎತ್ತರದಿಂದ ಧುಮ್ಮಿಕ್ಕುವ ಜಲಪಾತಗಳು ಇಲ್ಲಿನ ಪ್ರಮುಖ ಆಕರ್ಷಣೆ 
· ಗುಡ್ಡಗಾಡು ಪ್ರದೇಶವಾದ್ದರಿಂದ ಹತ್ತಿರದಲ್ಲಿ ಊಟ, ವಸತಿ ವ್ಯವಸ್ಥೆಯಿಲ್ಲ.

 ಸುಶಾಂತ್‌

Advertisement

Udayavani is now on Telegram. Click here to join our channel and stay updated with the latest news.

Next