Advertisement

ವಾರಂಬಳ್ಳಿ: ಘನ ದ್ರವ ಸಂಪನ್ಮೂಲ ನಿರ್ವಹಣೆ

02:27 PM Dec 28, 2017 | |

ಬ್ರಹ್ಮಾವರ: ಜಿಲ್ಲೆಯ ಬಹುದೊಡ್ಡ ಸವಾಲಾಗಿರುವ ತ್ಯಾಜ್ಯರಾಶಿಯ ಸಮಸ್ಯೆಗೆ ಪರಿಹಾರ ನೀಡುವ ಆಶಯದೊಂದಿಗೆ ರೂಪಿಸಲಾದ ಘನ ದ್ರವ ಸಂಪನ್ಮೂಲ ನಿರ್ವಹಣ ಯೋಜನೆ ಹೊಸ ಭರವಸೆಯನ್ನು ಮೂಡಿಸಿದೆ.  ಸ್ವಚ್ಛ ಉಡುಪಿ ಮಿಷನ್‌ ಶೀರ್ಷಿಕೆಯಡಿ ಜಿಲ್ಲಾ ಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರ ವಿಶೇಷ ಕಾಳಜಿ ಹಾಗೂ ವೆಲ್ಲೂರು ಶ್ರೀನಿವಾಸನ್‌ ಅವರ ಮಾರ್ಗದರ್ಶನದೊಂದಿಗೆ ಜಿಲ್ಲೆಯ ವಿವಿಧ ಗ್ರಾ.ಪಂ.ಗಳಲ್ಲಿ  ಹಂತ ಹಂತವಾಗಿ ಅನುಷ್ಠಾನಕ್ಕೆ ಬರುತ್ತಿದೆ. ಪೈಲಟ್‌ ಯೋಜನೆಗಾಗಿ ಆಯ್ಕೆ ಮಾಡಲಾಗಿದ್ದ ಪಂಚಾಯತ್‌ಗಳ ಪೈಕಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟನೆಗೊಂಡ ವಾರಂಬಳ್ಳಿ ಎಸ್‌.ಎಲ್‌.ಆರ್‌.ಎಂ. ಘಟಕ ಇದೀಗ ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ಜಿಲ್ಲೆ ಹಾಗೂ ರಾಜ್ಯದ ಗಮನ ಸೆಳೆಯುತ್ತಿದೆ.

Advertisement

ಘಟಕದ ಕಾರ್ಯನಿರ್ವಹಣೆ
ಪ್ರಸ್ತುತ 16 ಕಾರ್ಯಕರ್ತರು ಕೆಲಸ ನಿರ್ವಹಿಸುತ್ತಿರುವ ಈ ಘಟಕದಲ್ಲಿ  ಬೆಳಗ್ಗೆ ಹಾಗೂ ಸಂಜೆಯ ಎರಡು ಅವ ಧಿಗಳಲ್ಲಿ  ಗ್ರಾಮದ ಮನೆಗಳು, ವಾಣಿಜ್ಯ ಸಂಕೀರ್ಣಕ್ಕೆ ತೆರಳಿ ತ್ಯಾಜ್ಯ ಸಂಗ್ರಹ ಮಾಡಲಾಗುತ್ತಿದೆ. ತರಬೇತಿಯ ಹಿನ್ನೆಲೆಯಲ್ಲಿ  ವೈಜ್ಞಾನಿಕವಾಗಿ ಬೇರ್ಪಡಿಸಿ ನಿರ್ವಹಣೆ ಮಾಡಲಾಗುತ್ತಿದೆ. ಅನಂತರ ಸಾಮಗ್ರಿಗಳನ್ನು ಮಾರಾಟ ಹಾಗೂ ಮರುಬಳಕೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ವಾರಂಬಳ್ಳಿ ಗ್ರಾ.ಪಂ. ಯಶಸ್ಸಿಗೆ ಶ್ರಮಿಸುತ್ತಿದೆ.

