Advertisement
ಸಂಕ್ರಾಂತಿಯ ಸಮಯದಲ್ಲಿ ಸೂರ್ಯ ಉತ್ತರದತ್ತ ಚಾಲನೆಯಲ್ಲಿದ್ದರೂ ಕಿರಣಗಳು ನಮ್ಮತ್ತ ಕೆಳಕೋನದಲ್ಲಿ, ದಕ್ಷಿಣದಿಕ್ಕಿನಿಂದಲೇ ಬೀಳುತ್ತವೆ, ಹಾಗಾಗಿ, ನಮಗೆ ಚಳಿಯ ಅನುಭವ ಹೋಗಿರುವುದಿಲ್ಲ. ಮದ್ಯಾಹ್ನ ಹನ್ನೆರಡು ಗಂಟೆಗೂ ಸೂರ್ಯ ತಲೆಯ ಮೇಲೆ ನೇರವಾಗಿ ಇರದೆ, ನಮ್ಮ ನೆತ್ತಿಯನ್ನು ಸುಮಾರು 55 ಡಿಗ್ರಿ ಕೋನದಲ್ಲಿ ತಾಗುತ್ತಾನೆ. ಬೇಸಿಗೆಯಲ್ಲಿ ಬೆಳಗ್ಗೆ ಒಂಬತ್ತೂವರೆ ಗಂಟೆಗೆ ಇರುವಷ್ಟು ತೀಕ್ಷ್ಣವಾಗಿ ಮಾತ್ರ ಸೂರ್ಯನ ಕಿರಣಗಳು ಚಳಿಗಾಲದಲ್ಲಿ ಮಧ್ಯಾಹ್ನವೆಲ್ಲ ಇರುತ್ತದೆ.
Related Articles
Advertisement
ದಕ್ಷಿಣ ದಿಕ್ಕಿನಲ್ಲಿ ಸೂರ್ಯ: ಚಳಿಗಾಲದಲ್ಲಿ ಸೂರ್ಯ ಕಿರಣಗಳು ದಕ್ಷಿಣದಿಕ್ಕಿನಿಂದ ಕೆಳಕೋನದಲ್ಲಿ ಅಂದರೆ, ಸುಮಾರು 55 ಡಿಗ್ರಿ ಕೋನದಲ್ಲಿ ಬೀಳುವುದರಿಂದ, ನಾವು ಮನೆಯನ್ನು ವಿನ್ಯಾಸ ಮಾಡುವಾಗ, ಯಾವ ಕೋಣೆಗೆ ಬಿಸಿಲು ಬರಬೇಕು ಎಂದಿರುತ್ತದೆಯೋ, ಅದರ ಮುಂದೆ ಕಿರಣಗಳಿಗೆ ಅಡೆತಡೆ ಇರದಂತೆ ನೋಡಿಕೊಳ್ಳಬೇಕು. ಹಾಗೆಯೇ ನಮಗೆ ಬೆಳಗಿನ ಸೂರ್ಯ ಕಿರಣಗಳು ಬೇಕೋ ಇಲ್ಲ ಸಂಜೆಯದ್ದು ಬೇಕೋ ಎಂದು ಮೊದಲು ನಿರ್ಧರಿಸಬೇಕು. ಬೆಳಗಿನದ್ದಾದರೆ, ಹಿರಿಯರಿಗೆ, ಸಣ್ಣಕಂದಮ್ಮಗಳಿಗೆ ಮೈಕಾಯಿಸಲು ಅನುಕೂಲಕರ. ಸಂಜೆಯ ಸೂರ್ಯ ಕೋಣೆ ಹೊಕ್ಕರೆ, ನಮಗೆ ರಾತ್ರಿಯಿಡೀ ಬೆಚ್ಚಗಿರುವಷ್ಟು ಶಾಖವನ್ನು ಗೋಡೆಗಳು ಹೀರಿಕೊಳ್ಳುತ್ತವೆ. ಇಡೀ ದಿನ, ಅದರಲ್ಲೂ ಮಧ್ಯಾಹ್ನದ ಹೊತ್ತು ಬಿಸಿಲು ಬೀಳಬೇಕೆಂದರೆ, ಕೋಣೆ ದಕ್ಷಿಣ ದಿಕ್ಕಿನಲ್ಲಿರುವುದು ಅನಿವಾರ್ಯ.
