ಬೇಲೂರು: ಪುರಸಭಾ ಚುನಾವಣೆ ಸಂಬಂಧ ವಾರ್ಡ್ ವಾರು ಮೀಸಲು ನಿಗದಿ ಸಮರ್ಪಕವಾಗಿಲ್ಲ, ಹೀಗಾಗಿ ಬದಲಾವಣೆ ಮಾಡುವಂತೆ ತಾಲೂಕು ಬಿಜೆಪಿ ಅಧ್ಯಕ್ಷ ಅಡಗೂರು ಆನಂದ್ ನೇತೃತ್ವದ ನಿಯೋಗ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂಗೆ ಮನವಿ ಸಲ್ಲಿಸಿತು.
ಪಟ್ಟಣದ 23 ವಾರ್ಡ್‌ಗೆ ಮೀಸಲು ನಿಗದಿಮಾಡಿ ಸರ್ಕಾರ ರಾಜಸ್ವ ಪತ್ರ ಹೊರಡಿಸಿದ್ದು, ಅದರಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿವೆ. ಇದರಿಂದ ವೀರಶೈವರು,ಬ್ರಾಹ್ಮಣ,ಒಕ್ಕಲಿಗರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ನಿಯಮಾನುಸಾರ ಶೇ.50 ಮಹಿಳಾ ಮೀಸಲಾತಿ ಇಲ್ಲ. ಪರಿಶಿಷ್ಟ ಜಾತಿ, ವರ್ಗದ ಮತದಾರರು ಇರುವ ವಾರ್ಡ್ ಅನ್ನು ಸಾಮಾನ್ಯ ವಾರ್ಡ್ ಆಗಿ ಮಾರ್ಪಡಿಸಿದ್ದು, ಸಾಮಾನ್ಯ ವರ್ಗದವರು ಇರುವ ವಾರ್ಡ್‌ಅನ್ನು ಪರಿಶಿಷ್ಟ ಜಾತಿಗೆ ಮೀಸಲಿಡಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.
ವಾರ್ಡ್ 21, 22 ಸಾಮಾನ್ಯ ಮಹಿಳೆಗೆ,ವಾರ್ಡ್ 23 ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದೆ. ಈ ಮೂರೂ ವಾರ್ಡ್‌ಗಳಲ್ಲಿ ಶೇ.80ಕ್ಕಿಂತಲೂ ಹೆಚ್ಚು ಮತದಾರರು ಅಲ್ಪ ಸಂಖ್ಯಾತರಾಗಿದ್ದಾರೆ. ವಾರ್ಡ್ 22, 23ರಲ್ಲಿ ಇದುವರೆಗೆ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳು ಅಲ್ಪಸಂಖ್ಯಾತರೇ ಆಗಿದ್ದಾರೆ. ಈ ವಾರ್ಡ್‌ಗಳಿಗೆ ಸಾಮಾನ್ಯ ಮೀಸಲಿನ ಅಗತ್ಯ ಇಲ್ಲದಿದ್ದರೂ ನಿಗದಿಪಡಿಸಲಾಗಿದೆ ಎಂದು ವಿವರಿಸಿದ್ದಾರೆ.
ಈಗಿನ ಮತದಾರರ ಪಟ್ಟಿಯಲ್ಲಿನ ಹೆಸರುಗಳು ಎರಡು ವಾರ್ಡ್‌ಗಳಲ್ಲಿ ಇದೆ. ವಾರ್ಡ್ 19ರಲ್ಲಿ 40 ಮತದಾರರ ಹೆಸರು ಬದಲಾವಣೆ ಆಗಿದೆ. ತಂದೆ,ಗಂಡನ ಹೆಸರು ಬೇರೆ ಆಗಿರುವುದು ಇದೆ ಎಂದು ದೂರಿನಲ್ಲಿ ಮುಖಂಡರು ಉಲ್ಲೇಖಿಸಿದ್ದಾರೆ.
ದೂರು ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ಮೀಸಲು ನಿಗದಿಯಲ್ಲಿ ಆಗಿರುವ ವ್ಯತ್ಯಾಸ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಗೋಪಾಲಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್, ಮಹಿಳಾ ಮೋರ್ಚಾ ಕೋಶಾಧ್ಯಕ್ಷೆ ಸುರಭಿ ರಘು ಗಮನಕ್ಕೆ ತರಲಾಗಿದೆ ಎಂದು ಅಡಗೂರು ಆನಂದ್ ತಿಳಿಸಿದರು.
ಇದನ್ನೂ ಓದಿ :ನಾನು ಇರುವವರೆಗೂ ಜಿ.ಟಿ.ಡಿ ಯನ್ನು ವಾಪಸ್ ಜೆಡಿಎಸ್‌ಗೆ ಸೇರಿಸಿಕೊಳ್ಳುವುದಿಲ್ಲ: HDK ಆಕ್ರೋಶ
ನಿಯೋಗದಲ್ಲಿ ನಗರ ಬಿಜೆಪಿ ಅಧ್ಯಕ್ಷ ವಿನಯ್, ಎಪಿಎಂಸಿ ಮಾಜಿ ಸದಸ್ಯ ಪೈಂಟ್‌ರವಿ, ಪ್ರಮುಖರಾದ ವಿಷ್ಣು, ಜಯಕುಮಾರ್, ವಕೀಲ ಜಯಶಂಕರ್, ಜಿತೇಂದ್ರ, ರಂಗನಾಥ್ ಮತ್ತಿತರರಿದ್ದರು.