ಶೀಘ್ರದಲ್ಲೇ ವಿಸ್ತರಣೆ
ವಾರಂಬಳ್ಳಿ ಪಂಚಾಯತ್‌ ವ್ಯಾಪ್ತಿಯಲ್ಲಿ ಎಲ್ಲ ವಾರ್ಡ್‌ಗಳಿಗೂ ಯೋಜನೆಯನ್ನು ಶೀಘ್ರದಲ್ಲೇ ವಿಸ್ತರಿಸುವ ಭರವಸೆಯನ್ನು ಪಂಚಾಯತ್‌ ಆಡಳಿತ ಹೊಂದಿದೆ. ದಾನಿಗಳ ಸಹಕಾರವೂ ಇರುವುದರಿಂದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಕಸದಿಂದ ರಸ
ದ್ರವತ್ಯಾಜ್ಯ ನಿರ್ವಹಣೆಯ ಮಾದರಿಯನ್ನು ನೈಸರ್ಗಿಕವಾಗಿ ಇಲ್ಲಿ ರೂಪಿಸಲಾಗಿದೆ. ಕಾಬಾಳೆಗಿಡ, ಕಾಂಪೋಸ್ಟ್‌  ತೊಟ್ಟಿಯ ಮೂಲಕ ಹೊಸ ಪ್ರಯತ್ನಗಳು ನಿರಂತರವಾಗಿ ಸಾಗಿವೆ. ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಪಂಚಾಯತ್‌ಗೆ ಗ್ರಾಮವಿಕಾಸ ಯೋಜನೆಯನ್ನು ಮಂಜೂರು ಮಾಡಿರುವುದರಿಂದ ಬಯೋಗ್ಯಾಸನ್ನು ತ್ಯಾಜ್ಯದಿಂದ ತಯಾರಿಸುವ ಯೋಜನೆಗೂ ಪಂಚಾಯತ್‌ ಚಿಂತನೆ ನಡೆಸಿದೆ. ಉಡುಪಿಯ ಕೈಗಾರಿಕಾ ತರಬೇತಿ ಕಾಲೇಜು ಮಾದರಿಯಾದ ತ್ರಿಚಕ್ರವಾಹನವನ್ನು ರೂಪಿಸಿಕೊಟ್ಟಿದ್ದು ವೆಲ್ಲೂರು ಮಾದರಿಗೆ ಪೂರಕವಾಗಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಬಂದಿ ಕ್ರಿಯಾಶೀಲರಾಗಿದ್ದು ಹೂವಿನ ತ್ಯಾಜ್ಯದಿಂದ ರಂಗೋಲಿ ಪುಡಿ ತಯಾರಿಸುವ ಹಾಗೂ ಸಾವಯವ ವಸ್ತುಗಳಿಂದ ಆಲಂಕಾರಿಕ ವಸ್ತುಗಳನ್ನು  ತಯಾರಿಸುವ ಕಾರ್ಯವನ್ನು ಪ್ರಾರಂಭಿಸಿದ್ದು, ಯೋಜನೆಯ ಯಶಸ್ಸಿಗೆ ಪೂರಕವಾಗಿ ಸ್ಪಂದಿಸಿದ್ದಾರೆ.

ಉತ್ಪನ್ನಗಳ ತಯಾರಿ
ಕೃಷಿ ಪೂರಕ ಔಷಧೋತ್ಪನ್ನಗಳ ತಯಾರಿ ಹಾಗೂ ಮಾರಾಟಕ್ಕೂ ಸಿದ್ಧತೆ ನಡೆದಿದೆ. ಈ ಬಗ್ಗೆ ತರಬೇತಿಯನ್ನು ಪಡೆದ ಕಾರ್ಯಕರ್ತರು ಉತ್ಪನ್ನ ಸಿದ್ಧಪಡಿಸಲು ತೊಡಗಿದ್ದಾರೆ. ಜಿಲ್ಲೆಯ 30ಕ್ಕೂ ಅ ಧಿಕ  ಗ್ರಾ.ಪಂ.ಗಳಿಂದ ಜನಪ್ರತಿನಿಧಿ ಗಳು ಹಾಗೂ ಅಧಿ ಕಾರಿಗಳು ಭೇಟಿ ನೀಡಿ ತಮ್ಮ ಭಾಗದಲ್ಲೂ ಅನುಷ್ಠಾನಕ್ಕೆ ಯೋಜನೆ ರೂಪಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. 

Advertisement

ಕಾಲಮಿತಿಯ ಅನುಷ್ಠಾನ
 ವಾರಂಬಳ್ಳಿ ಗ್ರಾ.ಪಂ.ನ ಎಸ್‌.ಎಲ್‌.ಆರ್‌.ಎಂ. ಘಟಕ ಮಾದರಿಯಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಜಿಲ್ಲೆಯ ಎಲ್ಲ ಪಂಚಾಯತ್‌ಗಳ ಪ್ರತಿನಿಧಿಗಳು ಇಲ್ಲಿಗೆ ಭೇಟಿ ನೀಡಲು ಆದೇಶಿಸಲಾಗಿದೆ. ಲೋಕಾಯುಕ್ತರೂ ಘನ ದ್ರವ ಸಂಪನ್ಮೂಲ ನಿರ್ವಹಣೆಯ ನಿಟ್ಟಿನಲ್ಲಿ ಕಾಲಮಿತಿಯ ಅನುಷ್ಠಾನಕ್ಕೆ ಸೂಚಿಸಿದ್ದಾರೆ.
ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಉಡುಪಿ ಜಿಲ್ಲಾಧಿಕಾರಿ

ನಿರಂತರ ಪ್ರಯತ್ನ
ವಾರಂಬಳ್ಳಿ ಗ್ರಾ.ಪಂ. ಎಸ್‌.ಎಲ್‌.ಆರ್‌.ಎಂ. ಯೋಜನೆಯನ್ನು ಯಶಸ್ವಿಗೊಳಿಸಲು ಕ್ರಿಯಾಯೋಜನೆ ರೂಪಿಸಿದ್ದು ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ನಿರಂತರ ಪ್ರಯತ್ನಶೀಲವಾಗಿದೆ. ನಾಗರಿಕರ ಸಹಕಾರ, ದಾನಿಗಳ ನೆರವು ನಮ್ಮ ಭರವಸೆಯನ್ನು ಹೆಚ್ಚಿಸಿದೆ.
ನವೀನ್‌ಚಂದ್ರ ನಾಯಕ್‌, ವಾರಂಬಳ್ಳಿ ಗ್ರಾ.ಪಂ. ಅಧ್ಯಕ್ಷ

ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next