ಸ್ಕೈಲೈಟ್- ಗವಾಕ್ಷಿಗಳ ಮೂಲಕ ಸೂರ್ಯ ಕಿರಣ: ಬೇಸಿಗೆಯಲ್ಲಿ ತಣ್ಣಗಿರಿಸಲು ವಿನ್ಯಾಸ ಮಾಡುವ ಗವಾಕ್ಷಿಗಳು, ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗೂ ಇಡಬಲ್ಲವು! ಗಾಳಿ ಹೊರಹೋಗುವ ವೆಂಟ್ಸ್- ಕಿಂಡಿಗಳನ್ನು ಮುಚ್ಚಿತೆಗೆಯುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಸೆಕೆ ಎಂದೆನಿಸಿದಾಗ ಈ ಕಿಂಡಿಯನ್ನು ತೆರೆದು, ಚಳಿ ಆದಾಗ ಮುಚ್ಚಿಡಬಹುದು. ಸಾಮಾನ್ಯವಾಗಿ ಇದು ಒಂದು ಸಣ್ಣ ಕಿಟಕಿಬಾಗಿಲು ಅಥವಾ ಆರು ಅಂಗುಲದ ಪೈಪ್‌ಗ್ಳಾಗಿರುತ್ತವೆ, ಗವಾಕ್ಷಿಯ ಮಿಕ್ಕ ಕಡೆ ಗಾಜನ್ನು ಅಳವಡಿಸಬೇಕು. ಈ ಗಾಜಿನ ಮೂಲಕ ನಮಗೆ ಸೂರ್ಯ ಕಿರಣಗಳು ಮನೆಯನ್ನು ನೇರವಾಗಿ ಪ್ರವೇಶಿಸಲು ಅನುವಾಗುತ್ತದೆ.
ಈ ಮಾದರಿಯ ವಿನ್ಯಾಸ ಮಲಗುವ ಕೋಣೆಗಳಿಗೆ ಅಷ್ಟೊಂದು ಸೂಕ್ತ ಅಲ್ಲದಿದ್ದರೂ, ಲಿವಿಂಗ್- ಡೈನಿಂಗ್ ಕೋಣೆಗಳಲ್ಲಿ ಸುಲಭವಾಗಿ ಅಳವಡಿಸಬಹುದು. ಮಾರುಕಟ್ಟೆಯಲ್ಲಿ ಗಟ್ಟಿಮುಟ್ಟಾದ ಗಾಜುಗಳು ಲಭ್ಯ. ಕೆಲವೊಂದಕ್ಕೆ ಸಣ್ಣ ತಂತಿಗಳ ಮೆಶ್ ಅನ್ನೂ ಅಳವಡಿಸಿರುತ್ತಾರೆ ಹಾಗೂ ಇವು ಸುಲಭದಲ್ಲಿ ಮುರಿಯುವುದೂ ಇಲ್ಲ. ಹಾಗಾಗಿ ಇವುಗಳನ್ನು ಸೂರಿನಲ್ಲಿ, ಧಾರಾಳವಾಗಿ ಬಳಸಬಹುದು. ಸೂರು ಎಂದಮೇಲೆ ಅದು ಅತಿ ಹೆಚ್ಚು ಗಾಳಿ, ಮಳೆ ಬಿಸಿಲಿಗೆ ತೆರೆದುಕೊಂಡಿರುತ್ತದೆ. ಆದುದರಿಂದ, ನುರಿತ ಆರ್ಕಿಟೆಕ್ಟ್ ಇಂಜಿನಿಯರ್‌ಗಳಿಂದ ಗವಾಕ್ಷಿ- ವೆಂಟ್‌ಗಳನ್ನು ವಿನ್ಯಾಸ ಮಾಡಿಸಿದರೆ ಉತ್ತಮ.
ಅಡೆತಡೆ ಇಲ್ಲದಂತೆ ನೋಡಿಕೊಳ್ಳಿ: ಬೇಸಿಗೆಯಲ್ಲಿ ತಂಪಾಗಿಡುವ ಮರಗಿಡಗಳು ಚಳಿಗಾಲದಲ್ಲಿ ನಮ್ಮ ಮನೆಯ ಮೇಲೆ ಸೂರ್ಯ ಕಿರಣಗಳು ಬೀಳದಂತೆಯೂ ರಕ್ಷಣೆ ನೀಡುತ್ತವೆ. ಆದುದರಿಂದ ನಾವು ಮನೆಯನ್ನು ವಿನ್ಯಾಸ ಮಾಡುವಾಗ ನಿವೇಶನದಲ್ಲಿ ಹಾಗೂ ಅಕ್ಕಪಕ್ಕ ಇರುವ ಮರಗಳನ್ನು ಗಮನಿಸಿ ಮುಂದುವರಿಯಬೇಕು. ಹಾಗೆಯೇ ನಾವು ಹೊಸದಾಗಿ ಮರಗಿಡಗಳನ್ನು ನೆಡುವಂತಿದ್ದರೆ, ಅವು ಬೇಸಿಗೆಯಲ್ಲಿ ನೆರಳನ್ನು ನೀಡುವಂತಿದ್ದು, ಚಳಿಗಾಲದಲ್ಲಿ ನೆರಳು ನೀಡದ ಹಾಗೆ ನೋಡಿಕೊಳ್ಳಬೇಕು.
