ಬೆಂಗಳೂರು: ಎಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜುಗಳ ನಿರ್ದೇಶಕರ ಜೊತೆ ಸಭೆ ನಡೆಸಲಾಗಿದೆ. ಕೋವಿಡ್-19 ಹೇಗೆ ನಿಗ್ರಹ ಮಾಡಬೇಕು ಎಂಬುದರ ಕುರಿತು ಚರ್ಚೆ ಮಾಡಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದರು.
ವಿಧಾನಸೌಧದಲ್ಲಿಂದು ಅಧಿಕಾರಿಗಳ ಜೊತೆ ಸಭೆಯ ನಡೆಸಿ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್-19 ವಾರ್ ರೂಂಗಳ ಆರಂಭ ಮತ್ತು ಪರೀಕ್ಷಾ ಕೇಂದ್ರಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇನ್ನು ಹಾಸನ, ಮಂಗಳೂರು, ಹುಬ್ಬಳ್ಳಿ, ಕಲಬುರಗಿ ಸೇರಿ ಅನೇಕ ಕಡೆ ಮಾಡುತ್ತಿದ್ದೇವೆ. ಪ್ರತಿ ಜಿಲ್ಲೆಯಲ್ಲೂ ಹೆಲ್ಪ್ ಡೆಸ್ಕ್ ಆರಂಭಿಸಲು ತೀರ್ಮಾನ ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲೂ 150-250 ಪ್ರತ್ಯೇಕ ಬೆಡ್ ವ್ಯವಸ್ಥೆ ಮಾಡಲಾಗುವುದು. ಪ್ರತಿ ದಿನವೂ ವಿಡಿಯೋ ಕಾನ್ಫರೆನ್ಸ್ ನಡೆಸುತ್ತೇವೆ ಎಂದು ಹೇಳಿದರು.
ಸದ್ಯ ಕಲಬುರಗಿ ಪ್ರಕರಣದಲ್ಲಿ ಮತ್ತೊಬ್ಬರಿಗೆ ವೈರಸ್ ಪತ್ತೆಯಾಗಿದೆ. ಮೃತ ವೃದ್ಧನ ಹಾರೈಕೆ ಮಾಡುತ್ತಿದ್ದ ಮಗಳಿಗೆ ವೈರಸ್ ತಗುಲಿದೆ. ಆಕೆಯೂ 77 ಜನರ ಜತೆ ಪ್ರಾಥಮಿಕ ಸಂಪರ್ಕ ಇದ್ದರು. 277 ಜನರ ಜತೆ ದೂರದಿಂದ ಸಂಪರ್ಕದಲ್ಲಿ ಇದ್ದರು. ಅವರ ಮೇಲೂ ಇಲಾಖೆ ನಿಗಾ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಂತೆಯೇ, ಸೂಪರ್ ಮಾರ್ಕೆಟ್ ಗಳು ತೆರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರು ಸಭೆ ನಡೆಸಲಿದ್ದಾರೆ. ಅಲ್ಲಿ ಚರ್ಚಿಸಿ ಅವುಗಳನ್ನು ಮುಚ್ಚಬೇಕಾ, ಬೇಡವೋ ಎಂಬುದರ ಬಗ್ಗೆ ತೀರ್ಮಾನ ಮಾಡಲಾಗುವುದು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸಿಎಂ ಮಾರ್ಗದರ್ಶನ ಕೊಡಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ನುಡಿದರು.