ಸೂರ್ಯನತ್ತ ಮುಖ ಮಾಡಿ…: ಇಡೀ ಕೋಣೆಯನ್ನು ಅಥವ ಮನೆಯನ್ನೇ ಸೂರ್ಯಮುಖ ಆಗಿಸುವುದು ಕಷ್ಟ! ಹಾಗಾಗಿ ಕೆಲವಾರು ಕಿಟಕಿಗಳನ್ನಾದರೂ ಸೂರ್ಯ ಕಿರಣಗಳು ಬೀಳುವ ದಿಕ್ಕಿನತ್ತ ವಾಲಿಸಿದರೆ, ಮನೆಯ ಒಂದು ಭಾಗವಾದರೂ ಬೆಚ್ಚಗಿರುತ್ತದೆ. ಹೀಗಾಗಿ ನಾವು ಕಿಟಕಿಗಳನ್ನು ಇಲ್ಲವೇ ಸಾಧ್ಯವಾದರೆ ಕೋಣೆಯನ್ನು ಸೂರ್ಯ ಚಳಿಗಾಲದಲ್ಲಿ ಇರುವ ಕಡೆ, ತಿರುಗಿಸಬಹುದು. ಆಗ ನಮಗೆ ಸೂರ್ಯ ಕಿರಣಗಳು ನೇರವಾಗಿ ಮನೆಯನ್ನು ಪ್ರವೇಶಿಸಲು ಸುಲಭವಾಗುತ್ತದೆ.
ನೇರ ಬಿಸಿಲೋ ಇಲ್ಲ ಶಾಖ ಮಾತ್ರ ಸಾಕೇ?: ಎಲ್ಲ ಪ್ರದೇಶದಲ್ಲೂ ನೇರವಾಗಿ ಸೂರ್ಯ ಕಿರಣಗಳು ಬೀಳುವುದು ಅಷ್ಟೊಂದು ಅನುಕೂಲಕರ ಅಲ್ಲ. ಕೆಲವೊಂದು ಪ್ರದೇಶಗಳಲ್ಲಿ, ಅದರಲ್ಲೂ ನೀವು ಮನೆಯೊಳಗೆ ಒಂದಷ್ಟು ಹಸಿರು ಬೆಳೆಸಿದ್ದರೆ, ಅದಕ್ಕೆ ನೇರವಾಗಿ ಕಿರಣಗಳು ತಾಗಿ ನಂತರ ಪ್ರತಿಫಲಿಸಿದರೆ ಹೆಚ್ಚು ಅನುಕೂಲಕರ. ನಾವು ಮಲಗುವ ಸ್ಥಳ, ಓದಿ ಬರೆಯುವ ಸ್ಥಳಕ್ಕೂ ನೇರವಾಗಿ ಸೂರ್ಯ ಕಿರಣಗಳು ಬೀಳದಂತೆ ವಿನ್ಯಾಸ ಮಾಡುವುದು ಉತ್ತಮ. ಮನೆಯೊಳಗೆ ಸಾಕಷ್ಟು ಬೆಳಕು ಬೀಳುತ್ತಲಿದ್ದು, ಶಾಖ ಮಾತ್ರ ಬೇಕಿದ್ದರೆ, ಕೆಲವೊಂದು ಗೋಡೆಗಳ ಮೇಲೆ ಸೂರ್ಯ ಕಿರಣಗಳು ಬೀಳುವಂತೆಯೂ ಮಾಡಬಹುದು. ಈ ಗೋಡೆಗಳು ಸಾಕಷ್ಟು ಶಾಖವನ್ನು ಹೀರಿಕೊಂಡು, ನಿಧಾನವಾಗಿ ಮನೆಯವರನ್ನು ರಾತ್ರಿಯಿಡೀ ಬೆಚ್ಚಗಿಡುತ್ತದೆ.
ಹೆಚ್ಚಿನ ಮಾಹಿತಿಗೆ: 9844132826
* ಆರ್ಕಿಟೆಕ್ಟ್ ಕೆ. ಜಯರಾಮ್